ಕರ್ನಾಟಕ

ಆಡಳಿತ-ಪ್ರತಿಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗಲಿರುವ ವಿಶೇಷ ಅಧಿವೇಶನ

Pinterest LinkedIn Tumblr

vidhanasabhe

ಬೆಂಗಳೂರು, ಏ.19- ನಾಳೆ ನಡೆಯಲಿರುವ ಮಹತ್ವದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ಪಾಲಿಗೆ ಅಗ್ನಿ ಪರೀಕ್ಷೆಯಾಗಲಿದೆ.  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಳಿವು-ಉಳಿವಿನ ನಿರ್ಧಾರವೂ ನಾಳಿನ ತುರ್ತು ಅಧಿವೇಶನದಲ್ಲಿ ನಿರ್ಧಾರವಾಗಲಿದೆ.  ವಿವಿಧ ಸಂಘ-ಸಂಸ್ಥೆಗಳು ಹಾಗೂ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ಭಾಗವಾಗಿ ವಿಭಜಿಸುವ ಹಠಕ್ಕೆ ಬಿದ್ದಿರುವ ಸರ್ಕಾರ ನಾಳೆ ತುರ್ತು ಅಧಿವೇಶನ ನಡೆಸುತ್ತಿದೆ.

ಶಾಸನಾತ್ಮಕವಾಗಿಯೇ ಬಿಬಿಎಂಪಿ ವಿಭಜನೆ ಮಾಡಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ನಾಳೆ 2015ನೆ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಬಿಬಿಎಂಪಿ ವಿಭಜನೆ ಮಾಡುವ ಸುಗ್ರೀವಾಜ್ಞೆಗೆ ರಾಜ್ಯಪಾಲ ವಿ.ಆರ್.ವಾಲಾ ಅವರಿಂದ  ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಅಧಿವೇಶನದಲ್ಲೇ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಜೆಡಿಎಸ್, ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಬಿಬಿಎಂಪಿ ವಿಭಜನೆ ಮಾಡದೆ ಚುನಾವಣೆ ನಡೆಸಬೇಕು ಎಂದು ಸದನದ ಒಳ-ಹೊರಗೆ ಆಗ್ರಹಿಸುತ್ತಿವೆ. ಇದಕ್ಕೆ ಕೆಲವು ಸಂಘ-ಸಂಸ್ಥೆಗಳು ಕೂಡ ದನಿಗೂಡಿಸಿ ಪ್ರತಿಭಟಿಸುವ ಮೂಲಕ ಆಗ್ರಹಿಸುತ್ತಿವೆ. ಆದರೆ, ಸರ್ಕಾರ ಮಾತ್ರ ಆಡಳಿತಾತ್ಮಕ ನೆಪವೊಡ್ಡಿ ಬಿಬಿಎಂಪಿ ವಿಭಜಿಸುವ ಕಾರ್ಯಕ್ಕೆ ಮುಂದಾಗಿದೆ.   ನಾಳೆ ಈ ಉದ್ದೇಶಿತ ವಿಧೇಯಕದ ಪರ-ವಿರೋಧವಾಗಿ ಉಭಯ ಸದನಗಳಲ್ಲೂ ಕಾವೇರಿದ ಹಾಗೂ ಗಂಭೀರ ಸ್ವರೂಪದ ಚರ್ಚೆ ನಡೆಯಲಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ, ವಾಗ್ವಾದ ಕೂಡ ನಡೆಯುವ ಸಾಧ್ಯತೆಯಿದೆ. ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವಿರುವುದರಿಂದ ಪ್ರತಿಪಕ್ಷಗಳ ವಿರೋಧದ ನಡುವೆಯೂ ಸರ್ಕಾರ ಸುಲಭವಾಗಿ ಬಿಬಿಎಂಪಿ ವಿಭಜಿಸುವ ವಿಧೇಯಕಕ್ಕೆ ಒಪ್ಪಿಗೆ ಪಡೆಯಬಹುದು. ಆದರೆ, ವಿಧಾನ ಪರಿಷತ್‌ನಲ್ಲಿ ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷಗಳ ಸದಸ್ಯರೇ ಹೆಚ್ಚಾಗಿದ್ದು, ವಿಧೇಯಕಕ್ಕೆ ಒಪ್ಪಿಗೆ ಪಡೆಯುವುದು ಅಷ್ಟು ಸುಲಭವಾಗುವುದಿಲ್ಲ.

ನಾಳೆ ವಿಧೇಯಕಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದರೆ ಬಿಬಿಎಂಪಿ ಅಸ್ತಿತ್ವವೇ ಇಲ್ಲವಾಗುತ್ತದೆ. ಆದರೂ ಆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕುವವರೆಗೂ ಕಾಯ್ದೆಯಾಗುವುದಿಲ್ಲ. ಹೀಗಾಗಿ ನಾಳಿನ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ಪಾಲಿಗೆ ಅಗ್ನಿ ಪರೀಕ್ಷೆಯಾಗಲಿದೆ.

Write A Comment