ಕರ್ನಾಟಕ

ಕಳ್ಳತನ ಮಾಡಿದ್ದೇನೆ ಹುಡುಕಬೇಡಿ ಎಂದು ಸಂದೇಶ ಕಳುಹಿಸಿದ ಕಳ್ಳಿ

Pinterest LinkedIn Tumblr

Maid-Who-Dared-Boss-After-Theft-Held-Chain-Recovered

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನದ ಸರ ಕದ್ದಿದ್ದಲ್ಲದೆ ಉದ್ಯೋಗ ಕೊಡಿಸಿದ ಕಂಪನಿ ಮಾಲೀಕರಿಗೆ `ಕಳ್ಳತನ ಮಾಡಿ ಹೋಗುತ್ತಿದ್ದೇನೆ. ಕೆಲಸಕ್ಕೆ ಸೇರುವಾಗ ಕೊಟ್ಟಿರುವ ದಾಖಲೆ ಪತ್ರ ನಕಲಿ. ನನ್ನನ್ನು ಹಿಡಿಯುವ ಪ್ರಯತ್ನ ಮಾಡಬೇಡಿ’ ಎಂದು ಮೊಬೈಲ್‍ನಲ್ಲಿ ಸಂದೇಶ ಕಳುಹಿಸಿ ಪರಾರಿಯಾಗಿದ್ದ ಯುವತಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ನಿವಾಸಿ ಲಾವಣ್ಯ ಅಲಿಯಾಸ್ ಶ್ರುತಿ (19) ಬಂಧಿತೆ. ಜ.22ರಂದು ಜಯನಗರದ 3ನೇ ಬ್ಲಾಕ್ ಮನೆಯಲ್ಲಿ 50 ಗ್ರಾಂ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದಳು.ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರು ಲಾವಣ್ಯಳನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

ಏನಿದು ಘಟನೆ?: ಅನಾರೋಗ್ಯ, ವೃದ್ಧಾಪ್ಯದಲ್ಲಿರುವವರಿಗೆ ಸ್ನಾನ ಮಾಡಿಸುವುದು, ಊಟ ಕೊಡುವುದು, ವಾಕಿಂಗ್ ಕರೆದೊಯ್ಯುವುದು ಸೇರಿದಂತೆ ವಿವಿಧ ರೀತಿಯ ಸೇವೆ ಮಾಡುವ `ಹೋಮ್ ನರ್ಸ್’ಗಳನ್ನು ಸುಮುಖ ನರ್ಸಿಂಗ್ ಸರ್ವಿಸಸ್ ಸಂಸ್ಥೆ ಮಾಡುತ್ತಿದೆ. ಈ ಸಂಸ್ಥೆಗೆ ದಾವಣಗೆರೆ ಮೂಲದವಳೆಂದು ಸುಳ್ಳು ಹೇಳಿ ಲಾವಣ್ಯ ಕೆಲಸಕ್ಕೆ ಸೇರಿದ್ದಳು. ಜ.22ರಂದು ಜಯನಗರ 3ನೇ ಬ್ಲಾಕ್ 10ನೇ ಮುಖ್ಯರಸ್ತೆ ನಿವಾಸಿ ಕೆ.ಎನ್.ಅನಂತರಾಘವ ಶರ್ಮಾ ಹಾಗೂ ಶಾಂತಿ ದಂಪತಿ ಮನೆಗೆ ಲಾವಣ್ಯಳನ್ನು ಕೆಲಸಕ್ಕೆ ನಿಯೋಜಿಸಲಾಗಿತ್ತು.

ಕೇವಲ 3 ದಿನ ಕೆಲಸ ಮಾಡಿದ ಲಾವಣ್ಯ ಶಾಂತಿಯವರ 50 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳವು ಮಾಡಿದ್ದಳು. ಪರಾರಿಯಾಗುವ ಮೊದಲು, ಕೆಲಸಕ್ಕೆ ಸೇರಿಸಿಕೊಂಡಿದ್ದ ಸುಮುಖ ನರ್ಸಿಂಗ್ ಸರ್ವಿಸಸ್ ಮಾಲೀಕ ನಾರಾಯಣಸ್ವಾಮಿ ಅವರ ಮೊಬೈಲ್‍ಗೆ `ನಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮಾಂಗಲ್ಯ ಸರ ಕದ್ದಿದ್ದೇನೆ. ಕೆಲಸಕ್ಕೆ ಸೇರುವಾಗ ಕೊಟ್ಟಿರುವ ದಾಖಲಾತಿಗಳು ನಕಲಿ ಹಾಗೂ ನನ್ನ ಹೆಸರು ಕೂಡ ಶ್ರುತಿ ಅಲ್ಲ. ನನ್ನನ್ನು ಹಿಡಿಯುವ ಪ್ರಯತ್ನ ಮಾಡಬೇಡಿ’ ಎಂದು ಸಂದೇಶ ಕಳುಹಿಸಿದ್ದಳು.

ಈ ಬಗ್ಗೆ ನಾರಾಯಣಸ್ವಾಮಿ, ಜಯನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಲಾವಣ್ಯಳನ್ನು ಬಂಧಿಸಿ ಕದ್ದೊಯ್ದಿದ್ದ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.

ಗರ್ಭಪಾತವಾಗಿತ್ತು: ಸ್ನೇಹಿತರು ಮತ್ತು ಮೊಬೈಲ್ ಕರೆ ಮೂಲಕ ವಿಳಾಸ ಪತ್ತೆ ಹಚ್ಚಿ ಶಿವಮೊಗ್ಗಕ್ಕೆ ತೆರಳಿದ ಪೊಲೀಸರ ತಂಡ ಲಾವಣ್ಯಳನ್ನು ಬಂಧಿಸಿ ನಗರಕ್ಕೆ ಕರೆತರುತ್ತಿದ್ದರು. ಆದರೆ, ಬಂಧನವಾಗುವ ಹಿಂದಿನ ದಿನವಷ್ಟೇ ಆಕೆಗೆ ಗರ್ಭಪಾತವಾಗಿತ್ತು. ಆದರೆ ಈ ವಿಚಾರ  ಪೊಲೀಸರಿಂದ ಮುಚ್ಚಿಟ್ಟಿದ್ದಳು. ಮಾರ್ಗಮಧ್ಯೆ ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ.

Write A Comment