ಕರ್ನಾಟಕ

ಬದನವಾಳು ಮತ್ತು ಮಹದೇಶ್ವರ!

Pinterest LinkedIn Tumblr

Khadi & Gramodyoga Unit in Badanavalu

– ಕೆ.ಎಸ್. ಗಿರೀಶ್
ಬದನವಾಳು ಮೈಸೂರು ಜಿಲ್ಲೆಯ ಪುಟ್ಟ ಊರು. ಶ್ರಮ ಸಂಸ್ಕೃತಿಗೂ ಈ ಗ್ರಾಮಕ್ಕೂ ಇನ್ನಿಲ್ಲದ ನಂಟು. ಶ್ರಮಸಂಸ್ಕೃತಿಯ ಆಂದೋಲನಕ್ಕೆ ಪ್ರಸ್ತುತ ವೇದಿಕೆ ಆಗುತ್ತಿರುವ ಈ ಗ್ರಾಮದ ಚರಿತ್ರೆಯಲ್ಲೇ ಶ್ರಮಸಂಸ್ಕೃತಿಯ ಕುರುಹುಗಳಿವೆ.

ಮೈಸೂರು ಜಿಲ್ಲೆಯ ಪುಟ್ಟ ಗ್ರಾಮ ಬದನವಾಳು ಈಗ ನಾಡಿನ ಗಮನಸೆಳೆದಿರುವ ಸ್ಥಳ. ಏಪ್ರಿಲ್ 19ರಂದು ಇಲ್ಲಿ ನಡೆಯಲಿರುವ ‘ಬದನವಾಳು ಸತ್ಯಾಗ್ರಹ ಮತ್ತು ರಾಷ್ಟ್ರೀಯ ಸುಸ್ಥಿರ ಬದುಕಿನ ಸಮಾವೇಶ’ ದೇಶದ ಗಮನಸೆಳೆದಿದೆ. ಅಂದಹಾಗೆ, ಈ ಪುಟ್ಟಗ್ರಾಮಕ್ಕೂ ಶ್ರಮ ಸಂಸ್ಕೃತಿಗೂ ಪಾರಂಪರಿಕ ನಂಟಿದೆ. ಅದೊಂದು ಕುತೂಹಲಕರ ಕಥನ.

ಮೈಸೂರು ಸೀಮೆಯ ಜನಪದ ದೈವ ಮಲೆ ಮಹದೇಶ್ವರ ಇಲ್ಲಿಗೆ ಭೇಟಿ ನೀಡಿರುವ ಕುರಿತು ಸ್ವಾರಸ್ಯಕರ ಉಲ್ಲೇಖವೊಂದು ಜನರ ನಾಲಗೆಗಳಲ್ಲಿದೆ. ಮಲೆ ಮಹದೇಶ್ವರ ಜನಪದ ಮಹಾಕಾವ್ಯದಲ್ಲಿ ‘ಬದನವಾಳು ಮಠದ ಕವಟ್ಲು’ ಎಂಬ ಅಧ್ಯಾಯವೇ ಇದೆ.

ಎಡಕೆ ಚಾಮುಂಡಮ್ಮನ ಬೆಟ್ಟವಂತೆ
ಅದರ ಪಕ್ಕದಲ್ಲಿ ನಂಜನಗೂಡಂತೆ
ಅದರ ಪಕ್ಕದಲ್ಲಿರುವಂತಾ
ಬದನಾಳು ಮಠಕೆ ದೃಷ್ಟಿ ಮಡಗಿ ಬತ್ತವ್ರೆ ಮಾದಪ್ಪ
ಎನ್ನುವ ಸಾಲುಗಳು ಬದನವಾಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ. ಮಠಕ್ಕೆ ಬಂದ ಮಾದಪ್ಪನಿಗೆ ಗುರುಗಳು ಬದನೆ ಸಸಿಗಳಿಗೆ ನೀರು ಹಾಕುವ ಕಾಯಕ ಒಪ್ಪಿಸುತ್ತಾರೆ. ಇದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಮಾದಪ್ಪ, ಭರಪೂರ ಬದನೆ ಬೆಳೆ ತೆಗೆದುದನ್ನು ಕಂಡು ಗುರುಗಳು ಶಹಬ್ಬಾಸ್‌ಗಿರಿ ಕೊಡುತ್ತಾರೆ. ಅಷ್ಟೇ ಅಲ್ಲ, ಇಂತಹ ಸಾಧನೆ ತೋರದ ಇತರ ಮಠದ ಶಿಷ್ಯರ ಕಪಾಳಕ್ಕೆ ಹೊಡಿ ಎಂದು ಆಜ್ಞಾಪಿಸುತ್ತಾರೆ. ಆದರೆ, ಮಾದಪ್ಪ ಇದಕ್ಕೆ ಒಪ್ಪುವುದಿಲ್ಲ. ಆತ ತಳೆಯುವ ನಿಲುವು ಹೀಗಿದೆ:

ಈ ಗುರುಗಳ ಸತ್ಯ ಇಷ್ಟಿಯೆ ಅಂತ್ಹೇಳಿ
ಹುಡುಗರಿಗೆ ಹೊಡಿ ಬಾರ್ದು ಅಂತ
ಮುಂದಕ್ಕೆ ಪಯಣ ಮಾಡ್ತಾವ್ರೆ ಮಾದೇವ.

ಪ್ರಸ್ತುತ ಬದನವಾಳಿನಲ್ಲಿ ಯಾವ ಮಠವೂ ಇಲ್ಲ. ಹಾಗಾಗಿ, ಈ ಮಾದೇಶ್ವರನ ನಂಟು ‘ಜನಪದ ಹಾಡುಗಾರರ ಕಟ್ಟುಕಥೆ’ ಇದಿರಬಹುದು ಎಂದು ಕೆಲವು ಜಾನಪದ ವಿದ್ವಾಂಸರು ಶಂಕಿಸುತ್ತಾರೆ. ಆದರೆ, ವಾಸ್ತವದಲ್ಲಿ ಚಾಮರಾಜನಗರ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ‘ಮಠದ ಬಾವಿ’, ‘ಮಠದ ಭೂಮಿ’ ಎಂಬೆಲ್ಲಾ ಹೆಸರುಗಳಿದ್ದರೂ ಅಲ್ಲೆಲ್ಲ ಮಠದ ಅಸ್ತಿತ್ವದ ಕುರುಹೇ ಇಲ್ಲ. ‘ಇಲ್ಲಿ ಮಠವಿದ್ದೂ, ಅದು ಕಾಲಾಂತರದಲ್ಲಿ ನಾಶ ಆಗಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ’ ಎಂದು ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಡುತ್ತಾರೆ. ‘ಬದನವಾಳಿನ ಕವಟ್ಲು ಎಂಬ ಇಡೀ ಅಧ್ಯಾಯವನ್ನು ಜನಪದರು ಸುಳ್ಳು ಸುಳ್ಳೇ ಬರೆದಿರುವುದಿಲ್ಲ, ಜನಪದ ಹುಸಿಯಲ್ಲ.

ಬಹಳಷ್ಟು ಜನಪದ ಹಾಡುಗಾರರಲ್ಲಿ ಈ ಅಧ್ಯಾಯ ಇರುವುದರಿಂದ ಮಹದೇಶ್ವರ ಇಲ್ಲಿಗೆ ಬಂದಿರುವ ಸಾಧ್ಯತೆಯೇ ಅಧಿಕ’ ಎನ್ನುವುದು ಅವರ ವಿಶ್ಲೇಷಣೆ.

ಮಾದಪ್ಪನಿಗೆ ಬದನೆ ಬೆಳೆ ತೆಗೆಯುವ ಕಾಯಕ ನೀಡಿದ್ದು ಶ್ರಮಸಂಸ್ಕೃತಿಯ ದ್ಯೋತಕ. ಮಾತ್ರವಲ್ಲ, ಆತ ಬದನೆ ಕೃಷಿಯಲ್ಲಿ ಉಳಿದವರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದು ಆತನ ಶ್ರಮ, ನಿಷ್ಠೆಯ ಸಂಕೇತ.

‘ಸಾಧನೆ ತೋರದ ಶಿಷ್ಯರಿಗೆ ಶಿಕ್ಷಿಸು’ ಎನ್ನುವ ಗುರುಗಳ ಮಾತಿಗೆ ಪ್ರತಿಯಾಗಿ, ‘ಮಕ್ಕಳನ್ನು ದಂಡಿಸಬಾರದು’ ಎನ್ನುವ ಮಾದಪ್ಪನ ಕಾಳಜಿ. ಗುರುಗಳ ಅಪ್ಪಣೆಯನ್ನು ಉಲ್ಲಂಘಿಸಿದ್ದು ಮಾದಪ್ಪನ ಕ್ರಾಂತಿಕಾರಕ ನಿಲುವಿಗೆ ಉದಾಹರಣೆಯಂತಿದೆ ಎನ್ನುವ ವಿಶ್ಲೇಷಣೆಗಳೂ ಇವೆ.

ಹೀಗೆ ಮಾದಪ್ಪನೊಂದಿಗೆ ತಳಕು ಹಾಕಿಕೊಂಡ ಮಾನವೀಯ ಕಥನವೊಂದು ಬದನವಾಳಿನಲ್ಲಿ ಹೊಸ ರೂಪ ಪಡೆದದ್ದು ‘ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ’ದ ಮೂಲಕ. ಹತ್ತಿಯ ಎಳೆಯನ್ನು ನೂಲು ಮಾಡಿ ಅದರಿಂದ ಉತ್ಕೃಷ್ಠ ದರ್ಜೆಯ ಬಟ್ಟೆಯನ್ನು ತಯಾರಿಸಿದ್ದು ಈ ಊರಿನ ಅಗ್ಗಳಿಕೆ. ಮಹಾತ್ಮ ಗಾಂಧಿ ಇಲ್ಲಿಗೆ ಬಂದು ಜನರನ್ನು ನೇಕಾರಿಕೆಗೆ ಉತ್ತೇಜಿಸಿದ್ದರು. ಗಾಂಧಿ ಇಲ್ಲಿಗೆ ಬಂದುಹೋದ ನಂತರ ಚಾಮರಾಜನಗರ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ರೇಷ್ಮೆ ನೇಯ್ಗೆ ಹೆಚ್ಚಿನ ಪ್ರಚಾರಕ್ಕೆ ಬಂತು. ಕಳೆದ ಐದಾರು ವರ್ಷಗಳ ಹಿಂದಿನವರೆಗೂ ಒಂದೊಂದು ಊರಿನಲ್ಲಿ ಹತ್ತಾರು ರೇಷ್ಮೆ ನೂಲು ತೆಗೆಯುವ ಗುಡಿ ಕೈಗಾರಿಕೆಗಳಿದ್ದವು.

ಕಾಲ ಬದಲಾಯಿತು ನೋಡಿ. ಬದನವಾಳುವಿನಂತಹ ಕೈಮಗ್ಗದ ಕೈಗಾರಿಕೆಗಳಲ್ಲಿ ಜನರಿಗೆ ಕೆಲಸವಿಲ್ಲದಂತಾಯಿತು. ಇಲ್ಲೇ ಇದ್ದ ಬೆಂಕಿಪೊಟ್ಟಣ, ರೇಷ್ಮೇ ನೂಲು ತೆಗೆಯುವ ಕಾರ್ಖಾನೆ, ಕಾಗದ ಕಾರ್ಖಾನೆ ಮೊದಲಾದ ಗುಡಿ ಕೈಗಾರಿಕೆಗಳು ನಾಮಾವಶೇಷವಾದವು. ಸದ್ಯಕ್ಕೆ, ಕೈಮಗ್ಗವೊಂದು ಮಾತ್ರ ಬದನವಾಳು ಗ್ರಾಮದಲ್ಲಿದ್ದು 40 ಜನ ಹಿರಿಯ ಜೀವಗಳ ಕೈಗೆ ಕೆಲಸ ಕೊಟ್ಟಿದ್ದು, ಗುಟುಕು ಜೀವ ಹಿಡಿದುಕೊಂಡಿದೆ.

Write A Comment