ಅಂತರಾಷ್ಟ್ರೀಯ

ನೇಪಾಳ ಭೂಕಂಪ: 7 ಸಾವಿರ ಗಡಿಯತ್ತ ಶವಗಳ ಸಂಖ್ಯೆ: ಮುಂದುವರೆದ ರಕ್ಷಣಾ ಕಾರ್ಯ, ಅವಶೇಷಗಳಡಿ ಮತ್ತಷ್ಟು ಶವಗಳ ಶಂಕೆ

Pinterest LinkedIn Tumblr

Nepal-Earthquake

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪನದಿಂದಾಗಿ ಸಾವಿಗೀಡಾದವರ ಸಂಖ್ಯೆ 7 ಸಾವಿರ ಗಡಿಯತ್ತ ಸಾಗಿದ್ದು, ಅವಶೇಷಗಳಡಿಯಲ್ಲಿ ಮತ್ತಷ್ಟು ಶವಗಳಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ನೇಪಾಳದಲ್ಲಿ ಭೂಕಂಪನ ಸಂಭವಿಸಿ ಒಂದು ವಾರ ಕಳೆದರೂ ಇನ್ನೂ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿಲ್ಲ. ಇನ್ನೂ ಸಾಕಷ್ಟು ಪ್ರದೇಶಗಳಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿರುವವರಿಗಾಗಿ ಸೈನಿಕರು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಕಾರ್ಯಾಚರಣೆ ವೇಳೆ ಇದುವರೆಗೆ ಸುಮಾರು 6 ಸಾವಿರದ ಐನೂರಕ್ಕೂ ಹೆಚ್ಚು ಮೃತದೇಹಗಳು ಸಿಕ್ಕಿದ್ದು, 15 ಸಾವಿರಕ್ಕೂ ಹೆಚ್ಚು ಗಾಯಾಳುಗಳು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಅವಶೇಷಗಳಡಿ ಸಿಲುಕಿ ಕೊಂಡಿರುವವರು ಜೀವಂತವಾಗಿರುವ ಸಾಧ್ಯತೆ ತೀರಾ ಕಡಿಮೆ ಇದೆ ಎಂಬ ಅಭಿಪ್ರಾಯಗಳು ಕೂಡ ಕೇಳಿಬರುತ್ತಿವೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಾವಿರಾರು ಮನೆಗಳು, ಐತಿಹಾಸಿಕ ಸೌಧಗಳು, ಸ್ಮಾರಕಗಳು, ದೇವಸ್ಥಾನಗಳು ಸೇರಿದಂತೆ ಬಹುತೇಕ ಕಟ್ಟಡಗಳು ನೆಲಸಮಗೊಂಡಿದವೆ. 6 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳು ಮತ್ತು ವಿವಿಧ ಕಟ್ಟಡಗಳು ನೆಲಸಮವಾಗಿವೆ. ಭಾರತ ಸೇರಿದಂತೆ ವಿವಿಧ ದೇಶಗಳ ಸೇನಾಪಡೆಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ ಯೋಧರು ಸಾಕಷ್ಟು ಶ್ರಮಿಸಿ ಅನೇಕರ ಜೀವ ರಕ್ಷಿಸಿದ್ದಾರೆ. ಆದರೂ ಅವಶೇಷಗಳಡಿ ಸಿಲುಕಿರುವ ಸಾವಿರಾರು ಜನರಲ್ಲಿ ಯಾರೇ ಆದರೂ ಬದುಕುಳಿದಿರುವ ಸಾಧ್ಯತೆಗಳು ಕಡಿಮೆಯಾಗಿದೆ ಎಂದು ಗೃಹ ಇಲಾಖೆ ವಕ್ತಾರ ಲಕ್ಷ್ಮಿಪ್ರಸಾದ್ ಧಾಕೆಲ್ ಹೇಳಿದ್ದಾರೆ.

ಭೂಕಂಪದಲ್ಲಿ ಕೇವಲ ನೇಪಾಳಿಗರು ಮಾತ್ರವಲ್ಲದೆ ಹಲವು ವಿದೇಶಿ ಪ್ರಜೆಗಳು ಕೂಡ ಸಾವನ್ನಪ್ಪಿದ್ದಾರೆ. ಯೂರೋಪಿನ  ಒಂದು ಸಾವಿರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು, ಇವರು ಬದುಕುಳಿದಿರುವ ಸಾಧ್ಯತೆ ತೀರ ಕಡಿಮೆ ಎಂದು ಹೇಳಲಾಗುತ್ತಿದೆ.

ಆಸ್ಪತ್ರೆ, ಔಷಧೋಪಚಾರವಿಲ್ಲದೆ ಪರದಾಡುತ್ತಿರುವ ಸಂತ್ರಸ್ಥರು

ವರದಿಗಳ ಪ್ರಕಾರ ನೇಪಾಳದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಗರ್ಭಿಣಿ ಮಹಿಳೆಯರಿದ್ದು, ಇವರಿಗೆ ಆಸ್ಪತ್ರೆ ಸೌಲಭ್ಯ ಸಿಗದೆ ಪರದಾಡುವಂತಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿ ಗಾಯಗೊಂಡಿರುವ ಸಾವಿರಾರು ಮಂದಿ ಗಾಯಾಳುಗಳಿಗೆ ಔಷಧಗಳಿಲ್ಲದೆ ಪರದಾಡುವಂತಾಗಿದೆ. ವಿವಿಧ ದೇಶಗಳಿಂದ ಟನ್ ಗಟ್ಟಲೆ ಔಷಧಿಗಳು ಬಂದಿವೆಯಾದರೂ ನಿರ್ಧಿಷ್ಟ ಸಮಯದಲ್ಲಿ ಹಂಚಿಕೆಯಾಗದೇ ರೋಗಿಗಳು ಪರದಾಡುವಂತಾಗಿದೆ.
-ಕನ್ನಡ ಪ್ರಭ

Write A Comment