ಕರ್ನಾಟಕ

ದಾಯಾದಿ ಕಲಹ: ಸಿಲಿಂಡರ್‌ ಸ್ಫೋಟಿಸಿ ಕೊಲೆಗೆ ಯತ್ನ; ಒಂದೇ ಕುಟುಂಬದ ಆರು ಮಂದಿ ಸ್ಥಿತಿ ಗಂಭೀರ

Pinterest LinkedIn Tumblr

BIDAR

ಬೀದರ್‌: ಜಮೀನು ವಿವಾದದಿಂದಾಗಿ ಕಿರಿಯ ಸಹೋದರರಿಬ್ಬರು ತಂದೆ ಹಾಗೂ ಹಿರಿಯ ಸಹೋದರನ ಕುಟುಂಬವನ್ನು ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಭಾಲ್ಕಿ ತಾಲ್ಲೂಕಿನ ವರವಟ್ಟಿ(ಬಿ) ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ಘಟನೆಯಲ್ಲಿ ಈಶ್ವರ ತುಕಾರಾಮ ವಾಸುದೇವ, ಪಾರ್ವತಿ, ಧರ್ಮೇಂದ್ರ, ಈಶ್ವರ, ಜಿತೇಂದ್ರ, ಮಕೇಂದ್ರ, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ದೇಹದ ಶೇ 70 ರಿಂದ 90 ರಷ್ಟು ಭಾಗ ಸುಟ್ಟಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ಆರೋಪಿಗಳು ರಾತ್ರಿ 2 ಗಂಟೆಯ ಸುಮಾರಿಗೆ ಮನೆಯ ಮೇಲಿನ ಶೀಟ್‌ ತೆಗೆದು ಒಳ ನುಗ್ಗಿ ಅಡುಗೆ ಅನಿಲ ಸಿಲಿಂಡರ್‌ ಸ್ಟೌ ಆನ್‌ ಮಾಡಿ ಹೊರ ಬಂದಿರುವ ಮತ್ತು ಮನೆಯ ಬಾಗಿಲು ಚಿಲಕ ಹಾಕಿ, ಆ ನಂತರ ಆ ಮನೆಗೆ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ತಜ್ಞರು ಪರಿಶೀಲಿಸಿದ ನಂತರ ನಿಖರ ಮಾಹಿತಿ ಗೊತ್ತಾಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದರು.

‘ಘಟನಾ ಸ್ಥಳಕ್ಕೆ ಕಲಬುರ್ಗಿಯ ವಿಧಿವಿಜ್ಞಾನ ವಿಭಾಗದ ಪ್ರಾದೇಶಿಕ ನಿರ್ದೇಶಕರು, ಲೋಕೋಪಯೋಗಿ ಇಲಾಖೆ ಹಾಗೂ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ’ ಎಂದು ಅವರು ಹೇಳಿದರು.

ತುಕಾರಾಮ ವಾಸುದೇವ ಅವರು ಹಿರಿಯ ಮಗ ಶಂಕರನ ಮನೆಯಲ್ಲಿ ವಾಸವಾಗಿದ್ದರು. ತುಕಾರಾಮ ಅವರ ಪತ್ನಿ ಬೀದರ್‌ನಲ್ಲಿರುವ ಎರಡನೆಯ ಮಗ ರಾಜೇಂದ್ರ ಹಾಗೂ ಮೂರನೆಯ ಮಗ ಸುಧಾಕರ ಅವರ ಬಳಿ ಇದ್ದಾರೆ.

‘ನನ್ನ ಕಿರಿಯ ಪುತ್ರರಾದ ರಾಜೇಂದ್ರ ವಾಸುದೇವ, ಸುಧಾಕರ ವಾಸುದೇವ, ಪುತ್ರಿ ಅಹಿಲ್ಯಾಬಾಯಿ ವಾಘಮಾರೆ ಹಾಗೂ ಅವರ ಕುಟುಂಬದವರೇ ನಮ್ಮ ಕೊಲೆಗೆ ಯತ್ನಿಸಿದ್ದಾರೆ’ ಎಂದು ತುಕಾರಾಮ ವಾಸುದೇವ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಕಳೆದ 10 ವರ್ಷಗಳಿಂದ ಆಸ್ತಿಗಾಗಿ ಆಗಾಗ ಕಲಹ ನಡೆಯುತ್ತಿತ್ತು. ಸಹೋದರರು ಖಟಕಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ದೂರು–ಪ್ರತಿ ದೂರು ದಾಖಲಿಸಿದ್ದರು.

ತಂದೆ ಹಾಗೂ ಹಿರಿಯ ಸಹೋದರನ ವಿರುದ್ಧ ಕಿರಿಯ ಸಹೋದರರು ಭಾಲ್ಕಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಸಹ ಹೂಡಿದ್ದಾರೆ. ಹೆಣ್ಣುಮಕ್ಕಳು ಸಹ ಆಸ್ತಿಯಲ್ಲಿ ಪಾಲು ಬಯಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಪ್ರಕರಣ ನ್ಯಾಯಾಲಯಕ್ಕೆ ಹೋದ ನಂತರ ಸಹೋದರರ ಮಧ್ಯೆ ವೈರತ್ವ ಬೆಳೆದಿತ್ತು. 12 ಎಕರೆ ಜಮೀನು ಇದೆ. ಜಮೀನನ್ನು ಪಾಲು ಮಾಡಿಕೊಡಲಾಗಿದೆ. ಒಂದು ಎಕರೆ ಜಮೀನು ಹಾಗೂ ಅದರಲ್ಲಿರುವ ಬಾವಿಯ ವಿಷಯವಾಗಿಯೇ ಕಲಹ ನಡೆಯತ್ತಿತ್ತು’ ಎಂಬುದು ಆ ಮೂಲಗಳ ವಿವರಣೆ. ಕೊಲೆಗೆ ಯತ್ನಿಸಿದ ಹಾಗೂ ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಒಟ್ಟು 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
*
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
– ಸುಧೀರ್‌ ಕುಮಾರ್‌ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
(ಪ್ರಜಾವಾಣಿ)

Write A Comment