ಕರ್ನಾಟಕ

ಅಧಿವೇಶನ ಬಹಿಷ್ಕರಿಸದಿರಲು ಜೆಡಿಎಸ್‌ಗೆ ಬಿಜೆಪಿ ಮನವಿ

Pinterest LinkedIn Tumblr

prahallll

ಬೆಂಗಳೂರು, ಏ.17-ಬಿಬಿಎಂಪಿ ವಿಭಜನೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕರೆದಿರುವ ವಿಶೇಷ ತುರ್ತು ಅಧಿವೇಶನವನ್ನು ಜೆಡಿಎಸ್ ಬಹಿಷ್ಕರಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ಜೋಷಿ ಮನವಿ ಮಾಡಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ಅಧಿವೇಶನ ಬಹಿಷ್ಕರಿಸದಂತೆ ಮನವಿ ಮಾಡಿರುವುದಾಗಿ ತಿಳಿಸಿದರು.  ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಸರ್ಕಾರದ ವಿರುದ್ಧ ನಡೆಸಿದ

ರೀತಿಯಲ್ಲೇ ಬಿಬಿಎಂಪಿ ವಿಭಜನೆಗೂ ವಿರೋಧ ವ್ಯಕ್ತಪಡಿಸಬೇಕು. ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಪಾಲ್ಗೊಂಡು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು. ರಾಜ್ಯ ಸರ್ಕಾರಕ್ಕೆ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತಾಗಿದೆ. ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿ ಮೇ 30ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಸೂಚಿಸಿದೆ.

ಬಿಬಿಎಂಪಿಯನ್ನು ಮೂರು ಭಾಗವಾಗಿ ವಿಭಜಿಸುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದೆ ಸ್ಪಷ್ಟನೆ ಕೇಳಿ ವಾಪಸ್ಸು ಕಳುಹಿಸಿದ್ದರೂ ರಾಜ್ಯ ಸರ್ಕಾರ  ಈ ತೀರ್ಮಾನಗಳ ವಿರುದ್ಧ ನಡೆದುಕೊಳ್ಳುತ್ತಿದೆ. ವಿಶೇಷ ಅಧಿವೇಶನದಲ್ಲಿ ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ಯತ್ನ ಮಾಡುತ್ತಿದೆ. ಇದು ರಾಜ್ಯ ಸರ್ಕಾರದ ದರ್ಪದ ಪರಮಾವಧಿಯಾಗಿದೆ. ಬಿಬಿಎಂಪಿಯನ್ನು ವಿಭಜಿಸಲೇ ಬೇಕು ಎಂಬ ಹಠಕ್ಕೆ ಬಿದ್ದು ಸೋಲಿನ ಭೀತಿಯಿಂದ ಚುನಾವಣೆ ಮುಂದೂಡುವ ಯತ್ನಮಾಡುತ್ತಿದೆ ಎಂದು  ಅವರು ಟೀಕಿಸಿದರು.
ರಾಜ್ಯ ಸರ್ಕಾರ ಮಂಡಿಸಲಿರುವ ಬಿಬಿಎಂಪಿ ವಿಭಜನೆ ವಿಧೇಯಕವನ್ನು ಉಭಯ ಸದನಗಳಲ್ಲೂ ವಿರೋಧಿಸಿ ಶಕ್ತಿ ಮೀರಿ ಹೋರಾಟ ನಡೆಸಲಿದೆ ಎಂದು ಜೋಷಿ ಹೇಳಿದರು.

Write A Comment