ರಾಷ್ಟ್ರೀಯ

ಪುತ್ರ ಸಂತಾನಕ್ಕೆ ಬಾಬಾ ಔಷಧ: ಯೋಗಗುರು ಬಗ್ಗೆ ರಾಜ್ಯಸಭೆ ಕೆಂಡ/ ದಿವ್ಯ ಫಾರ್ಮಸಿ ಉತ್ಪನ್ನದ ವಿರುದ್ಧ ಕ್ರಮಕ್ಕೆ ಆಗ್ರಹ

Pinterest LinkedIn Tumblr

rama

ಹೊಸದಿಲ್ಲಿ : ಲಿಂಗಾನುಪಾತ ಸಮಸ್ಯೆ ದೇಶವನ್ನು ತೀವ್ರವಾಗಿ ಕಾಡುತ್ತಿರುವ ಹೊತ್ತಿನಲ್ಲಿ ‘ಪುತ್ರ ಸಂತಾನ’ಕ್ಕೆ ಮನ್ನಣೆ ನೀಡುವ ಯೋಗಗುರು ಬಾಬಾ ರಾಮ್‌ದೇವ್ ಅವರ ಉದ್ಯಮದ ಔಷಧವೊಂದು ಕೋಲಾಹಲಕ್ಕೆ ಕಾರಣವಾಗಿದೆ.

ಬಾಬಾ ರಾಮ್‌ದೇವ್ ಮಾಲೀಕತ್ವದ ದಿವ್ಯ ಫಾರ್ಮಸಿ ‘ಪುತ್ರ ಜೀವಕ್ ಬೀಜ್’ ಎಂಬ ಔಷಧ ಹೊರತಂದಿದೆ. ಈ ವಿಷಯ ರಾಜ್ಯಸಭೆಯಲ್ಲಿ ಗುರುವಾರ ತೀವ್ರ ಗದ್ದಲಕ್ಕೆ ಕಾರಣವಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ಸದಸ್ಯರು, ‘ಬೇಟಿ ಬಚಾವೋ, ಬೇಟಿ ಪಡಾವೋ’ ಅಂದೋಲನಕ್ಕೆ ಚಾಲನೆ ನೀಡಿರುವ ಪ್ರಧಾನಿ ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

‘ಪುತ್ರಜೀವಕ್ ಬೀಜ್’ ಔಷಧ ಪೊಟ್ಟಣವನ್ನು ಸದನದಲ್ಲಿ ಪ್ರದರ್ಶಿಸಿದ ಸದಸ್ಯರು, ರಾಮ್‌ದೇವ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ‘ಪುತ್ರಜೀವಕ್ ಬೀಜ್’ ಪೊಟ್ಟಣವನನ್ನು ಪ್ರದರ್ಶಿಸಿದ ಜೆಡಿಯುವಿನ ಕೆ ಸಿ ತ್ಯಾಗಿ, ಏ.14ರಂದು ಖರೀದಿಸಿರುವ ಉತ್ಪನ್ನದ ರಸೀದಿಯ ಪ್ರತಿಯನ್ನೂ ತೋರಿಸಿದರು. ಹರಿಯಾಣದ ಬ್ರಾಂಡ್ ರಾಯಭಾರಿಯಾಗಿರುವ ಯೋಗ ಗುರುವಿನೊಬ್ಬರ ಕಂಪನಿಯು ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಅಕ್ರಮ ಹಾಗೂ ಅಸಂವಿಧಾನಿಕ ಎಂದು ಕಿಡಿಕಾರಿದರು. ಬಾಬಾ ರಾಮ್‌ದೇವ್ ಹೆಸರು ಪ್ರಸ್ತಾಪಿಸದೇ ತ್ಯಾಗಿ ಅವರು, ”ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನಕ್ಕೆ ವಿರುದ್ಧವಾಗಿರುವ ಇಂತಹ ಉತ್ಪನ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಒಪ್ಪುವುದೇ,” ಎಂದು ಪ್ರಶ್ನಿಸಿದರು. ಆಗ ಅವರ ಜತೆಗೂಡಿದ ಪ್ರತಿಪಕ್ಷಗಳ ಇತರ ನಾಯಕರೆಲ್ಲರೂ ಉತ್ಪಾದಕ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಆಡಳಿತಾರೂಢ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಈ ಗದ್ದಲದ ನಡುವೆಯೇ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಅವರು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪೊಟ್ಟಣವನ್ನು ನೀಡಿದರು.

ಸೂಕ್ತ ಕ್ರಮದ ಭರವಸೆ: ಪ್ರತಿಪಕ್ಷಗಳ ಪ್ರತಿಭಟನೆ ತೀವ್ರವಾದ ನಂತರ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಜೆ ಪಿ ನಡ್ಡಾ, ”ಇದು ಆಯುಷ್ ಇಲಾಖೆಗೆ ಸಂಬಂಧಿಸಿದ ವಿಷಯವಾಗಿದೆ. ಆದರೂ, ಈ ವಿಚಾರವನ್ನು ಸೂಕ್ತವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದರು. ಇದು ಬಹಳ ಗಂಭೀರವಾದ ವಿಷಯ. ಈಗಷ್ಟೇ ಪೊಟ್ಟಣ ಕೈ ಸೇರಿದೆ. ಲಿಂಗಾನುಪಾತ ವಿಷಯವನ್ನು ಸರಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಸ್ವತಃ ಪ್ರಧಾನಿಯೇ ಈ ಬಗ್ಗೆ ನಿಗಾ ವಹಿಸಿದ್ದಾರೆ,’ ಎಂದು ಸಚಿವರು ಹೇಳಿದರು.

ಅಸಹಾಯಕತೆ ವ್ಯಕ್ತಪಡಿಸಿದ ಸಭಾಪತಿ ಇದಕ್ಕೂ ಮೊದಲು ಉಪ ಸಭಾಪತಿ ಪಿ.ಜೆ.ಕುರಿಯನ್ ಅವರು ”ಔಷಧದ ಮೂಲಕ ಮಗುವಿನ ಲಿಂಗ ಆಯ್ಕೆ ಅಥವಾ ಜನನ ಪೂರ್ವ ಲಿಂಗ ಪತ್ತೆ ವಿಧಾನಗಳು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾದುದು. ಆದರೆ, ಸಭಾಪತಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ,” ಎಂದು ಹೇಳಿದರು. ಸಭಾಪತಿಗಳ ವಿವರಣೆ ಹಾಗೂ ಆರೋಗ್ಯ ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಸದಸ್ಯರು, ತ್ಯಾಗಿ ಅವರ ಬಳಿಯಿದ್ದ ಪೊಟ್ಟಣಗಳನ್ನು ಕೈಯಲ್ಲಿ ಹಿಡಿದು ಗದ್ದಲ ಮುಂದುವರಿಸಿದರು.

-ಕೃಪೆ; ವಿಜಯ ಕನಾಱಟಕ

Write A Comment