ಕರ್ನಾಟಕ

‘ತಾಕತ್ತಿದ್ದರೆ ಪರಿಷತ್‌ ರದ್ದು ಮಾಡಿ’ ; ಕಾನೂನು ಸಚಿವರಿಗೆ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಸವಾಲು

Pinterest LinkedIn Tumblr

NEWS

ಬೆಂಗಳೂರು: ‘ವಿಧಾನಸಭೆಯು ವಿಧಾನ ಪರಿಷತ್ತಿನ ಬ್ರಹ್ಮ’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ತುಮಕೂರಿನಲ್ಲಿ ನೀಡಿದ್ದ ಹೇಳಿಕೆ ಪರಿಷತ್ತಿನಲ್ಲಿ ಸೋಮವಾರ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಗುರಿಯಾಯಿತು.

‘ಕಾನೂನು ಸಚಿವರಿಗೆ ತಾಕತ್ತಿದ್ದರೆ ಪರಿಷತ್ತನ್ನು ರದ್ದು ಮಾಡಲಿ, ನೋಡೋಣ’ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ಜಯಚಂದ್ರ ವಿರುದ್ಧ ಕೋಪದಿಂದ ಹೇಳಿದರು.

‘ಪರಿಷತ್ತನ್ನು ರದ್ದು ಮಾಡುವ ಅರ್ಥದಲ್ಲಿ ಸಚಿವರು ಮಾತನಾಡಿರುವುದು ಸಂವಿಧಾನ ವಿರೋಧಿ. ಇಂಥ ಮಾತು ಆಡಿದ್ದಕ್ಕೆ ಅವರು ಜನರ ಕ್ಷಮೆ ಕೇಳಬೇಕು. ಅದಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಯವರು ಜಯಚಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು’ ಎಂದು ಈಶ್ವರಪ್ಪ ಆಗ್ರಹಿಸಿದರು.

‘ಪರಿಷತ್ತನ್ನು ರದ್ದು ಮಾಡಬೇಕು ಎಂದು ಹಿಂದೆ ಹೇಳಿದ ಕೆಲವರು ನಂತರದ ದಿನಗಳಲ್ಲಿ ಪರಿಷತ್ತಿನ ಸದಸ್ಯರಾದರು. ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ ಮುಂತಾದವರೆಲ್ಲ ಮೇಲ್ಮನೆಯ ಸದಸ್ಯರಾಗಿದ್ದವರು. ಪರಿಷತ್ತು ವಿಧಾನಸಭೆಯ ಸೃಷ್ಟಿಯೇ ಆಗಿರಬಹುದು. ಆದರೆ, ಹುಟ್ಟಿಸಿದ ಮಗನ (ಪರಿಷತ್ತಿನ) ಕತ್ತು ಹಿಸುಕುವ ಕೆಲಸವನ್ನು ನೀವು (ವಿಧಾನಸಭೆಯವರು) ಮಾಡುತ್ತೀರಾ’ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.

ಸಚಿವರು ಆಡಿದ ಮಾತುಗಳಿಂದ ಪರಿಷತ್ತಿನ ಸದಸ್ಯರ ಹಕ್ಕುಚ್ಯುತಿ ಆದಂತಾಗಿದೆ ಎಂದು ಈಶ್ವರಪ್ಪ ಹೇಳಿದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಜಯಚಂದ್ರ, ‘ನಾನು ಹಾಗೆ ಹೇಳಿಲ್ಲ. ರಾಜ್ಯದಲ್ಲಿ ವಿಧಾನ ಪರಿಷತ್ತು ಯಾವಾಗಲೂ ಇರುತ್ತದೆ’ ಎಂದು ಉತ್ತರಿಸಿದರು. ಈ ಸ್ಪಷ್ಟನೆ ಆಲಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ, ‘ಸಚಿವರ ಮಾತಿನಿಂದ ಹಕ್ಕುಚ್ಯುತಿ ಆಗಿದೆ ಎಂಬ ವಾದವನ್ನು ತಿರಸ್ಕರಿಸುವುದಾಗಿ’ ಸಭೆಯಲ್ಲಿ ಅವರು ಪ್ರಕಟಿಸಿದರು.
*
ಪರಿಷತ್ತು ಸಂವಿಧಾನದ ಸೃಷ್ಟಿ. ಇದು ವಿಧಾನಸಭೆ ಸೃಷಿಸಿರುವ ಸಂಸ್ಥೆಯಲ್ಲ.
– ಕೆ.ಎಸ್‌. ಈಶ್ವರಪ್ಪ, ಮೇಲ್ಮನೆ ‍ಪ್ರತಿಪಕ್ಷ ನಾಯಕ
*
ಪರಿಷತ್ತನ್ನು ರದ್ದು ಮಾಡುವ ಆಲೋಚನೆ ನನ್ನ ಕನಸಿನಲ್ಲಿಯೂ ಬಂದಿಲ್ಲ. ನಾನು ಹೇಳಿರುವುದು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟವಾಗಿದೆ.
– ಟಿ.ಬಿ. ಜಯಚಂದ್ರ, ಕಾನೂನು ಸಚಿವ
(ಪ್ರಜಾವಾಣಿ)

Write A Comment