ಕರ್ನಾಟಕ

ಮೇಕೆದಾಟು; ಸರ್ವಪಕ್ಷ ನಿಯೋಗದಿಂದ ಪ್ರಧಾನಿ ಭೇಟಿ

Pinterest LinkedIn Tumblr

Siddu-and-Modi

ಬೆಂಗಳೂರು, ಏ.30- ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಸರ್ಕಾರದಿಂದ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ವ ಪಕ್ಷ ನಿಯೋಗ ಇಂದು ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದೆ. ಮಧ್ಯಾಹ್ನ ಸಂಸತ್‌ನ ಪ್ರಧಾನ ಮಂತ್ರಿಯವರ ಕಚೇರಿಯಲ್ಲಿ ನರೇಂದ್ರ ಮೋದಿಯನ್ನು ನಿಯೋಗ ಭೇಟಿ ಮಾಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಟಿ.ಬಿ.ಜಯಚಂದ್ರ, ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್,

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಸಿದ್ದೇಶ್ವರ್, ವೆಂಕಯ್ಯ ನಾಯ್ಡು, ಜೆಡಿಎಸ್‌ನ ಸಂಸದರಾದ ಸಿ.ಎಸ್.ಪುಟ್ಟರಾಜು, ಶಾಸಕ ಬಾಲಕೃಷ್ಣ, ಕಾಂಗ್ರೆಸ್‌ನ ಸಂಸದರು ನಿಯೋಗದಲ್ಲಿದ್ದರು.

ತಮಿಳುನಾಡಿನ ಎಐಎಡಿಎಂಕೆ ಎನ್‌ಡಿಎ ಕೂಟದ ಮಿತ್ರ ಪಕ್ಷವಾಗಿದೆ. ಅಲ್ಲಿನ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಮೇಕೆದಾಟು ಯೋಜನೆಗೆ ವ್ಯತಿರಿಕ್ತವಾದ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬಾರದು. ಕುಡಿಯುವ ನೀರಿನ ಯೋಜನೆಗೆ ಅನುಮತಿ ಅಗತ್ಯವಿಲ್ಲ ಎಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ. ಮೇಕೆದಾಟು ಯೋಜನೆಯಿಂದ ಕಾವೇರಿ ನ್ಯಾಯಾಧೀಕರಣದ ತೀರ್ಪಿಗೆ ಯಾವುದೇ ರೀತಿಯ ಭಂಗವಾಗುವುದಿಲ್ಲ. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕಾಗಿ ಅನಗತ್ಯ ತಕರಾರು ತೆಗೆಯುತ್ತಿದೆ. ಪ್ರಧಾನ ಮಂತ್ರಿಯವರು ಮಧ್ಯ ಪ್ರವೇಶಿಸಿ ತಮಿಳುನಾಡಿಗೆ ಸೂಕ್ತ ತಿಳುವಳಿಕೆ ನೀಡುವಂತೆ ರಾಜ್ಯದ ನಿಯೋಗ ಮನವಿ ಮಾಡಿದೆ. ಎರಡನೆಯ ಪ್ರಮುಖ ವಿಷಯವಾಗಿ ಮಾತೃ ಭಾಷಾ ಮಾಧ್ಯಮ ಹಿತ ರಕ್ಷಣೆಗೆ ಸಂವಿಧಾನದ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಕಡಿತವಾಗಿದ್ದು, ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ ಅನುದಾನವನ್ನು ಮುಂದುವರೆಸುವಂತೆ ಮನವಿ ಮಾಡಲಾಗಿದೆ.
-ಕೃಪೆ; ಈ ಸಂಜೆ

Write A Comment