ಕರ್ನಾಟಕ

ಮೇಕೆದಾಟು: ತಮಿಳುನಾಡು ಕ್ಯಾತೆ ತೆಗೆಯಲು ಕಾರಣವೇನು?

Pinterest LinkedIn Tumblr

Mekedatu_in_summer

ಮೇಕೆದಾಟು ಯೋಜನೆ ಇನ್ನೂ ಪರಿಕಲ್ಪನೆಯಲ್ಲೇ ಇದೆ. ಸರ್ಕಾರಕ್ಕೂ ನಿರ್ದಿಷ್ಟವಾಗಿ ಎಲ್ಲಿ ಅಣೆಕಟ್ಟು ಕಟ್ಟಬೇಕು, ಅದಕ್ಕೆ ಎಷ್ಟು ವೆಚ್ಚವಾಗುತ್ತದೆ, ಎಷ್ಟು ನೀರು ಬರುತ್ತದೆ ಎಂಬ ಖಚಿತ ಮಾಹಿತಿ ಇಲ್ಲ. ಏಕೆಂದರೆ, ಜಲಸಂಪನ್ಮೂಲ ಹಾಗೂ ಲೋಕೋಪಯೋಗಿ ಇಲಾಖೆ ಒಂದು ಅಧ್ಯಯನವನ್ನೂ ಮಾಡಿಲ್ಲ. ಆದರೂ ಮೇಕೆದಾಟು ಕುಡಿಯುವ ನೀರನ್ನು ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಿಗೆ ನೀಡುವ ನಿರೀಕ್ಷೆ ಇದೆ.

ಕಾವೇರಿ ನದಿ ಅಡ್ಡಲಾಗಿ ಕುಡಿಯುವ ನೀರಿಗಾಗಿ ರಾಮನಗರದ ಮೇಕೆದಾಟಿನಲ್ಲಿ ಕಿರು ಅಣೆಕಟ್ಟು ನಿರ್ಮಿಸುವುದು ಸರ್ಕಾರದ ಉದ್ದೇಶ. ಇದು ಹೊಸ ಯೋಜನೆಯೇನಲ್ಲ. ಹಳೆಯ ಪರಿಕಲ್ಪನೆಗೆ ಈಗ ಚಾಲನೆ ಸಿಕ್ಕಿದೆ ಅಷ್ಟೇ. ಇದು ಈಗ ತಮಿಳುನಾಡಿಗೆ ಸಹಿಸದಾಗಿದೆ. ಏಕೆಂದರೆ ಅಲ್ಲಿ ಕಾವೇರಿಯೇ ರಾಜಕೀಯದ ಮೂಲ ಅಸ್ತ್ರ. ಅದಕ್ಕೇ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ. ತಮಿಳುನಾಡಿನಲ್ಲಿ ಬಂದ್ ಕೂಡ ಮಾಡಿದೆ. ಅದಕ್ಕೆ ಪ್ರತಿರೋಧವಾಗಿ ಕರ್ನಾಟಕವೂ ಸ್ಪಷ್ಟ ಸಂದೇಶವನ್ನು ಶನಿವಾರ ರವಾನಿಸಿದೆ. ಈ ಎಲ್ಲ ವಿಷಯಗಳ ನಡುವೆ ಮೇಕೆದಾಟು ಏನು, ಅಲ್ಲಿಂದ ಎಷ್ಟು ನೀರು ಬರುತ್ತದೆ, ತಮಿಳುನಾಡಿನ ವಿರೋಧ ಏನು, ನಾವು ಎಷ್ಟು ನೀರು ಬಳಸಿಕೊಳ್ಳಬಹುದು ಎಂಬ ಕೆಲವು ಮಾಹಿತಿಯನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ನ್ಯಾಯಾಧಿಕರಣ ತೀರ್ಪಿನ ವಿವರವೂ ಇಲ್ಲಿದೆ.

ಮೇಕೆದಾಟು ಎಲ್ಲಿದೆ, ಅದು ಏನು?

ಬೆಂಗಳೂರಿನಿಂದ 90 ಕಿ.ಮೀ ದೂರದ ರಾಮನಗರ ಜಿಲ್ಲೆಯ ಸಂಗಮದ ಸಮೀಪವಿರುವುದೇ ಮೇಕೆದಾಟು. ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ 4 ಕಿ.ಮೀ. ದೂರದಲ್ಲಿದೆ. ಇಲ್ಲಿ ಕಾವೇರಿ ನದಿ ಮೇಕೆ ಹಾರಿ ದಾಟುವಷ್ಟು ಕಿರು ಜಾಗದಲ್ಲಿ ಹರಿದು ಆಳವಾದ ಕಂದಕಕ್ಕೆ ಧುಮುಕುತ್ತದೆ. `ಮೇಕೆದಾಟು’ ಎಂಬ ಹೆಸರು ಬರಲು ಕಥೆಯೇ ಇದೆ. ನೂರಾರು ವರ್ಷಗಳ ಹಿಂದೆ ಇಲ್ಲಿ ಕುರಿಗಾಹಿಯೊಬ್ಬ ತನ್ನ ಮೇಕೆಗಳನ್ನು ಮೇಯಿಸುತ್ತ ಇದ್ದನಂತೆ. ನೂರಾರು ಮೇಕೆಗಳು ಒಂದೆಡೆ ಮೇಯುತ್ತಾ ಇದ್ದರೆ ಒಂದು ಮೇಕೆ ಮಾತ್ರ ಒಬ್ಬಂಟಿಯಾಗಿ ಓಡಾಡುತ್ತ ಸೊಪ್ಪು ತಿನ್ನುತ್ತಾ ಇತ್ತು.

ಈ ಸಮಯದಲ್ಲಿ ಬೇಟೆಯಾಡಲು ಬಂದಿದ್ದ ಒಂದು ಹುಲಿ ಒಬ್ಬಂಟಿಯಾಗಿ ಸೊಪ್ಪು ತಿನ್ನುತ್ತಿದ್ದ ಮೇಕೆಯನ್ನು ನೋಡಿ ಅದರ ಮೇಲೆ ದಾಳಿ ನಡೆಸಿತು. ಆದರೆ ಹುಲಿಯಿಂದ ತಪ್ಪಿಸಿಕೊಂಡ ಮೇಕೆ ನದಿಯ ತೀರದ ಮೇಲೆಯೇ ಪ್ರಾಣ ಉಳಿಸಲು ಓಡತೊಡಗಿತು. ಮುಂದೆ ಸಾಗಿದಂತೆ ದಾರಿ ಕಾಣದ ಮೇಕೆ ಒಂದೇ ನೆಗೆತಕ್ಕೆ ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ನೆಗೆದು ಪ್ರಾಣ ಉಳಿಸಿಕೊಂಡಿತು. ಆದರೆ ಹುಲಿ ಮಾತ್ರ ನದಿಯನ್ನು ಹಾರುವಂತಹ ಸಾಹಸಕ್ಕೆ ಕೈ ಹಾಕಲಿಲ್ಲ. ಮೇಕೆಯನ್ನು ಹಿಂಬಾಲಿಸುವ ಕಾರ್ಯವನ್ನು ನಿಲ್ಲಿಸಿದ ಹುಲಿ ಅಲ್ಲಿಂದ ಹಸಿದ ಹೊಟ್ಟೆಯಲ್ಲಿಯೇ ಹೊರಟಿತು ಎಂಬುದು ಕಥೆ.

ಪ್ರತಿಭಟನೆಗೆ ಕಾರಣ ಏನು?

ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾಪ 1952ರ ಅವಧಿಯಲ್ಲಿಯೇ ಪ್ರಸ್ತಾಪವಾಗಿತ್ತು. ಕೆಲ ಕಾರಣಗಳಿಂದ ಈ ಯೋಜನೆ ಸರ್ಕಾರ ಕೈಬಿಟ್ಟಿತ್ತು. 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇದ್ದ ಕಾರಣ ಮೊದಲು ವಿವಾದ ಬಗೆಹರಿಸಿಕೊಳ್ಳಿ, ನಂತರ ಈ ವಿಚಾರ ಪ್ರಸ್ತಾಪ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು.

2007ರಲ್ಲಿ ನ್ಯಾಯಾಧಿಕರ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಆದರೆ ಈಗ ಕರ್ನಾಟಕ ಸರ್ಕಾರ ಡಿಪಿಆರ್ ತಯಾರಿಸಲು ಜಾಗತಿಕ ಟೆಂಡರ್ ಕರೆದಿದೆ. ಇದನ್ನೇ ತಮಿಳುನಾಡು ವಿರೋಧಿಸುತ್ತಿದೆ.

ಏನಿದು ಮೇಕೆದಾಟು ಯೋಜನೆ?

ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಇಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಕಿರು ಅಣೆಕಟ್ಟೆಗಳನ್ನು ಕಟ್ಟಿ ಆ ಮೂಲಕ ಬೆಂಗಳೂರು, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ ಇದು. ಇಲ್ಲಿ ಸರಿಸುಮಾರು 25 ಟಿಎಂಸಿ ನೀರು ಸಿಗುತ್ತದೆ ಎಂಬುದೇ ಲೆಕ್ಕಾಚಾರ.

ತಮಿಳುನಾಡು ವಾದ ಏನು?

ಕಾವೇರಿ ನ್ಯಾಯಾಧಿಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪವಾಗಿಲ್ಲ. ಆದರೆ ಸರ್ಕಾರ ಈಗ ಯೋಜನೆ ಮುಂದಾಗಿದ್ದು ನ್ಯಾಯಮಂಡಳಿಯ ತೀರ್ಪನ್ನು ಉಲ್ಲಂಘಿಘಿಸಿದೆ. ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಬರುತ್ತದೆ. ಅದರೆ ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ.

ಕರ್ನಾಟಕದ ವಾದ ಏನು?

ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ಪ್ರತಿವರ್ಷ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುತ್ತಿದ್ದೇವೆಯೇ ಹೊರತು ವಿದ್ಯುತ್ ಉತ್ಪಾದನೆಗೆ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಅಂತಾರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಎತ್ತಿಕೊಂಡ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ.

ಕರ್ನಾಟಕಕ್ಕೆ ಈ ಅಣೆಕಟ್ಟು ಅಗತ್ಯ ಯಾಕೆ?

ಬೆಂಗಳೂರು ನಗರಕ್ಕೆ ನೀರು ಬರುವುದು ಕೆಆರ್ ಎಸ್ ಡ್ಯಾಮ್ ನಿಂದ. ಪ್ರತಿದಿನ 1400 ದಶಲಕ್ಷ ಲೀಟರ್. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ. ತಿಪ್ಪಗೊಂಡನಹ ಳ್ಳಿ ಜಲಾಶಯದಿಂದ 2012ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದಲ್ಲದೆ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಇದೆ. ಈ ಕಿರು ಅಣೆಕಟ್ಟುಗಳನ್ನು ಕಟ್ಟಿ ಕನಿಷ್ಠ 25 ಟಿಎಂಸಿ ನೀರು ಬಳಸಿಕೊಂಡರೆ ಈ ಐದು ಜಿಲ್ಲೆಗಳ ನೀರಿನ ದಾಹ ತೀರಿಸಿದಂತಾಗುತ್ತದೆ.

ಎಷ್ಟು ಡ್ಯಾಂ ನಿರ್ಮಾಣವಾಗಲಿದೆ?

ಆರಂಭಿಕ ಯೋಜನೆ ಪ್ರಕಾರ 4,500 ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮುಳುಗಡೆಯಾಗುವ ಪ್ರದೇಶವನ್ನು ತಪ್ಪಿಸಲು 5, 10, 15 ಟಿಎಂಸಿ ಸಾಮಥ್ಯ 2, 3 ಅಣೆಕಟ್ಟೆ ಕಟ್ಟಿದರೆ ಅರಣ್ಯ ಮುಳುಗಡೆ ಪ್ರದೇಶ ಕಡಿಮೆಯಾಗುತ್ತದೆ. ಕುಡಿಯುವ ನೀರು ಯೋಜನೆಯಾಗಿರುವುದರಿಂದ ಪರಿಸರ ಇಲಾಖೆಯಿಂದ ಅನುಮತಿಯೂ ಸಿಗಲಿದೆ. ಇಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿ ನೀಡುವ ಕ್ರಮವನ್ನೂ ಅನುಸರಿಸಲು ನಿರ್ಧರಿಸಲಾಗಿದೆ. ಆದರೆ ಎಷ್ಟು ಅಣೆಕಟ್ಟೆ ನಿರ್ಮಾಣ ಮಾಡಬೇಕು ಎನ್ನುವುದು ಇನ್ನೂ ಅಂತಿಮವಾಗಿಲ್ಲ.

ಕಾವೇರಿ ನೀರಿನಲ್ಲಿ ಯಾವ ರಾಜ್ಯದ ಪಾಲು ಎಷ್ಟು?

ಕಾವೇರಿ ಜಲಾನಯನದಲ್ಲಿ ಒಟ್ಟು 740 ಟಿಎಂಸಿ ನೀರು ಲಭ್ಯ. ಕರ್ನಾಟಕ ರಾಜ್ಯವು ನ್ಯಾಯಾಧಿಕರಣದ ಮುಂದೆ 27.28ಲಕ್ಷ ಎಕರೆ ನೀರಾವರಿ ಮತ್ತು ಬೆಂಗಳೂರು ಸೇರಿದಂತೆ ಎಲ್ಲ ಪಟ್ಟಣ ಪ್ರದೇಶಗಳ ಕುಡಿಯುವ ನೀರು, ವಿದ್ಯುತ್ ಮುಂತಾದವುಗಳಿಗೆ ಒಟ್ಟು 465 ಟಿ.ಎಂ.ಸಿ ನೀರಿನ ಬೇಡಿಕೆ ಮಂಡಿಸಿತ್ತು. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ನ್ಯಾಯಮಂಡಳಿಯು ಈ ಎಲ್ಲ ಉದ್ದೇಶಕ್ಕಾಗಿ 270 ಟಿಎಂಸಿ ಮಾತ್ರ ಹಂಚಿಕೆ ಮಾಡಿದೆ. ತಮಿಳುನಾಡು 562 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿತ್ತು. ಆದರೆ ನ್ಯಾಯಾಧಿಕರಣ 419 ಟಿಎಂಸಿ ಹಂಚಿಕೆ ಮಾಡಿದೆ. ಕೇರಳಕ್ಕೆ 30ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಸೂತ್ರದ ಮೂಲಕ ತೀರ್ಪನ್ನು ನೀಡಿತ್ತು. ತೀರ್ಪಿನ ಜೊತೆಗೆ ಪ್ರತಿ ವರ್ಷ ಜೂನ್ ತಿಂಗಳಿನಿಂದ ಏಪ್ರಿಲï ವರೆಗೆ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶಿಸಿದೆ. ಇಷ್ಟು ಪ್ರಮಾಣದ ನೀರನ್ನು ಪ್ರತಿ ತಿಂಗಳು ವಾರದಲ್ಲಿ ನಿಗದಿತ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಸೂಚಿಸಿದೆ.

ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಲು ಹೊರಟಿದ್ದೇಕೆ?

ಕಾವೇರಿ ನ್ಯಾಯಾಧಿಕರಣ ತೀರ್ಪಿನಂತೆ ಕರ್ನಾಟಕ ಸರ್ಕಾರ ಪ್ರತಿವರ್ಷ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಮಂಡ್ಯದಲ್ಲಿರುವ ಕೃಷ್ಣರಾಜಸಾಗರ ಜಲಾಶಯದಿಂದ ಬಿಡುಗಡೆ ಮಾಡುತ್ತದೆ. ಈ ನೀರಿನ ಜೊತೆಗೆ ಪ್ರತಿ ವರ್ಷವೂ ಹೆಚ್ಚುವರಿಯಾಗಿ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಹೀಗೆ ರಾಜ್ಯದಿಂದ ಹರಿದು ಹೋಗುತ್ತಿರುವ ಈ ನೀರನ್ನು ಸಂಗ್ರಹಿಸಿ ಕುಡಿಯಲು ಬಳಸಿಕೊಳ್ಳಬೇಕು ಎಂಬ ಉದ್ದೇಶ ದಿಂದ ಸರ್ಕಾರ ಅಣೆಕಟ್ಟು ನಿರ್ಮಿಸಲು ಹೊರಟಿದೆ.

Write A Comment