ಕರ್ನಾಟಕ

18ರಂದು ಕರ್ನಾಟಕ ಬಂದ್ : ಪೊಲೀಸ್ ಬಂದೋಬಸ್ತ್

Pinterest LinkedIn Tumblr

Karnataka-bandh

ಬೆಂಗಳೂರು, ಏ.16- ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಇದೇ 18ರಂದು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಎಸ್.ಮೆಘರಿಕ್ ಇಂದಿಲ್ಲಿ ತಿಳಿಸಿದ್ದಾರೆ.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸ್ಥಳೀಯ ಪೊಲೀಸರ ಜೊತೆ ಆಯಾ ಜಿಲ್ಲೆಗಳಲ್ಲಿ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗುತ್ತದೆ.

ನಗರಗಳಲ್ಲಿ ಸಿಎಆರ್  ಫ್ಲಟೂನ್ ಇದೆ. ಸ್ಥಳೀಯ ಪೊಲೀಸರ ಜೊತೆ ಈ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಪಡೆ ಕರೆಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಜಿಲ್ಲಾ ಎಸ್ಪಿಗಳಿಗೆ ಮತ್ತು ಆಯಾ ನಗರದ ಆಯುಕ್ತರಿಗೆ ಈಗಾಗಲೇ ಬಂದೋಬಸ್ತ್ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದರು.  ಬಂದ್ ವೇಳೆ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲು ಈಗಾಗಲೇ ಎಲ್ಲ ಜಿಲ್ಲಾ ಎಸ್ಪಿಗಳಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದರು.

* ಬಂದ್‌ಗೆ ಒಕ್ಕಲಿಗರ ಸಂಘ ಬೆಂಬಲ
ಬೆಂಗಳೂರು, ಏ.16- ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ವಿರುದ್ದ ಕರೆ ನೀಡಿರುವ ಬಂದ್‌ಗೆ ರಾಜ್ಯ ಒಕ್ಕಲಿಗರ ಸಂಘ ಬೆಂಬಲ ವ್ಯಕ್ತಪಡಿಸಿದೆ.  ಏ.18ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಇದಕ್ಕೆ ರಾಜ್ಯ ಒಕ್ಕಲಿಗರ ಸಂಘ, ಜಯಕರ್ನಾಟಕ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.  ಕುಡಿಯುವ ನೀರಿನ ಈ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿರುವುದು ಅಭಿನಂದನೀಯ. ತಮಿಳುನಾಡು ಸರ್ಕಾರ ರಾಜಕಾರಣಕ್ಕಾಗಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ. ಇದನ್ನು   ಖಂಡಿಸುವುದು ರಾಜ್ಯದ  ಜನರ ಕರ್ತವ್ಯ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಕಾವೇರಿ ನದಿಯಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಂಡು ಕುಡಿಯುವ ನೀರು ಪೂರೈಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಜ್ಯ ಸರ್ಕಾರ ಯಾವುದೇ ವಿರೋಧವನ್ನು ಲೆಕ್ಕಿಸದೆ ಕೈಗೆತ್ತಿಕೊಳ್ಳಬೇಕೆಂದು ಜಯಕರ್ನಾಟಕ ಸಂಘಟನೆ ಆಗ್ರಹಿಸಿದೆ.

ಬಂದ್‌ಗೆ ಟ್ರಕ್ ಅಸೋಸಿಯೇಷನ್ ಬೆಂಬಲ
ಬೆಂಗಳೂರು, ಏ.16- ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಕನ್ನಡಪರ ಸಂಘಟನೆಗಳು ಏ.18ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಫೆಡರೇಷನ್ ಆಫ್ ಗೂಡ್ಸ್ ಟ್ರಕ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಟೆಂಪೋಬಾಬು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಪ್ರತಿ ಬಾರಿಯೂ ಜಲ ವಿವಾದದಲ್ಲಿ ಕ್ಯಾತೆ ತೆಗೆಯುತ್ತಿದೆ. ಮೇಕೆದಾಟು ಯೋಜನೆ, ಕುಡಿಯುವ ನೀರಿನ ಯೋಜನೆ ಇದಾಗಿರುವುದರಿಂದ ಇದನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಗೂಡ್ಸ್ ಟ್ರಕ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ರಾಜ್ಯ ಸರ್ಕಾರ ತಮಿಳುನಾಡಿನ ಬೆದರಿಕೆಗೆ ಹೆದರಬಾರದು. ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ನೀಡಬೇಕು. ಬಂದ್ ವೇಳೆ ಮೂರು ಸಾವಿರಕ್ಕೂ ಹೆಚ್ಚು ಸರಕು-ಸಾಗಾಣಿಕೆ ಟೆಂಪೋಗಳು ಭಾಗವಹಿಸಿ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದರು.

Write A Comment