ರಾಷ್ಟ್ರೀಯ

ವಿಚಾರಣೆ ವಿಳಂಬ: ಸಮಸ್ಯೆ ಸರಳವಲ್ಲ; ಹೋಲಿಕೆ ಸಲ್ಲ

Pinterest LinkedIn Tumblr

court2

ಭಾರತದಲ್ಲಿ ಪ್ರಕರಣಗಳ ವಿಚಾರಣೆ ತುಂಬಾ ವಿಳಂಬವಾಗುತ್ತಿದೆಯೇ ಎಂದರೆ ‘ಹೌದು’ ಎಂಬ ಉತ್ತರ ಒಕ್ಕೊರಲಿನಿಂದ ಕೇಳಿಬರುತ್ತದೆ. ಆದರೆ ಭಾರತದಲ್ಲಿನ ವಿಚಾರಣೆ ವಿಳಂಬವನ್ನು ವಾಸ್ತವ ಸನ್ನಿವೇಶದಲ್ಲಿ ನೋಡಬೇಕಾಗುತ್ತದೆ. ಅಮೆರಿಕದಲ್ಲಿ ಆರು ತಿಂಗಳು, ಬ್ರಿಟನ್‌ನಲ್ಲಿ  ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳುತ್ತದೆ. ನಮ್ಮ ಮಹಾನಗರಗಳಲ್ಲಿ 5 ವರ್ಷ, ಗ್ರಾಮಾಂತರ ಭಾಗಗಳಲ್ಲಿ 8– 10 ವರ್ಷ ವಿಳಂಬವಾಗುತ್ತದೆ ಎಂದು ಹೋಲಿಕೆ ಮಾಡುವುದು ಅಸಮಂಜಸ.

ಅಲ್ಲಿ ಸಿಗುವಂತಹ ಸೌಲಭ್ಯಗಳೂ ನಮ್ಮಲ್ಲಿ ಇಲ್ಲವಲ್ಲ? ಅಮೆರಿಕದಲ್ಲಿ ಕುಡಿಯುವ ನೀರಿಗೆ ಬಾಟಲಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಪ್ರತಿ ನಲ್ಲಿಯಲ್ಲೂ ನೀರು ಸಿಗುತ್ತದೆ. ಅಲ್ಲಿ ವಿದ್ಯುತ್ ಕೊರತೆ ಸಹ ಇಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಅಷ್ಟೇ. ಅಲ್ಲಿ ಇರುವ ಮೂಲಸೌಕರ್ಯಗಳು ನಮ್ಮಲ್ಲಿ ಇಲ್ಲದಿರುವಾಗ ಇಂತಹ ಹೋಲಿಕೆ ಮಾಡುವುದೂ ಸರಿಯಲ್ಲ.

ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಸರಳವಾಗಿ ವಿಶ್ಲೇಷಿಸಲು ಆಗದು. ಅದಕ್ಕೆ ಕಾರಣಗಳೂ ಹಲವು.
ಭಾರತದಲ್ಲಿ ನ್ಯಾಯಾಧೀಶರು ಮತ್ತು ಜನಸಂಖ್ಯೆಯ ಅನುಪಾತ ತೀರಾ ಕಡಿಮೆ ಇದೆ. ಪೊಲೀಸರ ಸಂಖ್ಯೆ ಮತ್ತು ಜನಸಂಖ್ಯೆಯ ಅನುಪಾತವೂ ಕಡಿಮೆ ಎನ್ನುವುದೂ ಉಲ್ಲೇಖನೀಯ. ಅಂದರೆ ನಮ್ಮಲ್ಲಿನ ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ನ್ಯಾಯಾಧೀಶರ ಸಂಖ್ಯೆಯೂ ಇರಬೇಕು. ನ್ಯಾಯಾಧೀಶರು ಮತ್ತು ನ್ಯಾಯಾಲಯಗಳ ಸಂಖ್ಯೆ ಹೆಚ್ಚಾದರೆ ಪ್ರಕರಣಗಳು ಹಂಚಿಕೆಯಾಗುತ್ತವೆ.

ನ್ಯಾಯವ್ಯವಸ್ಥೆ ವಿಳಂಬ ಎಂದು ದೂರಿದರೂ ವಾಸ್ತವವಾಗಿ ಭಾರತದಲ್ಲಿನ ನ್ಯಾಯಾಧೀಶರು ಅತಿ ಹೆಚ್ಚು ಕೆಲಸ ಮಾಡುವವರು. ಬೇರಾವ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಭಾರತೀಯ ನ್ಯಾಯಾಧೀಶರಷ್ಟು ಶ್ರಮವಹಿಸಿ ದುಡಿಯುವ ನ್ಯಾಯಾಧೀಶರು ಕಾಣುವುದಿಲ್ಲ. ಇಲ್ಲಿ ಪ್ರತಿ ನ್ಯಾಯಾಧೀಶರ ಮುಂದೆ ದಿನವೊಂದಕ್ಕೆ 100–150 ಹೊಸ ಪ್ರಕರಣಗಳು ಬರುತ್ತವೆ. ಆದರೆ ಅಮೆರಿಕ, ಬ್ರಿಟನ್‌ಗಳಲ್ಲಿ ಒಬ್ಬ ನ್ಯಾಯಾಧೀಶರ ಮುಂದೆ ವರ್ಷಕ್ಕೆ ಅಷ್ಟು ಪ್ರಕರಣಗಳು ಬರುತ್ತವೆ. ವಕೀಲರು ಹಗಲೂ ರಾತ್ರಿ ದುಡಿಯುತ್ತಾರೆ. ಆದರೆ ಪ್ರತಿ ನ್ಯಾಯಾಧೀಶರೂ ವಕೀಲರ ಐದು ಪಟ್ಟು ಶ್ರಮ ವ್ಯಯಿಸುತ್ತಾರೆ ಎನ್ನುವುದು ಕಟು ವಾಸ್ತವ.

ಹೈಕೋರ್ಟ್‌ ದೀರ್ಘಾವಧಿ ರಜೆ ತೆಗೆದುಕೊಳ್ಳುವುದಿದೆ. ಆದರೆ ಆ ರಜೆ ಕ್ಯಾಲೆಂಡರ್ ಮೇಲೆ ಮಾತ್ರ ಇರುತ್ತದಷ್ಟೇ. ರಾಷ್ಟ್ರೀಯ ರಜಾ ದಿನಗಳು, ಭಾನುವಾರ, ಹಬ್ಬ ಹರಿದಿನಗಳಲ್ಲಿಯೂ ನ್ಯಾಯಾಧೀಶರು ಪ್ರಕರಣಗಳ ತೀರ್ಪನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಇಷ್ಟೊಂದು ಹೊರೆ ಇರುವಾಗ ತ್ವರಿತವಾಗಿ ಪ್ರಕರಣಗಳನ್ನು ನಿರ್ವಹಣೆ ಮಾಡಬೇಕು ಎಂದರೆ ಹೇಗೆ? ಅವರೂ ನಮ್ಮಂತೆಯೇ ಮನುಷ್ಯರಲ್ಲವೇ?

ಪ್ರಕರಣ ವಿಳಂಬಕ್ಕೆ ನ್ಯಾಯಾಲಯವನ್ನು ದೂಷಿಸುವವರು ಅದರಲ್ಲಿ ತಮ್ಮ ಪಾಲೂ ಇದೆ ಎನ್ನುವುದನ್ನೂ ಅರಿತುಕೊಳ್ಳಬೇಕು. ನಿಜ, ಸಮಾಜದಲ್ಲಿ ಕಾನೂನು ವ್ಯವಸ್ಥೆಯ ಬಗ್ಗೆ ಗೌರವ, ಭಯ ಇರಬೇಕು. ಪ್ರತಿ ನಾಗರಿಕರಿಗೂ ಸಾಮಾಜಿಕ ದೃಷ್ಟಿಕೋನ ಅಗತ್ಯ. ಮೌಲ್ಯ, ಬದ್ಧತೆ, ಸಹನೆಯ ಜತೆಗೆ ಜನರು ಕಾನೂನಿನ ಚೌಕಟ್ಟಿಗೆ ಒಳಪಡುವ ವಿಷಯಗಳಲ್ಲಿ ಸ್ವನಿಯಂತ್ರಣಕ್ಕೆ ಒಳಪಟ್ಟಾಗ ಕೋರ್ಟ್‌ ಮೆಟ್ಟಿಲೇರುವ ಅನಿವಾರ್ಯ ಎದುರಾಗದು.

ಈ ರೀತಿಯ ನೈತಿಕ ಭಯ ಜನರಲ್ಲಿ ಮೂಡಬೇಕು. ಆದರೆ ಜನರು ಕಾನೂನಿನ ಬಗ್ಗೆ ಅಸಡ್ಡೆ ತೋರಿದರೆ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತದೆ. ಕಾನೂನು ಉಲ್ಲಂಘಿಸಿದರೆ ಯಾವ ಭಯವೂ ಇರುವುದಿಲ್ಲ, ಕೋರ್ಟ್‌ಗೆ ಹೋದರೂ ಅದು ಹೇಗೋ ವರ್ಷಾನುಗಟ್ಟಲೆ ತಳ್ಳಿಕೊಂಡು ಹೋಗುತ್ತದೆ ಎಂಬ ಭಂಡತನವೂ ಜನರಲ್ಲಿದೆ. ಒಂದು ವೇಳೆ ಕಾನೂನು ಪ್ರಕ್ರಿಯೆ ಚುರುಕಾದರೆ ಆರು ತಿಂಗಳು– ವರ್ಷದಲ್ಲಿ ಪ್ರಕರಣ ಇತ್ಯರ್ಥಗೊಂಡು  ಸಜೆಯೂ ಆಗುತ್ತದೆ ಎನ್ನುವ ವಾತಾವರಣ ನಿರ್ಮಾಣವಾಗಬೇಕು. ಆಗ ದಾವೆಗಳ ಸಂಖ್ಯೆ ತಾನೇತಾನಾಗಿ ಕಡಿಮೆಯಾಗುತ್ತದೆ.

ವಿಚಾರಣೆ ವಿಳಂಬಕ್ಕೆ ನಾವು ತಂತ್ರಜ್ಞಾನದ ಅಳವಡಿಕೆಯಲ್ಲಿ ಹಿಂದುಳಿದಿರುವುದೂ ಪ್ರಮುಖ ಕಾರಣಗಳಲ್ಲಿ ಒಂದು. ಈಗಾಗಲೇ ನಮ್ಮಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಕೆಯಾಗಿದ್ದರೂ ಅದಿನ್ನೂ ಪ್ರಾರಂಭಿಕ ಹಂತದಲ್ಲಿದೆ. ಡಾಕೆಟ್‌ ಮ್ಯಾನೇಜ್‌ಮೆಂಟ್‌ (ದಾವೆಗಳ ನಿರ್ವಹಣೆ), ಕಾಸ್‌ ಲಿಸ್ಟ್‌ ನಿರ್ವಹಣೆ – ಯಾವ ದಾವೆ ಯಾವತ್ತು, ಯಾವ ಸಮಯದಲ್ಲಿ ವಿಚಾರಣೆಗೆ ಬರಲಿದೆ ಇತ್ಯಾದಿ ಮಾಹಿತಿಗಳನ್ನು ಇ–ಮೇಲ್ ಮತ್ತು ಎಸ್‌ಎಂಎಸ್‌ ಮೂಲಕ ತಿಳಿಸುವ ವ್ಯವಸ್ಥೆ ಬಳಕೆಯಲ್ಲಿದ್ದರೂ ಅದರಲ್ಲಿ ಸುಧಾರಣೆ ಅತ್ಯಗತ್ಯ. ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಅಳವಡಿಕೆಯಿಂದ ಪಾರದರ್ಶಕತೆ ಬರುತ್ತದೆ, ದಕ್ಷತೆಯೂ ಹೆಚ್ಚುತ್ತದೆ.

ಶಾಸನ ರೂಪಿಸುವವರ ಪಾಲನ್ನೂ ನಾವು ಇಲ್ಲಿ ಗಮನಿಸಬೇಕು. ಶಾಸನಗಳನ್ನು ವಿಮರ್ಶಿಸಿ ಸಾಂವಿಧಾನಿಕ ಚೌಕಟ್ಟಿನೊಳಗೆ ಶಾಸನಗಳನ್ನು ರೂಪಿಸಿದರೆ ಅವುಗಳನ್ನು ಪ್ರಶ್ನಿಸುವವರ ಸಂಖ್ಯೆ ಕಡಿಮೆಯಾಗುತ್ತದೆ. ಏಕೆಂದರೆ ಕಾನೂನು ಸೃಷ್ಟಿ ಪ್ರಕ್ರಿಯೆ ಸಮಾಜವನ್ನು ಕುರಿತಾಗಿರುತ್ತದೆ. ಎಲ್ಲವನ್ನೂ ಸಾಮಾನ್ಯೀಕರಿಸುತ್ತೇವೆ ಎಂದು ಹೊರಟರೆ ಅವುಗಳ ವಿರುದ್ಧ ಅಭಿಪ್ರಾಯಗಳು ಏಳುತ್ತವೆ. ಹೀಗಾಗಿ ಮಸೂದೆಗಳು ಕಾನೂನಾಗುವ ಪ್ರಕ್ರಿಯೆಗೇ ಅಡ್ಡಿಗಳು ಎದುರಾಗುತ್ತವೆ.

ವಕೀಲರು ತಮಗೆ ಬರುವ ಪ್ರಕರಣಗಳೆಲ್ಲವನ್ನೂ ಒಪ್ಪಿಕೊಳ್ಳುವುದರಿಂದ ಅವರ ಮೇಲಿನ ಹೊರೆ ಹೆಚ್ಚಾಗುತ್ತದೆ. ಇದರಿಂದ ಅವರು ಪ್ರಕರಣಗಳ ಮೇಲೆ ಸೂಕ್ಷ್ಮವಾಗಿ ಗಮನ ಹರಿಸಲಾಗುವುದಿಲ್ಲ. ಹೀಗಾಗಿ ವಿಚಾರಣೆಗೂ ತೊಂದರೆ ಎಂಬ ಆರೋಪವಿದೆ. ಇಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿ ಅಥವಾ ಕಡಿಮೆ ಎಂಬ ಪ್ರಶ್ನೆ ಬರುವುದಿಲ್ಲ. ಒಬ್ಬ ವಕೀಲ ಎಷ್ಟು ಸಂಘಟಿತನಾಗಿದ್ದಾನೆ ಎನ್ನುವುದು ಮುಖ್ಯ. ಅಮೆರಿಕ, ಬ್ರಿಟನ್‌ಗಳಲ್ಲಿ ವೈಯಕ್ತಿಕವಾಗಿ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲಿ 50–100 ವಕೀಲರು ಸಂಘಟಿತರಾಗಿ ಸಂಸ್ಥೆಗಳನ್ನು ಕಟ್ಟಿಕೊಳ್ಳುತ್ತಾರೆ. ಸಂಸ್ಥೆಯ ಮೂಲಕ ಪ್ರಕರಣಗಳನ್ನು ನಡೆಸುವುದರಿಂದ ಒತ್ತಡ ಕಡಿಮೆ. ಆ ಪದ್ಧತಿಯನ್ನು ಇಲ್ಲಿಯೂ ಅಳವಡಿಸಿಕೊಳ್ಳಬೇಕು.

ಒಬ್ಬ ವಕೀಲ ಚೆನ್ನಾಗಿ ವಕೀಲಿಕೆ ನಡೆಸುತ್ತಾನೆ ಎಂದರೆ ಸಹಜವಾಗಿಯೇ ಆತನ ಬಳಿ ಹೆಚ್ಚು ಜನ ಬರುತ್ತಾರೆ. ಇದು ಸ್ವತಂತ್ರ ವೃತ್ತಿಯಾಗಿರುವುದರಿಂದ ಇಂತಿಷ್ಟೇ ಪ್ರಕರಣಗಳನ್ನು ತೆಗೆದುಕೊಳ್ಳಬೇಕು ಎಂದು ನಿಯಂತ್ರಣ ಹೇರಲಾಗದು. ಆದರೆ ವಕೀಲ ತನ್ನಿಂದ ಸಾಧ್ಯವಾಗುವುದಕ್ಕಿಂತಲೂ ಹೆಚ್ಚು ಪ್ರಕರಣಗಳು ತನ್ನ ಬಳಿ ಬರುತ್ತಿವೆ ಎಂದಾಗ ಹಲವು ವಕೀಲರನ್ನು ಸೇರಿಸಿಕೊಂಡು ಒಂದು ಸಂಘ ರಚಿಸಬೇಕು. ಈ ರೀತಿಯ ವ್ಯವಸ್ಥೆ ನಮ್ಮಲ್ಲೂ ಬಂದಾಗ ವಕೀಲರ ವೃತ್ತಿಪರತೆ ಹೆಚ್ಚುತ್ತದೆ, ದಕ್ಷತೆಯೂ ವೃದ್ಧಿಯಾಗುತ್ತದೆ.

ವಕೀಲರು ಮತ್ತು ನ್ಯಾಯಾಧೀಶರು ಒಂದೇ ರಥದ ಎರಡು ಚಕ್ರಗಳಿದ್ದಂತೆ. ಎರಡೂ ಒಟ್ಟಿಗೇ ತಿರುಗಬೇಕು. ನ್ಯಾಯಾಧೀಶರು ಮತ್ತು ವಕೀಲರ ನಡುವಿನ ಮನಸ್ತಾಪ, ಸಂಘರ್ಷಗಳಿಂದ ವಿಚಾರಣೆ ವೇಗವಾಗಿ ನಡೆಯಲು ಅಡ್ಡಿಯಾಗುತ್ತಿದೆ ಎಂಬ ಕಲ್ಪನೆಗಳಿವೆ. ಆದರೆ ನನ್ನ ವೈಯಕ್ತಿಕ ಅನುಭವದ ಪ್ರಕಾರ, ನ್ಯಾಯಪೀಠ ಮತ್ತು ವಕೀಲರ ನಡುವೆ ಅತ್ಯಂತ ಸುಮಧುರವಾದ ಬಾಂಧವ್ಯ ಇರುವುದು ಭಾರತದಲ್ಲಿಯೇ. ಅದರಲ್ಲೂ ದಕ್ಷಿಣ ಭಾರತದಲ್ಲಿ ಅತ್ಯದ್ಭುತ ಸಂಬಂಧವಿದೆ.

ದಿನಕ್ಕೆ ಸಾವಿರಾರು ದಾವೆಗಳು ಬರುತ್ತವೆ. ಯಾವುದೋ ಒಂದೆರಡರಲ್ಲಿ ಮನಸ್ತಾಪಗಳು ಉಂಟಾಗಬಹುದು. ಆದರೆ ಅದನ್ನೇ ಪೀಠ ಮತ್ತು ವಕೀಲರ ಸಂಘದ ನಡುವೆ ಸಾಮರಸ್ಯ ಇಲ್ಲ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಇದರಿಂದ ವ್ಯವಸ್ಥೆಗೆ ತೊಂದರೆ ಆಗುತ್ತಿದೆ, ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ ಎನ್ನುವುದು ಅದರ ನೇತ್ಯಾತ್ಮಕ ವೈಭವೀಕರಣವಷ್ಟೇ.

ಪ್ರತ್ಯೇಕ ಘಟಕ ತೆರೆಯಬೇಕು
ಕಮರ್ಷಿಯಲ್‌ ವಿವಾದಗಳು ಭಾರತದಿಂದ ಆಚೆಗೇ ಹೋಗುತ್ತಿವೆ. ಸಿಂಗಪುರ, ಪ್ಯಾರಿಸ್‌ನ ಐಸಿಸಿ ಆರ್ಬಿಟ್ರೇಷನ್, ಲಂಡನ್ ಪೋರ್ಟ್‌ ಆಫ್ ಆರ್ಬಿಟ್ರೇಷನ್‌ ಅಥವಾ ನ್ಯೂಯಾರ್ಕ್‌ ಆರ್ಬಿಟ್ರೇಷನ್‌ಗಳಿಗೆ ಈ ವಿವಾದಗಳು ಹೋಗುತ್ತಿವೆ. ಸಿವಿಲ್ ಮತ್ತು ಅಪರಾಧ ಪ್ರತ್ಯೇಕ ಘಟಕಗಳಿರುವಂತೆ ಕಮರ್ಷಿಯಲ್ ವಿವಾದಗಳಿಗೆ ಪ್ರತಿ ಹೈಕೋರ್ಟ್‌ನಲ್ಲೂ ಪ್ರತ್ಯೇಕ ಘಟಕ ತೆರೆಯಬೇಕೆಂಬ ಪ್ರಸ್ತಾಪವಿದೆ.

ತ್ವರಿತ ವಿಚಾರಣೆಗೆ ಸರಳ ಮಾರ್ಗಗಳು
1. ನ್ಯಾಯಾಲಯ ಮತ್ತು ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸಬೇಕು.
2. ನ್ಯಾಯಾಧೀಶರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು.
3. ನ್ಯಾಯಾಲಯಗಳಲ್ಲಿನ ಸ್ಟೆನೊಗ್ರಾಫರ್‌, ಸಹಾಯಕ ಸಿಬ್ಬಂದಿಯ ದಕ್ಷತೆ ಹೆಚ್ಚಿಸಬೇಕು.
4. ಕಮರ್ಷಿಯಲ್ ವಿವಾದಗಳಿಗೆ ನೇರವಾಗಿ ಹೈಕೋರ್ಟ್‌ಗೇ ದಾವೆ ಹೋಗುವ ಅವಕಾಶ ಸಿಗಬೇಕು.
5. ನ್ಯಾಯಾಂಗದಲ್ಲಿ ಬದಲಾವಣೆ ಬಯಸುವ ಬದಲು, ಸಾಮಾಜಿಕ ಶಿಸ್ತು ಅಳವಡಿಕೆಯಾಗಬೇಕು. ಇದರಿಂದ ದಾವೆಗಳ ಪ್ರಮಾಣ ಸಹಜವಾಗಿಯೇ ತಗ್ಗುತ್ತದೆ.
6. ಮಾಹಿತಿ ತಂತ್ರಜ್ಞಾನದಲ್ಲಿ ಸಮರ್ಪಕ ಸುಧಾರಣೆ ಅಗತ್ಯ.

ಇನ್ನೂ ಬಾಕಿ ಇದೆ 1972ರ ಪ್ರಕರಣ!
ನ್ಯಾಯಾಲಯಗಳಲ್ಲಿ ಕೆಲವು ಪ್ರಕರಣಗಳು ಇತ್ಯರ್ಥವಾಗುವಷ್ಟರಲ್ಲಿ ಬರೀ ವರ್ಷಗಳಲ್ಲ, ಕೆಲವೊಮ್ಮೆ ನಾಲ್ಕೈದು ದಶಕಗಳೇ  ಉರುಳಿಹೋಗಿರುತ್ತವೆ. ಇದಕ್ಕೊಂದು   ನಿದರ್ಶನ ಇಲ್ಲಿದೆ.
ತಮ್ಮ ಹೆಸರು ಹೇಳಲಿಚ್ಛಿಸದ ವಕೀಲರೊಬ್ಬರು ‘ಪ್ರಜಾವಾಣಿ’ಗೆ ಈ ಮಾಹಿತಿ ನೀಡಿದ್ದಾರೆ:

ರಾಮಲಿಂಗಂ ಮೊದಲಿಯಾರ್‌ ಟ್ರಸ್ಟ್‌ ಬೆಂಗಳೂರಿನಲ್ಲಿ ಹಲವಾರು ಕಡೆ ಆಸ್ತಿ ಹೊಂದಿದೆ. 1972ರಲ್ಲಿ ಈ ಆಸ್ತಿಗಳ ವಿಲ್ ಮಾಡಲಾಗಿತ್ತು. ಆದರೆ ಆಸ್ತಿ ಹಂಚಿಕೆಯಲ್ಲಿ ತಮಗೇ ಈ ಆಸ್ತಿ ಸೇರಿದ್ದು ಎಂಬ ವಿವಾದಗಳು ಸದಸ್ಯರ ಮಧ್ಯೆ ಸೃಷ್ಟಿಯಾದವು.
ಇದರ ಬಗ್ಗೆ ಒಂದಾದ ಮೇಲೊಂದರಂತೆ ಹಲವಾರು ದಾವೆಗಳು ಕೋರ್ಟ್‌ ಮೆಟ್ಟಿಲೇರಿದವು. ಇಷ್ಟು ವರ್ಷಗಳು ಉರುಳಿದರೂ ಅವಿನ್ನೂ ಇತ್ಯರ್ಥವಾಗದೆ ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ.

**
ಕಾನೂನು ಉಲ್ಲಂಘಿಸಿ ಕೋರ್ಟ್‌ಗೆ ಹೋದರೆ ಅದು ಹೇಗೋ ವರ್ಷಾನುಗಟ್ಟಲೆ ತಳ್ಳಿಕೊಂಡು ಹೋಗುತ್ತದೆ ಎಂಬ ಭಂಡತನ ಜನರಲ್ಲಿದೆ.
**
ವಕೀಲರು ಮತ್ತು ನ್ಯಾಯಾಧೀಶರು ಒಂದೇ ರಥದ ಎರಡು ಚಕ್ರಗಳಿದ್ದಂತೆ. ವ್ಯವಸ್ಥೆ ಉತ್ತಮವಾಗಿ ಇರಬೇಕೆಂದರೆ ಎರಡೂ ಒಟ್ಟಿಗೇ ತಿರುಗಬೇಕು.

(ಲೇಖಕರು ವಕೀಲರು)
ನಿರೂಪಣೆ: ಅಮಿತ್ ಎಂ.ಎಸ್‌

Write A Comment