ಕರ್ನಾಟಕ

ನಗರಗಳಲ್ಲಿ ಕುಟುಂಬ ಸಂಖ್ಯೆ ಹೆಚ್ಚಳ: ಉಡುಪಿ ಜಿಲ್ಲೆಯಲ್ಲಿ ಹೆಚ್ಚು, ಕಲಬುರ್ಗಿಯಲ್ಲಿ ಕಡಿಮೆ

Pinterest LinkedIn Tumblr

nagara15

-ವಿಜಯ್ ಜೋಷಿ
ಬೆಂಗಳೂರು: 2011ರ ನಂತರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಸಂಖ್ಯೆ 2.95 ಲಕ್ಷದಷ್ಟು (ಶೇಕಡ 4ರಷ್ಟು) ಹೆಚ್ಚಾಗಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶಗಳ ಕುಟುಂಬಗಳ ಸಂಖ್ಯೆ 5.90 ಲಕ್ಷ (ಶೇ 12ರಷ್ಟು) ಹೆಚ್ಚಾಗಿದೆ.

ರಾಜ್ಯದಲ್ಲಿ 2011ರಲ್ಲಿ 1.31 ಕೋಟಿ ಕುಟುಂಬಗಳು ಇದ್ದವು. ಈ ಕುಟುಂಬಗಳ ಒಟ್ಟು ಸಂಖ್ಯೆ ಈಗ 1.40 ಕೋಟಿಗೆ ಏರಿದೆ. 2011ರ ಸಾರ್ವತ್ರಿಕ ಜನಗಣತಿಯ ಅಂಕಿ–ಅಂಶ ಆಧರಿಸಿ ಈ ಲೆಕ್ಕಾಚಾರ ಸಿದ್ಧಪಡಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ವಾಸಿಸುವ ಕುಟುಂಬಗಳ ಸಂಖ್ಯೆಯಲ್ಲಿ ಈ ಅವಧಿಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಆದರೆ ಕಲಬುರ್ಗಿ ಜಿಲ್ಲೆಯಲ್ಲಿ ನಗರವಾಸಿ ಕುಟುಂಬಗಳ ಸಂಖ್ಯೆಯಲ್ಲಿ ಆಗಿರುವ ಏರಿಕೆ ಶೇ 7 ಮಾತ್ರ. ಇದು ರಾಜ್ಯದಲ್ಲಿ ಅತಿ ಕಡಿಮೆ ಪ್ರಮಾಣದ ಹೆಚ್ಚಳ.

ಉದ್ಯೋಗ, ಶಿಕ್ಷಣಕ್ಕಾಗಿ ಜನ ಹಳ್ಳಿಗಳಿಂದ ಪಟ್ಟಣ, ನಗರಗಳತ್ತ ವಲಸೆ ಹೋಗುತ್ತಿರುವ ಪ್ರಕ್ರಿಯೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಂಡುಬಂದಿದೆ. ಆದರೆ ಈ ಮೂರು ಜಿಲ್ಲೆಗಳನ್ನು ಹೊರತುಪಡಿಸಿದರೆ, ಯಾವುದೇ ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಟುಂಬಗಳ ಸಂಖ್ಯೆ 2011ರಿಂದ 2015ರ ನಡುವೆ ಕಡಿಮೆ ಆಗಿಲ್ಲ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳತ್ತ ನಡೆಯುತ್ತಿರುವ ವಲಸೆಯೂ ಗೊತ್ತಾಗುತ್ತದೆ. ನಗರ ಪ್ರದೇಶಗಳಿಗೆ ನೀಡಬೇಕಿರುವ ಮೂಲಸೌಕರ್ಯ, ಗ್ರಾಮೀಣ ಪ್ರದೇಶಗಳಲ್ಲೇ ಜನ ಉಳಿದುಕೊಳ್ಳುವಂತೆ ಮಾಡಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಇದು ಒಳನೋಟ ಒದಗಿಸುತ್ತದೆ ಎನ್ನುತ್ತಾರೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ.

ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಾರಣಕ್ಕೆ ವಿಶೇಷ ಸ್ಥಾನಮಾನ ಪಡೆದುಕೊಂಡಿರುವ ಹೈದರಾಬಾದ್ – ಕರ್ನಾಟಕ ಜಿಲ್ಲೆಗಳ ಪೈಕಿ ಬಳ್ಳಾರಿ (ಶೇ 24) ಮತ್ತು ಯಾದಗಿರಿ (ಶೇ 23) ಹೊರತುಪಡಿಸಿದರೆ ಬೇರೆ ಯಾವುದೇ ಜಿಲ್ಲೆಗಳ ನಗರವಾಸಿ ಕುಟುಂಬಗಳ ಏರಿಕೆ ಪ್ರಮಾಣ ಶೇಕಡ 20ರಷ್ಟನ್ನು ಮೀರಿಲ್ಲ.

ಬೀದರ್ ಜಿಲ್ಲೆಯ ನಗರವಾಸಿ ಕುಟುಂಬಗಳ ಹೆಚ್ಚಳ ಪ್ರಮಾಣ ಶೇ 8ರಷ್ಟಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 16ರಷ್ಟಿದೆ.

Write A Comment