ರಾಷ್ಟ್ರೀಯ

ಹಿಂದಿನ ಪ್ರಧಾನಿಗಳ ದಾಖಲೆಗಳನ್ನು ಮುರಿದ ಮೋದಿ ವಿದೇಶಿ ಪ್ರವಾಸ

Pinterest LinkedIn Tumblr

Modi Tour

ನವದೆಹಲಿ, ಮೇ 7: ಬಹು ನಿರೀಕ್ಷೆಯೊಂದಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರಮೋದಿ ವಿದೇಶ ಪ್ರವಾಸ ಈ ಹಿಂದಿನ ಪ್ರಧಾನಿಗಳ ಎಲ್ಲ ದಾಖಲೆಗಳನ್ನು ಮುರಿದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಈ ಹಿಂದೆ ಆಡಳಿತ ನಡೆಸಿದ ಯಾವುದೇ ಪ್ರಧಾನಿಗಳು ವಿದೇಶ ಪ್ರವಾಸ ಕೈಗೊಂಡಿರಲಿಲ್ಲ. ಸತತ 16 ವರ್ಷಗಳ ಕಾಲ ಆಡಳಿತದಲ್ಲಿದ್ದ ದೇಶದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು, ಅವರ ಪುತ್ರಿ ಇಂದಿರಾಗಾಂಧಿ ಕೂಡ ಇಷ್ಟೊಂದು ಪ್ರವಾಸ ಮಾಡಿರಲಿಲ್ಲ.

ಆಕಸ್ಮಿಕವಾಗಿ ದೇಶದ ಪ್ರಧಾನಿಯಾದ ಆರ್ಥಿಕ ತಜ್ಞ ಡಾ.ಮನಮೋಹನ್‌ಸಿಂಗ್ ಹತ್ತು ವರ್ಷಗಳ ಕಾಲ ಪ್ರಧಾನಿಯಾದರೂ ವಿದೇಶ ಪ್ರವಾಸ ಕೈಗೊಂಡಿದ್ದು ತೀರಾ ಕಡಿಮೆ ಎನ್ನಬಹುದು. 2014 ಮೇ 26ರಂದು ದೇಶದ 15ನೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರಮೋದಿ ಅತ್ಯಲ್ಪ ಅವಧಿಯಲ್ಲೇ ಅತಿ ಹೆಚ್ಚು ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಅವರು ಮೊಟ್ಟ ಮೊದಲ ವಿದೇಶ ಪ್ರವಾಸಕ್ಕೆ ಹೊರಟಿದ್ದು, ಭಾರತದ ನೆರೆಯ ರಾಷ್ಟ್ರ ಭೂತಾನಕ್ಕೆ. ಅಲ್ಲಿಂದ ಆರಂಭವಾದ ಅವರ ವಿದೇಶ ಪ್ರಯಾಣ ಇದೀಗ 14ರಂದು ಚೀನಾ, ಕಾಂಬೋಡಿಯಾ, ಜೆಕ್ ಗಣರಾಜ್ಯಕ್ಕೆ ಶುರುವಾಗುತ್ತಿದೆ. 2014 ಜೂನ್ 16ರಂದು ಭೂತಾನ್‌ಗೆ ಮೊದಲ ವಿದೇಶಯಾನ ಆರಂಭಿಸಿದ ಮೋದಿಯವರ ನಾಗಾಲೋಟ ಈವರೆಗೂ ನಿಂತಿಲ್ಲ. ಕಾಲಿಗೆ ಶ್ರೀಕೃಷ್ಣನ ಚಕ್ರ ಕಟ್ಟಿಕೊಂಡವರಂತೆ ವಿದೇಶ ಸುತ್ತುತ್ತಿರುವುದು ವಿರೋಧ ಪಕ್ಷಗಳ ಕಣ್ಣು ಕೆಂಪಾಗಿಸಿದೆ. ಇತ್ತೀಚೆಗಷ್ಟೆ ಲೋಕಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಕೂಡ ಪ್ರಧಾನಿ ವಿದೇಶ ಪ್ರವಾಸವನ್ನು ಟೀಕೆ ಮಾಡಿದ್ದರು. ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿದೇಶಕ್ಕೆ ತೆರಳಲು ಪ್ರಧಾನಿಗೆ ಸಮಯ ಸಿಗುತ್ತದೆ. ಆದರೆ, ನಾಡಿನ ಅನ್ನದಾತನನ್ನು ಭೇಟಿ ಮಾಡಲು ಸಮಯಾವಕಾಶವಿಲ್ಲ ಎಂದು ಆರೋಪ ಮಾಡಿದ್ದರು.

ಆದರೆ, ಇದಾವುದನ್ನೂ ಲೆಕ್ಕಿಸದ ಮೋದಿ ತಮ್ಮ ವಿದೇಶ ಪ್ರವಾಸವನ್ನು ಮುಂದುವರಿಸಿದ್ದಾರೆ. ಭೂತಾನ್ ಬಳಿಕ ಮೋದಿ ಜುಲೈ 13ರಿಂದ 16ರ ವರೆಗೆ ಬ್ರಿಕ್ಸ್ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಬ್ರೆಜಿಲ್ ಪ್ರವಾಸ ಆರಂಭಿಸಿದರು.

ಆಗಸ್ಟ್‌ನಲ್ಲಿ ನೇಪಾಳ, ಜಪಾನ್ ಪ್ರವಾಸ ಮಾಡಿದರು. ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಅಮೆರಿಕ ಪ್ರವಾಸ ಮಾಡಿದ್ದು ಭಾರೀ ಪ್ರಚಾರ ಪಡೆದುಕೊಂಡಿತ್ತು.

ಅಮೆರಿಕ ಪ್ರವಾಸದ ನಂತರ ಮಯನ್ಮಾರ್, ಆಸ್ಟ್ರೇಲಿಯಾ, ಫಿಜಿ, ಸುವಾ, ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ, ಸಿಂಗಪುರ್, ಫ್ರಾನ್ಸ್, ಜರ್ಮನಿ, ಕೆನಡಾ ಪ್ರವಾಸ ಮಾಡಿದ್ದಾರೆ.

ಇನ್ನೂ ಇದೆ ವಿದೇಶ ಪ್ರವಾಸ:
ಈಗಾಗಲೇ ವಿದೇಶಾಂಗ ವ್ಯವಹಾರಗಳ ಇಲಾಖೆ ಮೋದಿಯವರ ವಿದೇಶ ಪ್ರವಾಸದ ಪಟ್ಟಿಯನ್ನು ಸಿದ್ಧಪಡಿಸಿದೆ. ಇದೇ 14 ರಿಂದ 16ರ ವರೆಗೆ ಚೀನಾ, 16 ರಿಂದ 17ರ ವರೆಗೆ ಮಂಗೋಲಿಯಾ, 17 ರಿಂದ 19ರ ವರೆಗೆ ದಕ್ಷಿಣ ಕೊರಿಯಾಕ್ಕೆ ತೆರಳಲಿದ್ದಾರೆ.

ಜುಲೈ 7 ರಿಂದ 10ರ ವರೆಗೆ ರಷ್ಯಾ, 11ರಂದು ಟರ್ಕಿಮ್‌ಸ್ಟನ್, ನವೆಂಬರ್ 15-16ರಂದು ಟರ್ಕಿಗೂ ತೆರಳಲಿದ್ದಾರೆ. ದುಬಾರಿಯಾದ ಮನಮೋಹನ್‌ಸಿಂಗ್: ಯುಪಿಎ ಅವಧಿಯಲ್ಲಿ ಎರಡು ಅವಧಿಗೆ ದೇಶದ ಚುಕ್ಕಾಣಿ ಹಿಡಿದಿದ್ದ ಮನಮೋಹನ್‌ಸಿಂಗ್ ವಿದೇಶ ಪ್ರವಾಸದ ವೆಚ್ಚವೇ ಬರೋಬ್ಬರಿ 620 ಕೋಟಿಯಾಗಿದೆ. 2005ರಿಂದ 2014ರ ವರೆಗೆ ಮನಮೋಹನ್‌ಸಿಂಗ್ ಅವರು ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ ಖರ್ಚು 620 ಕೋಟಿ ಎಂದು ಮಾಹಿತಿ ಹಕ್ಕು ಕಾಯ್ದೆಯಿಂದ ತಿಳಿದುಬಂದಿದೆ. ಈ ಹಿಂದೆ ಪ್ರಧಾನಿಯಾಗಿದ್ದ ಚಂದ್ರಶೇಖರ್, ಐ.ಕೆ.ಗುಜ್ರಾಲ್, ಎಚ್.ಡಿ.ದೇವೇಗೌಡ, ವಿ.ಪಿ.ಸಿಂಗ್ ಮತ್ತಿತರರು ತಮ್ಮ ಅಧಿಕಾರಾವಧಿಯಲ್ಲಿ ಸೀಮಿತ ರಾಷ್ಟ್ರಗಳಿಗೆ ಮಾತ್ರ ಭೇಟಿ ಕೊಟ್ಟಿದ್ದರು. ಯಾವುದೇ ಒಬ್ಬ ಪ್ರಧಾನಿ ತನ್ನ ಅಧಿಕಾರಾವಧಿಯಲ್ಲಿ ವಿದೇಶ ಪ್ರವಾಸ ಕೈಗೊಳ್ಳುವುದು ತಪ್ಪಲ್ಲ. ರಾಷ್ಟ್ರ-ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲು ಇದು ಅಗತ್ಯ ಎನ್ನುವುದು ತಜ್ಞರ ಅಭಿಪ್ರಾಯ.

Write A Comment