ಬೆಂಗಳೂರು: ಬೆಂಗಳೂರನ್ನು ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿದ್ದೇ ತಪ್ಪು ನಿರ್ಧಾರ. ಹೀಗಾಗಿ ಬೆಂಗಳೂರು ಯೋಜನಾ ಬದ್ಧವಾಗಿ ಬೆಳೆದಿಲ್ಲ. ಇದಕ್ಕಾಗಿ ಬಿಬಿಎಂಪಿ ವಿಭಜನೆಯ ನಮ್ಮ ನಿರ್ಧಾರ ಸರಿಯಾಗಿಯೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ನಮ್ಮ ಮೆಟ್ರೋ ಮಾರ್ಗ ರೀಚ್ 3ಬಿ ಅನಾವರಣ ಸಮಾರಂಭದಲ್ಲಿ ಮಾತನಾಡಿ, ಬೆಂಗಳೂರು ಮೊದಲು ಕೇವಲ 220 ಚದರ ಕಿಮೀ ವ್ಯಾಪ್ತಿ ಹೊಂದಿತ್ತು. ಆದರೆ, 2007ರಲ್ಲಿ 110 ಹಳ್ಳಿ, 7 ನಗರಸಭೆ, 1 ಪುರಸಭೆಯನ್ನು ಸೇರಿಸಿಕೊಳ್ಳುವ ಮೂಲಕ 800 ಚದರ ಕಿಮೀ ವ್ಯಾಪ್ತಿಯನ್ನಾಗಿ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಸೃಷ್ಟಿಸಲಾಯಿತು.
ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ, ರಸ್ತೆಗಳ ವ್ಯವಸ್ಥೆ ಹದಗೆಟ್ಟಿದೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಆಡಳಿತಾತ್ಮಕ ವಿಕೇಂದ್ರೀಕರಣ ಮಾಡದಿದ್ದರೆ ಇದೇ ಸ್ಥಿತಿ ಮುಂದುವರೆಯಲಿದೆ. ಈ ನಿರ್ಧಾರಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ವಿಭಜನೆಯಾಗದೆ ಅಭಿವೃದ್ಧಿ ಅಸಾಧ್ಯ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ತೆರಿಗೆ ಕಟ್ಟಿ, ಅಭಿವೃದ್ಧಿ ಮಾಡ್ತೇವೆ
ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಆಸ್ತಿಗಳಿವೆ. ಆದರೆ, ಎಲ್ಲರೂ ತೆರಿಗೆ ಕಟ್ಟುತ್ತಿಲ್ಲ. ಈಗ ಸಂಗ್ರಹವಾಗುತ್ತಿರುವುದು ರು.1800 ಕೋಟಿ. ಇದು 13 ಲಕ್ಷ ಆಸ್ತಿಗಳ ತೆರಿಗೆಯಾಗಿದ್ದು, ಬೆಂಗಳೂರು ಅಭಿವೃದ್ಧಿಗೆ ರು.5,000 ಕೋಟಿಯಾದರೂ ಬೇಕು. ಹಾಗಾಗಿ ಪ್ರಸಕ್ತ ಸಾಲಿನಲ್ಲಿ ಎಲ್ಲರೂ ಆಸ್ತಿ ತೆರಿಗೆಯನ್ನು ಕಟ್ಟಿ ಅಭಿವೃದ್ಧಿಗೆ ಸಹಕರಿಸಬೇಕು.
ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಆದಾಯವಿದ್ದಷ್ಟೇ ಆಯವ್ಯಯ ಮಂಡಿಸಬೇಕು. ಪ್ರತಿ ಬಾರಿ ರು.5,000ದಿಂದ ರು.8000 ಕೋಟಿವರೆಗೆ ಬಜೆಟ್ ಮಂಡಿಸಲಾಗುತ್ತದೆ. ಈ ರೀತಿಯ ಅವೈಜ್ಞಾನಿಕ ಬಜೆಟ್‍ನಿಂದ ರು.9,000 ಕೋಟಿ ಸಾಲದ ಹೊರೆ ಬೆಂಗಳೂರಿನ ಮೇಲಿದೆ. ಬಿಬಿಎಂಪಿಯಲ್ಲಿ ಶಿಸ್ತು ಎಂಬುದೇ ಇಲ್ಲ. ನಾನು ಕಳೆದ ಬಾರಿ ಬಜೆಟ್‍ನ ಗಾತ್ರ ತಗ್ಗಿಸಿದ್ದೆ. ಇದೀಗ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಅವರು ಅಗತ್ಯಕ್ಕೆ ತಕ್ಕಂತೆ ಬಜೆಟ್ ಮಂಡಿಸಲಿ ಎಂದರು.
-ಕನ್ನಡ ಪ್ರಭ