ಕರ್ನಾಟಕ

ಐಎಎಸ್ ಅಧಿಕಾರಿಯ ಮಗಳ ಮೇಲೆ ಗಂಡನ ಮನೆಯಲ್ಲಿಯೇ ಅತ್ಯಾಚಾರ

Pinterest LinkedIn Tumblr

5772Rape3

ಬೆಂಗಳೂರು, ಏ.17-ರಾಜ್ಯ ಸರ್ಕಾರದ ಹೆಚ್ಚುವರಿ ನಿವೃತ್ತ ಮುಖ್ಯ ಕಾರ್ಯದರ್ಶಿಯವರ ತುಂಬು ಗರ್ಭಿಣಿ ಪುತ್ರಿಯ ಮೇಲೆ  ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅತ್ಯಾಚಾರ ನಡೆದಿದೆ.  ಆಕೆಯ ಪತಿಯ ಸಹೋದರನೇ ಈ ಹೇಯ ಕೃತ್ಯ ನಡೆಸಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪತಿಯ ಸಹೋದರ, ಮಾವ, ಅತ್ತೆ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಈ ಪ್ರಕರಣ ನಡೆದಿದ್ದು, ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಬೆಂಗಳೂರಿನಲ್ಲಿ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೂರ್ವ ವಿಭಾಗದ ಡಿಸಿಪಿ ಎನ್.ಸಂತೋಷ್‌ಕುಮಾರ್ ಅವರು ಪ್ರಕರಣವನ್ನು ಮೈಸೂರಿಗೆ ವರ್ಗಾವಣೆ ಮಾಡಿದ್ದಾರೆ.

ಮೈಸೂರಿನ ಪ್ರತಿಷ್ಠಿತ  ಕುಟುಂಬದವರಿಗೆ 2011ರಲ್ಲಿ ನಿವೃತ್ತಿ ಹೊಂದಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿತ್ತು. ತುಂಬು ಆಗರ್ಭ ಶ್ರೀಮಂತರಾಗಿದ್ದ ಇವರಿಗೆ ವರೋಪಚಾರ ನೀಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಪತಿಯ ಮನೆಯವರು ಉದ್ಯಮದಲ್ಲಿ ನಷ್ಟ ಹೊಂದಿದ್ದರಿಂದ ಈಕೆಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಅತ್ತೆ, ಮಾವ ಹಾಗೂ ಪತಿಯ ಅಣ್ಣ  ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ತವರು ಮನೆಯಿಂದ 45 ಕೋಟಿ ಹಣ ತಂದರೆ ಮಾತ್ರ ಮನೆಯಲ್ಲಿ ಇರಲು ಅವಕಾಶ ನೀಡಲಾಗುವುದು, ಇಲ್ಲದಿದ್ದರೆ ಆಕೆಯ ಪತಿಗೆ ವಿಚ್ಛೇದನ ನೀಡುವಂತೆ ಪದೇ ಪದೇ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.

ವರದಕ್ಷಿಣೆ ತರಲು ನಿರಾಕರಿಸಿದ್ದಕ್ಕೆ ಅತ್ತೆ ಮನೆಯವರು ಸಾಕಷ್ಟು ಕಿರುಕುಳ ನೀಡಿದ್ದರು. ಕೊನೆಗೆ ಮಗಳ ಭವಿಷ್ಯ ಚೆನ್ನಾಗಿರಲೆಂದು ತಾಯಿ ಮನೆಯವರು ಬೆಂಗಳೂರಿನಲ್ಲಿದ್ದ ಮನೆ ಮತ್ತು ನಿವೇಶನ ಮಾರಿ 12 ರಿಂದ 15 ಕೋಟಿ ಹಣವನ್ನು ನೀಡಿದ್ದರು ಎಂದು ತಿಳಿದುಬಂದಿದೆ.
ಹಣದ ಪಿಪಾಸುಗಳಾದ ಅತ್ತೆ ಮನೆಯವರು ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೆ ಉಳಿದ  ಹಣ ತರುವಂತೆ ತಗಾದೆ ತೆಗೆಯುತ್ತಿದ್ದರು. ಇನ್ನು ನನ್ನ ತವರಿನಿಂದ ಹಣ ತರಲು ಸಾಧ್ಯವಿಲ್ಲ ಎಂದಾಗ ಮೂವರೂ ಸೇರಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದರು. ತುಂಬು ಗರ್ಭಿಣಿಯಾಗಿದ್ದ ಆಕೆಯ ಮೇಲೆ ಪತಿಯ ಕಾಮುಕ ಅಣ್ಣ ಆಕೆಯನ್ನು ಮೇಲ್ಮಹಡಿಯ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ತಕ್ಷಣವೇ ಪತಿ ಬಂದಾಗ ಅತ್ತೆ, ಮಾವ ಮತ್ತಿತರರು ಇದನ್ನು ತಡೆಯಲು ಯತ್ನಿಸಿದ್ದಾರೆ. ಕುಟುಂಬದ ವಿರುದ್ಧ ದೂರು ನೀಡಲು ಮುಂದಾದಾಗ ಇಬ್ಬರನ್ನೂ ಮನೆಯಲ್ಲೇ ಕೂಡಿ ಹಾಕಿದ್ದಾರೆ.

ಅಲ್ಲೇ ಕಾಣಿಸಿಕೊಂಡ ಹೆರಿಗೆ ನೋವು: ಆಗಲೇ 8 ತಿಂಗಳು ತುಂಬಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮನೆಯಿಂದ ಇಬ್ಬರು ಹೊರ ಹೋದರೆ ನಮ್ಮ ಮೇಲೆ ದೂರುನೀಡುತ್ತಾರೆ ಎಂಬ ಕಾರಣಕ್ಕಾಗಿ ಮನೆಗೆ ವೈದ್ಯರನ್ನು ಕರೆತರುವ ವಿಫಲ ಪ್ರಯತ್ನ ನಡೆಸಿದ್ದಾರೆ. ಆದರೆ ಇದು ಫಲ ನೀಡದಿದ್ದಾಗ ಅಂತಿಮವಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದಾಗ ಗಂಡು ಮಗುವಿಗೆ ಜನ್ಮವಿತ್ತಳು. ಮೊಮ್ಮಗನನ್ನು ನೋಡಲು ಮೈಸೂರಿಗೆ ಹೋದಾಗ ಪುತ್ರಿ ನಡೆದ ಎಲ್ಲಾ ವಿಷಯವನ್ನು ಅಮ್ಮನಲ್ಲಿ ಹೇಳಿಕೊಂಡಿದ್ದಾಳೆ. ತಕ್ಷಣವೇ ಬೆಂಗಳೂರಿಗೆ ಕರೆತಂದು ಅತ್ತೆ, ಮಾವ ಹಾಗೂ ಭಾವನ ವಿರುದ್ಧ ದೂರು ದಾಖಲಿಸಲಾಗಿದೆ. ಪೊಲೀಸರು ಸೆಕ್ಷನ್ 341, 307, 376, 498(ಎ), 114, 34ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲೈಂಗಿಕ ಕಿರುಕುಳ, ವರದಕ್ಷಿಣೆ ದೌರ್ಜನ್ಯ, ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ನಡೆದಿರುವ ಪ್ರಕರಣವಾಗಿರುವುದರಿಂದ ಬೆಂಗಳೂರು ಪೊಲೀಸರು ಪ್ರಕರಣವನ್ನು ಅಲ್ಲಿಗೇ ವರ್ಗಾವಣೆ ಮಾಡಿದ್ದಾರೆ.

Write A Comment