ಕರ್ನಾಟಕ

ಯೋಗ್ಯರ ನೇಮಕವೇ ಸಮಸ್ಯೆ ಪರಿಹಾರಕ್ಕೆ ಇರುವ ಮಾನದಂಡ

Pinterest LinkedIn Tumblr

pvec11Ap15V S Malimath

-ವಿ.ಎಸ್‌. ಮಳಿಮಠ
ನ್ಯಾಯಾಲಯದ ಮೆಟ್ಟಿಲೇರುವ ಯಾವುದೇ ಪ್ರಕರಣಗಳ ವಿಚಾರಣೆಯನ್ನು  ಐದು ವರ್ಷದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂಬ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಅವರ ವಿಚಾರ ಒಳ್ಳೆಯದೇ. ಆದರೆ ಅದನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದನ್ನು ಅವರು ಎಲ್ಲೂ ಹೇಳಿಲ್ಲ.

ಪ್ರಕರಣಗಳ ಶೀಘ್ರ ಇತ್ಯರ್ಥದ ಪ್ರಶ್ನೆ ನಿನ್ನೆ ಮೊನ್ನೆಯ ಮಾತಲ್ಲ. ಕಳೆದ 50 ವರ್ಷಗಳಿಂದಲೂ ಇದೊಂದು ಪರಿಹರಿಸಲಾಗದ ರೋಗವಾಗಿ ಬೆಳೆದು ನಿಂತಿದೆ.  ಎಲ್ಲರೂ ಆಗಾಗ್ಗೆ ಇದನ್ನು ಪ್ರಸ್ತಾಪಿಸುತ್ತಲೇ ಬರುತ್ತಿದ್ದಾರೆ. ಆದರೆ ಗಮನಾರ್ಹ ಅಥವಾ ಚರಿತ್ರಾರ್ಹ ಫಲಿತಾಂಶಗಳು ಈತನಕ ಕಂಡು ಬಂದಿಲ್ಲ. ಕಕ್ಷಿದಾರರಂತೂ, ‘ನಾವು ಈ ಜನ್ಮದಲ್ಲಿ ತೀರ್ಪು ಪಡೆಯುತ್ತೇವೊ ಇಲ್ಲವೋ’ ಎಂಬಂತಹ ದಿಗಿಲಿನ ಸನ್ನಿವೇಶದಲ್ಲಿ ಕೋರ್ಟ್‌ಗಳನ್ನು ದೀನರಾಗಿ ದಿಟ್ಟಿಸುತ್ತಿರುವುದು  ದುರದೃಷ್ಟಕರ ಸಂಗತಿಯೇ ಸರಿ.

1983 ಮತ್ತು 1984ರಲ್ಲಿ ನಾನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದಾಗ ಪ್ರಕರಣಗಳ ವಿಲೇವಾರಿಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿತ್ತು. ನ್ಯಾಯದಾನದ ಗುಣಮಟ್ಟವೂ ಚೆನ್ನಾಗಿತ್ತು. ಇದು ನಾನೊಬ್ಬನೇ ಮಾಡಿದ್ದ ಕೆಲಸವಾಗಿರಲಿಲ್ಲ. ಎಲ್ಲರ ಸಹಯೋಗದಿಂದ ಸಾಧ್ಯವಾಗಿತ್ತು. ಒಬ್ಬ ಮುಖ್ಯ ನ್ಯಾಯಮೂರ್ತಿ ತನ್ನ ಅಧೀನ ನ್ಯಾಯಮೂರ್ತಿಗಳನ್ನು ಹೇಗೆ ದುಡಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಇದೆಲ್ಲ  ಅವಲಂಬಿತವಾಗುತ್ತದೆ.

ಯಾವಾಗ ನ್ಯಾಯಮೂರ್ತಿಗಳು ನಿವೃತ್ತರಾಗುತ್ತಾರೋ ಆ ಸಮಯಕ್ಕೆ ಸರಿಯಾಗಿ ಆ ಜಾಗವನ್ನು ಭರ್ತಿ ಮಾಡಬೇಕು. ಆದರೆ ಈ ಕೆಲಸ ಆಗುತ್ತಿಲ್ಲ. ಇದೇ ಈಗ ದೊಡ್ಡ ಸಮಸ್ಯೆಯಾಗಿದೆ. ಇದನ್ನು ನಾವು ಇನ್ಯಾರಿಗೋ ಹೇಳುವುದಲ್ಲ. ನಮ್ಮಷ್ಟಕ್ಕೆ ನಾವೇ ಕೇಳಿಕೊಳ್ಳಬೇಕು. ಪ್ರಕರಣಗಳು ದಾಖಲಾಗುವ ಸಂಖ್ಯೆಯನ್ನು ಆಧರಿಸಿ ಅದಕ್ಕೆ ತಕ್ಕಂತೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು ಮತ್ತು ಅವರ ಸದುಪಯೋಗ ಪಡೆಯಬೇಕು.

ಇದರ ಸಾಧಕ ಬಾಧಕಗಳೆಲ್ಲಕ್ಕೂ ಮುಖ್ಯ ನ್ಶಾಯಮೂರ್ತಿಗಳೇ ಹೊಣೆ.  ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ 1984– 1985ರಲ್ಲಿ ರಚಿಸಲಾಗಿದ್ದ  ಸಮಿತಿಗೆ ನಾನು  ಅಧ್ಯಕ್ಷನಾಗಿದ್ದಾಗ ಕಂಡುಕೊಂಡಿದ್ದ ಮಾರ್ಗವಿದು.

ಎರಡನೇ ಸಂಗತಿ ಎಂದರೆ, ಯೋಗ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು. ಯೋಗ್ಯತೆಯ ಆಧಾರವನ್ನು ಹೊರತುಪಡಿಸಿ ಬೇರಾವುದೇ ಮಾನದಂಡ ಸ್ವೀಕಾರಾರ್ಹವಲ್ಲ. ಗಂಡು, ಹೆಣ್ಣು, ಜಾತಿ ಯಾವುದೂ ಅಡ್ಡ ಬರಕೂಡದು. ನ್ಯಾಯ ಕೊಡುವಾಗ ರಾಜಿ ಮನೋಭಾವವಂತೂ ಸುಳಿಯಲೇಬಾರದು.

ನ್ಯಾಯಮೂರ್ತಿಗಳಿಗೆ ಸಮಯ ಪಾಲನೆ ಬಹುದೊಡ್ಡ ಸವಾಲು. ಅವರು ಕೋರ್ಟ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಸರಿಯಾಗಿ ಬಂದು ಕುಳಿತುಕೊಳ್ಳುವತ್ತ ಸದಾ ಗಮನ ಕೊಡಬೇಕು. ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು. ಹೆಚ್ಚೆಚ್ಚು  ಓದಿಕೊಳ್ಳಬೇಕು.

ಯಾವ ನ್ಯಾಯಮೂರ್ತಿ ಎಂತಹ ಪ್ರಕರಣಗಳ ವಿಲೇವಾರಿ ಮಾಡುವಲ್ಲಿ ಚುರುಕಾಗಿದ್ದಾರೋ, ತಜ್ಞರಿದ್ದಾರೋ ಅಂತಹ ಪ್ರಕರಣಗಳ ವಿಚಾರಣೆಗೆಂದೇ ಅವರನ್ನು ಬಿಟ್ಟುಬಿಡಬೇಕು. ನ್ಯಾಯಮಂಡಳಿಗಳ ಕಾರ್ಯ ನಿರ್ವಹಣೆ ಇದಕ್ಕೆ ಒಳ್ಳೆ ಉದಾಹರಣೆ. ನಿವೃತ್ತ ನ್ಯಾಯಮೂರ್ತಿಗಳನ್ನು ಹಂಗಾಮಿಯಾಗಿ ನೇಮಿಸಿಕೊಳ್ಳುವ ಪ್ರಯತ್ನಗಳೂ ನಡೆಯಬೇಕು.  ಇದಕ್ಕೆಲ್ಲ  ಸಂವಿಧಾನದಲ್ಲಿ ಅವಕಾಶವೂ ಇದೆ.

ಇನ್ನೊಂದು ಮುಖ್ಯ ಅಂಶವೆಂದರೆ, ನ್ಯಾಯಮೂರ್ತಿಗಳ ವರ್ಗಾವಣೆ. ನ್ಯಾಯಮೂರ್ತಿಗಳಿಗೆ ವರ್ಗಾವಣೆ ಎಂಬ ಪ್ರಕ್ರಿಯೆಯೇ ಸಲ್ಲದು. ಮೊದಲೆಲ್ಲ ಇಂತಹ ವ್ಯವಸ್ಥೆ ಇರಲಿಲ್ಲ. ಕೊಲಿಜಿಯಂ ವ್ಯವಸ್ಥೆ ಬಂದ ಮೇಲೆ ಎಲ್ಲ ಹಾಳಾಗಿ ಹೋಯಿತು. ಮೇಲಿನವರಿಗೆ ಬೆಣ್ಣೆ ಹಚ್ಚೋದು, ವಶೀಲಿ ಮಾಡೋದು, ಮರ್ಜಿ ಹಿಡಿಯೋದು… ಎಲ್ಲ ಶುರುವಾಯ್ತು. ಇಂತಹುದನ್ನೆಲ್ಲ ನಾನು ಕಣ್ಣಾರೆ ಕಂಡಿದ್ದೇನೆ.  ಈ ವಿಷಯವನ್ನು  ನಾನು ಅಂದಿನ ಸುಪ್ರೀಂಕೋರ್ಟ್‌ ಮುಖ್ಯ  ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ ಅವರಿಗೆ ಒಮ್ಮೆ ಕೇಳಿಯೂ ಇದ್ದೆ. ನ್ಯಾಯಮೂರ್ತಿಗಳು ಎಂದೂ ಯಾರ ಮುಂದೆ ತಲೆ ಬಾಗಬಾರದು. ಒಬ್ಬ ಮುನ್ಸೀಫ್‌ ಕೂಡಾ ಇದೇ ಮನೋಭಾವ ಇಟ್ಟುಕೊಂಡು ನಡೆಯಬೇಕು. ತಲೆ ಬಗ್ಗೋಕೆ ಶುರುವಾದರೆ  ಸ್ವಾತಂತ್ರ್ಯ ಹೋಯ್ತು.

ಇಂದು ಬೇರೆ ಬೇರೆ ಕಾರಣಗಳಿಂದಾಗಿ ಪ್ರಕರಣಗಳ ಸಂಖ್ಯೆ ಬೆಳೆಯುತ್ತಿದೆ. ಜನರೂ ಹೆಚ್ಚಾಗಿ ಕೋರ್ಟಿಗೆ ಬರುತ್ತಿದ್ದಾರೆ. ಇದರಿಂದ ನ್ಯಾಯಾಂಗದ ಮೇಲೆ ಒತ್ತಡ ಜಾಸ್ತಿಯಾಗಿದೆ. ಇಂತಹ ಸಂದರ್ಭದಲ್ಲಿ, ನ್ಯಾಯಮೂರ್ತಿಗಳ ಸೂಕ್ತ ನೇಮಕಕ್ಕೆ ಸಂಬಂಧಿಸಿದಂತೆ ಸರಿಯಾದ ಮಾರ್ಗ ಕಂಡುಕೊಳ್ಳಬೇಕು.

ಎಷ್ಟು ಪ್ರಕರಣಗಳನ್ನು ಇತ್ಯರ್ಥ ಮಾಡುತ್ತೇವೆ ಎಂಬುದು ದೊಡ್ಡದಲ್ಲ. ಎಷ್ಟರಮಟ್ಟಿಗೆ ನ್ಯಾಯ ಕೊಡುತ್ತೇವೆ ಎಂಬುದು ಮುಖ್ಯ. ಈ ವಿಷಯದಲ್ಲಿ ನಾವಿಂದು ಅತ್ಯಂತ ನೋವಿನ ಪರಿಸ್ಥಿತಿಯಲ್ಲಿ ಇದ್ದೇವೆ. ಎಲ್ಲ ಗೊತ್ತಿದ್ದರೂ ಪರಿಹರಿಸಲಾಗದ ದುಃಸ್ಥಿತಿಯಲ್ಲಿ ತೊಳಲಾಡುತ್ತಿದ್ದೇವೆ.  ನಾವೆಲ್ಲ ಜನಕ್ಕೆ ಭಾರಿ ಮೋಸ ಮಾಡಿದ್ದೇವೆ. ಇದು ಯಾರಿಗೂ ಸಂಕಟದ ವಿಷಯವಾಗಿ ಕಾಣುತ್ತಿಲ್ಲ.
ಪ್ರಕರಣಗಳ ಇತ್ಯರ್ಥದಲ್ಲಿ ನ್ಯಾಯಮೂರ್ತಿಗಳ ನೈತಿಕ ಗುಣಮಟ್ಟದ ಸುಧಾರಣೆ ಆದ್ಯತೆಯ ಅಂಶವಾಗಬೇಕು.

ಇಂದು ನ್ಯಾಯಮೂರ್ತಿಗಳ ಮೇಲೆ ಆಪಾದನೆಗಳು ಹೆಚ್ಚುತ್ತಿವೆ. ಇದಕ್ಕೆಲ್ಲ ಅವಕಾಶ ಕೊಡದಂತೆ ಅವರು ಇರಬೇಕು. ಗಾಂಧೀಜಿಯಂತಹ ಮಹಾತ್ಮನನ್ನು ಕಂಡ ಈ ದೇಶದಲ್ಲಿ ಇವತ್ತು ಎಲ್ಲ ಭ್ರಷ್ಟಾಚಾರಿಗಳಾಗಿದ್ದಾರೆ. ನೆಟ್ಟಗಿರುವವರು ಯಾರಿದ್ದಾರೆ ಎಂದು ಹುಡುಕಲು ಹೊರಟರೆ ಯಾರೂ ಸಿಗುವುದಿಲ್ಲ. ಒಬ್ಬ ಹತ್ತು ಪರ್ಸೆಂಟ್‌ ಭ್ರಷ್ಟನಾಗಿದ್ದರೆ,  ಮತ್ತೊಬ್ಬ ಎರಡು ಪರ್ಸೆಂಟ್‌ ಭ್ರಷ್ಟ ಆಗಿರುತ್ತಾನೆ. ಅಷ್ಟೇ ವ್ಯತ್ಯಾಸ.

ಅಸೆಂಬ್ಲಿಯಲ್ಲಿ ಕೂತು ಮೊಬೈಲ್‌ಗಳಲ್ಲಿ ಬೆತ್ತಲೆ ಹುಡುಗೀರನ್ನ ನೋಡೊ ಶಾಸಕರು ಇರುವಾಗ ಇನ್ಯಾವ ಗುಣಗಳನ್ನು ತಾನೇ ನಿರೀಕ್ಷೆ ಮಾಡಲು ಸಾಧ್ಯ?

ನ್ಯಾಯದ ಬಾಗಿಲು ಬಡಿದು ಬರುವ ಜನರಿಗೆ ನ್ಯಾಯ ಕೊಡಬೇಕಾದವನ  ಮನಸ್ಸು ಸೂಕ್ಷ್ಮವಾಗಿರಬೇಕು. ಹಾಗಾಗಿ ನ್ಯಾಯಮೂರ್ತಿಗಳು ಯಾವತ್ತೂ ಸೂಕ್ಷ್ಮ ಮನೋಭಾವವನ್ನು ಕಳೆದುಕೊಳ್ಳಬಾರದು. ನಾವಿಂದು ಎಲ್ಲ ಮೌಲ್ಯಗಳನ್ನೂ ಕೊಂದು ಹಾಕಿದ್ದೇವೆ.   ಸ್ವಾರ್ಥಿಗಳಾಗಿದ್ದೇವೆ. ಸುಖದ ಬೆನ್ನುಬಿದ್ದಿದ್ದೇವೆ.

ವಿಷಯ ಪ್ರವೀಣರನ್ನು ಬೇಡುತ್ತಿರುವ ಇಂದಿನ ಪ್ರಪಂಚದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯೂ ದಿನಮಾನಕ್ಕೆ ತಕ್ಕಂತೆ ದಾಪುಗಾಲು ಹಾಕಬೇಕು. ಕುಳಿತಲ್ಲೇ ಗುಂಡಿ ಒತ್ತಿದರೆ ನ್ಯಾಯ ಸಿಗುವ ದಿನ ಬರಬೇಕು.

ಮಂತ್ರಿಗಳಿಗಿಂತ ಜೋರು!
ನ್ಯಾಯಮೂರ್ತಿಗಳು ಕೋರ್ಟ್‌ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವಂತೆ ಇರಬೇಕು. ಆದರೆ ಇಂದು ನ್ಯಾಯಮೂರ್ತಿಗಳು ಮಂತ್ರಿಗಳಿಗಿಂತ ಜೋರಾಗಿದ್ದಾರೆ.

ಸಾಮಾನ್ಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೂ ಹೋಗುವಂತಹ ಜಾಯಮಾನ ಬೆಳೆಸಿಕೊಂಡಿದ್ದಾರೆ.
ಮಾಡೋ ಕೆಲಸ ಬಿಟ್ಟು ಊರೆಲ್ಲಾ ಅಡ್ಡಾಡುತ್ತಾರೆ. ಶನಿವಾರ– ಭಾನುವಾರ ಅಭ್ಯಾಸ ಮಾಡುವುದನ್ನು ಬಿಟ್ಟು ಈ ರೀತಿ ಅಡ್ಡಾಡಿದರೆ ಅವರ ಶಕ್ತಿ ಕುಂದುತ್ತದೆ.

***
ಎಷ್ಟು ಪ್ರಕರಣಗಳು ದಾಖಲಾಗುತ್ತವೆ ಎಂಬುದನ್ನು ಆಧರಿಸಿ ಅದಕ್ಕೆ ತಕ್ಕಂತೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳಬೇಕು ಮತ್ತು ಅವರ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು.

ಮುಖ್ಯಾಂಶಗಳು
* ನ್ಯಾಯಮೂರ್ತಿಗಳಿಗೆ ವರ್ಗಾವಣೆ ಸಲ್ಲದು

* ಹಂಗಾಮಿ ನ್ಯಾಯಮೂರ್ತಿಗಳ  ನೇಮಕ ಅಗತ್ಯ
* ನೈತಿಕತೆ ಗುಣಮಟ್ಟಕ್ಕೆ ಆದ್ಯತೆ ಇರಲಿ

(ಲೇಖಕರು ಕರ್ನಾಟಕ ಮತ್ತು ಕೇರಳ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ)
ನಿರೂಪಣೆ: ಬಿ.ಎಸ್.ಷಣ್ಮುಖಪ್ಪ

Write A Comment