ಕರ್ನಾಟಕ

ಪುಂಡುಪೋಕರಿಗಳ ಕಡಿವಾಣಕ್ಕೆ ದೂರು ಪೆಟ್ಟಿಗೆ: ಶಿವಮೊಗ್ಗ ಪೊಲೀಸರಿಂದ ಹೊಸ ಪ್ರಯೋಗ

Pinterest LinkedIn Tumblr

complaint-box

ಶಿವಮೊಗ್ಗ: ಹೆಣ್ಣು ಮಕ್ಕಳನ್ನು ಚುಡಾಯಿಸುವ ರೋಡ್‌ರೋಮಿಯೊಗಳ, ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಕಾಮುಕರ, ಶಾಲಾ-ಕಾಲೇಜುಗಳ ಬಳಿ ವಿದ್ಯಾರ್ಥಿನಿಯರ ಬೆನ್ನು ಬೀಳುವ ಪುಂಡು-ಪೋಕರಿಗಳ ಕೃತ್ಯಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ‘ದೂರು ಪೆಟ್ಟಿಗೆ’ ಸ್ಥಾಪನೆ ಮಾಡಿದೆ.

ಈ ದೂರು ಪೆಟ್ಟಿಗೆಗಳಿಗೆ ನೊಂದವರು ತಮಗೆ ಕಿರುಕುಳ ನೀಡಿದ ವ್ಯಕ್ತಿಗಳ ವಿವರಗಳನ್ನು ಬರೆದು ಹಾಕಬಹುದಾಗಿದೆ. ಹಾಗೆಯೇ ತಮ್ಮ ಬಡಾವಣೆಯ ಸುತ್ತಮುತ್ತ ನಡೆಯುತ್ತಿರುವ ಅನೈತಿಕ, ಅಕ್ರಮ ಚಟುವಟಿಕೆಗಳ ಕುರಿತಂತೆ ಮಾಹಿತಿ ನೀಡಬಹುದಾಗಿದೆ. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಸೂಕ್ತ ಕ್ರಮ ಜರಗಿಸಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ದೂರು ಪೆಟ್ಟಿಗೆಗಳಿಗೆ ದೂರು ಪತ್ರ ಹಾಕುವವರ ಬಗ್ಗೆ ಪೊಲೀಸರಿಗಾಗಲಿ ಅಥವಾ ಆರೋಪಿಗಳಿಗಾಗಲಿ ಮಾಹಿತಿ ಇಲ್ಲದೆ ಇರುವುದರಿಂದ ನಾಗರಿಕರು ಯಾವುದೇ ಅಂಜಿಕೆ, ಭಯವಿಲ್ಲದೆ ದೂರು ಪತ್ರಗಳನ್ನು ಈ ಪೆಟ್ಟಿಗೆಗೆ ಹಾಕಬಹುದಾಗಿದೆ.

ಜಿಲ್ಲೆಯಲ್ಲಿ ನಿರ್ಭೀತ ವಾತಾವರಣ ರೂಪಿಸಲು, ಪುಂಡುಪೋಕರಿಗಳ ಹಾವಳಿಗೆ ಕಡಿವಾಣ ಹಾಕಲು ಹಾಗೂ ಹೆಣ್ಣುಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಯಾವುದೇ ಭಯ-ಆತಂಕಕ್ಕೆ ಒಳಗಾಗದೆ ಜೀವನ ನಡೆಸಬೇಕೆಂಬ ಉದ್ದೇಶದಿಂದ ಈ ದೂರು ಪೆಟ್ಟಿಗೆ ವ್ಯವಸ್ಥೆ ಆರಂಭಿಸಲಾಗಿದೆ. ನಾಗರಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮಾಹಿತಿ ನೀಡಿದರು.

ತಮಗೆ ಆಗುತ್ತಿರುವ ತೊಂದರೆಯ ಕುರಿತಂತೆ ಎಷ್ಟೋ ನಾಗರಿಕರು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಲು ಹಿಂಜರಿಯುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ತಮ್ಮ ಗುರುತು ಬಹಿರಂಗಪಡಿಸಲು ಅವರಿಗೆ ಇಷ್ಟವಿರುವುದಿಲ್ಲ. ಅಂತಹ ನಾಗರಿಕರಿಗಾಗಿ ಈ ದೂರು ಪೆಟ್ಟಿಗೆ ಸ್ಥಾಪಿಸಲಾಗಿದೆ ಎಂದು ಚೆನ್ನಣ್ಣನವರ್ ತಿಳಿಸಿದರು. ತಮ್ಮ ಪ್ರದೇಶಗಳಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಬರೆದು ಈ ದೂರು ಪೆಟ್ಟಿಗೆಗೆ ಹಾಕಬಹುದಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಗೆ ನಾಗರಿಕರು ಅಗತ್ಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.

ಎಲ್ಲೆಲ್ಲಿವೆ?
ದೂರು ಪೆಟ್ಟಿಗೆಗಳು ಇಡಲಾಗಿರುವ ಸ್ಥಳಗಳು ಈ ಮುಂದಿನಂತಿವೆ. ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆ, ಮುಖ್ಯ ಬಸ್ ನಿಲ್ದಾಣ, ಸಹ್ಯಾದ್ರಿ ಕಾಲೇಜ್, ಮಹಾತ್ಮ ಗಾಂಧಿ ಪಾರ್ಕ್, ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಂ ಸರ್ಕಲ್, ದೇವರಾಜ ಅರಸ್ ರಸ್ತೆಯ ಕಸ್ತೂರಬಾ ಹಾಸ್ಟೆಲ್, ಕುವೆಂಪು ರಂಗಮಂದಿರ ಸಮೀಪದ ಎಟಿಎನ್‌ಸಿಸಿ ಕಾಲೇಜ್, ಕೃಷ್ಣಕೆಫೆ ಬಸ್‌ನಿಲ್ದಾಣ, ಅಣ್ಣಾನಗರ ಚಾನೆಲ್, ಗೋಪಾಳದ ಬಸ್‌ನಿಲ್ದಾಣ, ವಿನೋಬಾನಗರದ ಪೊಲೀಸ್ ಚೌಕಿ, ಸೋಮಿನಕೊಪ್ಪ ಬಡಾವಣೆ, ಪೃಥ್ವಿ ಮಾನ್ಷನ್ ಬಿಲ್ಡಿಂಗ್. ಸಾಗರ ರಸ್ತೆಯ ಪೆಸೆಟ್ ಕಾಲೇಜ್, ಗೋಪಾಳದ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್, ಬಿ.ಎಚ್.ರಸ್ತೆಯ ಮೀನಾಕ್ಷಿ ಭವನ, ಕಸ್ತೂರಬಾ ಕಾಲೇಜಿನ ಎದುರು, ರಾಗಿಗುಡ್ಡ, ಚಿಕ್ಕಲ್, ಮಿಳಘಟ್ಟ ಬಸ್ ನಿಲ್ದಾಣ, ಗಾಂಧಿಬಝಾರ್, ಮಂಡ್ಲಿ ಸರ್ಕಲ್.

ಭದ್ರಾವತಿ:
ಬಸವೇಶ್ವರ ಸರ್ಕಲ್, ಸೀಗೆಬಾಗಿ ಬಸ್‌ನಿಲ್ದಾಣ, ಎನ್.ಎಂ.ಸಿ. ರಸ್ತೆಯ ತಮಿಳು ಶಾಲೆಯ ಎದುರು, ಮಾವಿನಕೆರೆ ಗ್ರಾಮದ ಬಸ್‌ನಿಲ್ದಾಣ.

ಹೊಸನಗರ: 

ಹೊಸನಗರ ಬಸ್‌ನಿಲ್ದಾಣ, ಬಟ್ಟೆಮಲ್ಲಪ್ಪ ಸರ್ಕಲ್, ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರ ಬಸ್‌ಸ್ಟಾಂಡ್, ನಿಟ್ಟೂರು ಬಸ್‌ಸ್ಟಾಂಡ್, ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿನಾಯಕ ಸರ್ಕಲ್, ಸರಕಾರಿ ಜ್ಯೂನಿಯರ್ ಕಾಲೇಜು ಮುಂಭಾಗ.

ತೀರ್ಥಹಳ್ಳಿ:
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಮೇಗರವಳ್ಳಿಯ ಗರ್ಲ್ಸ್ ಜ್ಯೂನಿಯರ್ ಕಾಲೇಜ್, ಆಗುಂಬೆ ಬಸ್ ನಿಲ್ದಾಣಗಳಲ್ಲಿ ಈ ದೂರು ಪೆಟ್ಟಿಗೆ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.

Write A Comment