ಕರ್ನಾಟಕ

ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ರದ್ದು : ಸದ್ಯಕ್ಕಿಲ್ಲ ಬಿಬಿಎಂಪಿ ಎಲೆಕ್ಷನ್

Pinterest LinkedIn Tumblr

BBMP

ಬೆಂಗಳೂರು,ಏ.24- ಮೇ 30ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂಬ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸಿರುವ  ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲ ನೇತೃತ್ವದ ವಿಭಾಗೀಯ ಪೀಠ ಸಂವಿಧಾನಬದ್ಧವಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ.  ಡಿ.ಎಚ್.ವಘೇಲ ಮತ್ತು ರಾಮಮೋಹನ್ ರೆಡ್ಡಿ ನೇತೃತ್ವದ ವಿಭಾಗೀಯ ಪೀಠ ಸಂವಿಧಾನದ 243/ಯು ಪ್ರಕಾರ ಚುನಾವಣೆ ನಡೆಸುವಂತೆ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಆದರೆ ಇಷ್ಟೇ ದಿನದೊಳಗೆ ಚುನಾವಣೆ ನಡೆಸಬೇಕು ಎಂದು ನ್ಯಾಯಪೀಠ ಯಾವುದೇ ಷರತ್ತು ವಿಧಿಸಿಲ್ಲ.

ಸರ್ಕಾರ ಈಗಾಗಲೇ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಆಡಳಿತಾಧಿಕಾರಿಗಳ ಅವಧಿ 6 ತಿಂಗಳು ಇರುವುದರಿಂದ ಸರ್ಕಾರ ಅಲ್ಲಿಯವರೆಗೂ ನಿರಾಳ ವಾಗಿರಬಹುದಾಗಿದೆ.

ವಿಭಜನೆ ನೆಪದಲ್ಲಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಸಕಾಲಕ್ಕೆ ಚುನಾವಣೆ ನಡೆಸಲು ಆದೇಶ ನೀಡುವಂತೆ ಬಿಬಿಎಂಪಿ ಮಾಜಿ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಸೋಮಶೇಖರ್ ಮತ್ತಿತರರು ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿದಾರರ ಮನವಿಗೆ ಸ್ಪಂದಿಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನಮ್ಮ ನೇತೃತ್ವದ ಏಕಸದಸ್ಯ ಪೀಠ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಛೀಮಾರಿ ಹಾಕಿ ಮೇ 30ರೊಳಗೆ ಚುನಾವಣೆ ನಡೆಸುವಂತೆ ತೀರ್ಪು ನೀಡಿತ್ತು.  ಏಕಸದಸ್ಯ ಪೀಠದ ಈ ತೀರ್ಪಿನ ವಿರುದ್ಧ ಸರ್ಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಏಕಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸಿ ಸಂವಿಧಾನ ಪ್ರಕಾರ ಚುನಾವಣೆ ನಡೆಸುವಂತೆ ತೀರ್ಪು ನೀಡಿದೆ.  ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜನೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದರೆ ಸಮಯ ಹಾಗೂ ಹಣ ವ್ಯರ್ಥ. ಹೀಗಾಗಿ ಏಕಸದಸ್ಯ ಪೀಠದ ತೀರ್ಪನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

* ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ  ಬಿಜೆಪಿ ಮತ್ತು ಜೆಡಿಎಸ್
ಬೆಂಗಳೂರು,ಏ.24- ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್  ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ರದ್ದುಪಡಿಸಿರುವ ವಿಭಾಗೀಯ ಪೀಠದ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಬಿಜೆಪಿ ಮತ್ತು ಜೆಡಿಎಸ್ ತೀರ್ಮಾನಿಸಿದೆ.  ಬಿಜೆಪಿ ಸದಸ್ಯತ್ವ ಅಭಿಯಾನದ ಸಂಪರ್ಕ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್ , ಪಕ್ಷದ ವತಿಯಿಂದ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮೇಲ್ಮನವಿ ಸಲ್ಲಿಸುವ  ಕುರಿತಂತೆ ಕಾನೂನು ತಜ್ಞರು ಹಾಗೂ ಬೆಂಗಳೂರು ಶಾಸಕರೊಂದಿಗೆ ಸಭೆ ಕರೆದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.  ಸರ್ಕಾರ ದುರದ್ದೇಶದಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಿದೆ.  2006ರ ಆಡಳಿತಾಧಿಕಾರಿಗಳ ಅವಧಿಯಲ್ಲಿ ಪಾಲಿಕೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿತ್ತು. ಇದೀಗ ಮತ್ತೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿರುವುದರಿಂದ ಬಿಬಿಎಂಪಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಹೀಗಾಗಿ ಸಕಾಲಕ್ಕೆ ಚುನಾವಣೆ ನಡೆಸಿ ಚುನಾಯಿತ ಪ್ರತಿನಿಧಿಗಳನ್ನು ನೇಮಕ ಮಾಡಬೇಕು. ಆಡಳಿತಾಧಿಕಾರಿಗಳು ಬೇಡ ಎಂಬ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ವಿವರಿಸಿದರು.  ಏತನ್ಮಧ್ಯೆ ವಿಭಾಗೀಯ ಪೀಠದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ನಮ್ಮ ಪಕ್ಷವೂ ಮೇಲ್ಮನವಿ ಸಲ್ಲಿಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.  ಹೀಗಾಗಿ ಬಿಬಿಎಂಪಿ ಚುನಾವಣೆ ಹಾಗೂ ವಿಭಜನೆ ವಿಚಾರ ಸುಪ್ರೀಂಕೋರ್ಟ್ ಅಂಗಳ ತಲುಪಲಿದೆ.

Write A Comment