ನವದೆಹಲಿ: ರಾಹುಲ್ ಗಾಂಧಿ ಮುಖದಲ್ಲಿ ಭಯ ಹಾಗೂ ಆತಂಕ ಕಾಣುತ್ತಿದ್ದು, ಮನೆಬಿಟ್ಟು ಓಡಿಹೋಗುವ ಪುಟ್ಟ ಬಾಲಕನಂತೆ ಕಾಣುತ್ತಿದ್ದಾರೆ ಹೀಗೆಂದು ರಾಹುಲ್ ಗಾಂಧಿ ಅವರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವುದು ಬೇರಾರು ಅಲ್ಲ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್.
ರೈಲು ಮೂಲಕ ಪಂಜಾಬ್ ಪ್ರವಾಸ ಕೈಗೊಂಡಿರುವ ಸುದ್ದಿ ದಿನಪತ್ರಿಕೆಗಳಲ್ಲಿ ಬುಧವಾರ ಪ್ರಕಟಗೊಂಡಿತ್ತು. ಈ ಸುದ್ದಿಯಲ್ಲಿದ್ದ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ನೋಡಿದ ಅನಿಲ್ ವಿಜ್ ಅವರು ಫೋಟೋದಲ್ಲಿ ರಾಹುಲ್ ಗಾಂಧಿ ಅವರನ್ನು ನೋಡಿದರೆ ಮನೆ ಬಿಟ್ಟು ಓಡಿಹೋಗುವ ಬಾಲಕನಂತೆ ಅನ್ನಿಸಿತು. ರಾಹುಲ್ ಗಾಂಧಿ ಮುಖದಲ್ಲಿ ಭಯ ಹಾಗೂ ಆತಂಕವಿರುವಂತೆ ಕಾಣಿಸುತ್ತಿತ್ತು ಎಂದು ತಮ್ಮ ಟ್ವಿಟರ್ ಖಾತೆಯ ಮೂಲಕ ಹೇಳಿದ್ದಾರೆ.
ಭೂ ಮಸೂದೆ ಕಾಯ್ದೆ ವಿರೋಧ ಹಾಗೂ ಅನಿರೀಕ್ಷಿತ ಮಳೆಯಿಂದಾಗಿ ಅಪಾರ ನಷ್ಟ ಹೊಂದಿರುವ ರೈತರ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಪಂಜಾಬ್ ಗೆ ಸಾಮಾನ್ಯ ಬೋಗಿಯಲ್ಲಿ ಸಾರ್ವಜನಿಕರೊಂದಿಗೆ ರಾಹುಲ್ ಗಾಂಧಿ ಪ್ರವಾಸ ಹೊರಟಿದ್ದರು. ಈ ಸುದ್ದಿ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.
-ಕೃಪೆ; ಕನ್ನಡ ಪ್ರಭ
