ಬೆಂಗಳೂರು, ಏ.29-ರಾಷ್ಟ್ರದಲ್ಲಿ ಹೊಸ ರಾಜಕೀಯ ಶಕ್ತಿ ಹುಟ್ಟುಹಾಕುವ ಉದ್ದೇಶದಿಂದ ಸ್ವರಾಜ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆಪ್ ಉಚ್ವಾಟಿತ ನಾಯಕ ಯೋಗೇಂದ್ರಯಾದವ್ ತಿಳಿಸಿದ್ದಾರೆ. ನಗರದ ಜೈನಭವನದಲ್ಲಿ ಸ್ವರಾಜ್ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವರಾಜ್ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆಮ್ಆದ್ಮಿ ಪಾರ್ಟಿಯನ್ನು ಗುರಿಯಾಗಿರಿಸಿಕೊಂಡು ನಾವು ಸ್ವರಾಜ್ ಆಂದೋಲನ ಹಮ್ಮಿಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಯಾದವ್, ನಾವು ವ್ಯಕ್ತಿ ಕೇಂದ್ರಿತ ರಾಜಕೀಯವನ್ನು ವಿರೋಧಿಸುತ್ತೇವೆ ಎಂದಷ್ಟೇ ಹೇಳಿದರು.
ಧರ್ಮದಾರಿತ, ಜಾತಿಯಾದಾರಿತ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ನಾವು ಮನ್ನಣೆ ನೀಡುವುದಿಲ್ಲ. ಇಡೀ ರಾಷ್ಟ್ರಕ್ಕೆ ಅನ್ವಯಿಸುವಂತಹ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕುವುದು ನಮ್ಮ ಉದ್ದೇಶ ಎಂದರು.
ಕರ್ನಾಟಕದಲ್ಲಿ ಹಲವಾರು ಚಳವಳಿಗಳು ಯಶಸ್ವಿಯಾಗಿವೆ. ದಲಿತ ಚಳವಳಿ, ರೈತ ಚಳವಳಿ ಮತ್ತಿತರ ಚಳವಳಿಗಳು ಇಲ್ಲಿ ನಡೆದಿವೆ. ಹೀಗಾಗಿ ನಮ್ಮ ಹೋರಾಟವನ್ನು ಇಲ್ಲಿಂದಲೇ ಆರಂಭಿಸುತ್ತೇವೆ ಎಂದರು. ಸ್ವರಾಜ್ ಆಂದೋಲನವನ್ನು ದೇಶ ವ್ಯಾಪಿ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ನಡೆಯುತ್ತಿದೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು. ದೇಣಿಗೆ ಸಂಗ್ರಹಿಸುವುದಕೋಸ್ಕರ ಈ ಚಳವಳಿ ಹಮ್ಮಿಕೊಂಡಿಲ್ಲ. ಹೊಸ ಆಶಯದೊಂದಿಗೆ ಹೊಸ ರಾಷ್ಟ್ರೀಯ ಪಕ್ಷ ಕಟ್ಟಬೇಕು ಎಂಬುದು ನಮ್ಮ ಉದ್ದೇಶ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ. ಇತರ ವ್ಯಕ್ತಿಯಾದಾರಿತ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತೇವೆ ಎಂದು ಯಾದವ್ ವಿಶ್ವಾಸ ವ್ಯಕ್ತಪಡಿಸಿದರು. ಸಂವಾದಕ್ಕೂ ಮುನ್ನ ನೇಪಾಳ ಮತ್ತು ಭಾರತದಲ್ಲಿ ಸಂಭವಿಸಿದ ಭೂಕಂಪನದಲ್ಲಿ ಮೃತಪಟ್ಟವರ ಸ್ಮರಣಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು. ಸಂವಾದದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ಚುಕ್ಕಿ ನಂಜುಂಡಸ್ವಾಮಿ, ಪ್ರೊ.ನಟರಾಜ್, ರಾಘವೇಂದ್ರಥಾಣೆ, ಶ್ರೀಧರ್ಕಲ್ಲಹಾಳ , ಚಂದ್ರಕಾಂತ್ ಮತ್ತಿತರರಿದ್ದರು.
-ಕೃಪೆ: ಈ ಸಂಜೆ
