ಕರ್ನಾಟಕ

ತುರ್ತು ಅಧಿವೇಶನ ಬಹಿಷ್ಕಾರ : ಗೌಡರ ಗುಡುಗು

Pinterest LinkedIn Tumblr

devegouda

ಬೆಂಗಳೂರು, ಏ.16- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜನೆ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕರೆದಿರುವ ವಿಶೇಷ ಅಧಿವೇಶನವನ್ನು ಕೈ ಬಿಡಬೇಕೆಂದು ಸಲಹೆ ಮಾಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ತಮ್ಮ ಪಕ್ಷದ ಶಾಸಕರಿಗೆ ಕಲಾಪ ಬಹಿಷ್ಕರಿಸುವಂತೆ ಸೂಚಿಸಿದ್ದಾರೆ. ಬಿಬಿಎಂಪಿ ವಿಭಜನೆ  ಮಾಡಬಾರದೆಂಬ ಪಕ್ಷದ ನಿಲುವಿನಲ್ಲಿ ಯಾವುದೇ  ಬದಲಾವಣೆ ಯಿಲ್ಲ. ವಿಶೇಷ  ಅಧಿವೇಶನದಲ್ಲಿ ಪಾಲ್ಗೊಳ್ಳಬಾರದೆಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಹಾಗೂ ವಿಧಾನ ಪರಿಷತ್‌ನ ಹಿರಿಯ  ನಾಯಕ ಬಸವರಾಜ ಹೊರಟ್ಟಿ ಅವರಿಗೆ ಸೂಚಿಸಿದ್ದೇನೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಲಾಪದಲ್ಲಿ ಪಾಲ್ಗೊಳ್ಳದಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಲಾಗಿದೆ. ಅಂತಿಮವಾಗಿ ಕುಮಾರಸ್ವಾಮಿ ಅವರು ತುರ್ತು ಶಾಸಕಾಂಗ ಸಭೆ ಕರೆದು ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಹೇಳಿದರು.

ಸೋಮವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ನಮ್ಮ ಪಕ್ಷದ ಶಾಸಕರು ಪಾಲ್ಗೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ. ಪ್ರತಿಭಟನೆ, ಬಾವಿಗಿಳಿದು ಧರಣಿ ನಡೆಸಿದರೂ ವ್ಯರ್ಥವಾಗುತ್ತದೆ.  ಕಾಂಗ್ರೆಸ್ ಸರ್ಕಾರಕ್ಕೆ ಬಹುಮತವಿರುವುದರಿಂದ ಮಸೂದೆಯನ್ನು ಅಂಗೀಕಾರ ಮಾಡಿಕೊಳ್ಳುತ್ತದೆ. ಇನ್ನು ಯಾವ ಪುರುಷಾರ್ಥಕ್ಕೆ ನಾವು ಸದನಕ್ಕೆ ಹಾಜರಾಗಬೇಕೆಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲಾದರೂ ತಮ್ಮ ಹಠಮಾರಿ ಧೋರಣೆ ಕೈ ಬಿಡಬೇಕು. ಹೈಕೋರ್ಟ್‌ನ ಏಕಸದಸ್ಯ ಪೀಠ ಈಗಾಗಲೇ ಮೇ 30ರೊಳಗೆ ಚುನಾವಣೆ ನಡೆಸಲು ಆದೇಶ ಮಾಡಿದೆ. ಏಕಸದಸ್ಯ ಪೀಠ ನೀಡಿರುವ ಆದೇಶಕ್ಕೆ ದ್ವಿಸದಸ್ಯ ಪೀಠ ನಿರಾಕರಣೆ ಮಾಡಿದೆ. ಮತ್ತೊಂದೆಡೆ ಸರ್ಕಾರ ಬಿಬಿಎಂಪಿ ವಿಭಜನೆ ಮಾಡಲು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಇಷ್ಟೆಲ್ಲ ಇದ್ದರೂ ಮುಖ್ಯಮಂತ್ರಿ ಏಕೆ ಹಠಮಾರಿ ಧೋರಣೆ ತೋರುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ವಿಭಜನೆ ಮಾಡಬಾರದೆಂದು ಪಾಲಿಕೆ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ. ಸದಸ್ಯರ ಅವಧಿ ಮುಗಿದ ಮೂರು ತಿಂಗಳೊಳಗೆ ಚುನಾವಣೆ ನಡೆಸಬೇಕೆಂದು ಕಾನೂನು ಇರುವಾಗ ಯಾವ ಕಾರಣಕ್ಕಾಗಿ ಚುನಾವಣೆ ಮುಂದೂಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಪ್ರಶ್ನಿಸಿದರು.  ದಿನಾಂಕ ಘೋಷಣೆ ಮಾಡಲಿ: ಚುನಾವಣಾ ಆಯೋಗ ಯಾರ ಅನುಮತಿಯನ್ನೂ ಕಾಯದೆ ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಬೇಕು. ಆಯೋಗ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಚುನಾವಣಾ ಆಯುಕ್ತರು ಕಾನೂನಿನ ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳುವಂತೆ ದೇವೇಗೌಡರು ಮನವಿ ಮಾಡಿದರು. ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ದುರ್ಬಲಗೊಳಿಸದಂತೆ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಅವರೇ ಕಾನೂನೊಂದನ್ನು ಜಾರಿ ಮಾಡಿದ್ದರು. ಅಂದು ಅವರಿಗೆ ಕಾನೂನಿನ ಅರಿವು ಇತ್ತೋ ಇಲ್ಲವೋ ಎಂಬುದನ್ನು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಚುನಾವಣಾ ದಿನಾಂಕ ಘೋಷಣೆಯಾದ ಮೇಲೆ ಯಾವುದೇ ನ್ಯಾಯಾಲಯಗಳು ಮಧ್ಯ ಪ್ರವೇಶ ಮಾಡಬಾರದೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಚುನಾವಣಾ ಆಯೋಗ ತನಗಿರುವ ಅಧಿಕಾರ ಬಳಸಿಕೊಂಡು ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ಗೌಡರು ಆಗ್ರಹಿಸಿದರು. ಸರ್ಕಾರ ಸಬೂಬು ಹೇಳದೆ ಚುನಾವಣೆ ನಡೆಸಲು ಮುಂದಾಗಬೇಕು. ಬಿಬಿಎಂಪಿಗೆ ಮೂವರು ಮೇಯರ್ ಮಾಡಿದರೂ ಅಷ್ಟೇ 60 ಮೇಯರ್ ಮಾಡಿದರೂ ಆಡಳಿತ ಸುಧಾರಣೆ ಮಾಡಲು ಸಾಧ್ಯವೇ ಎಂದು ವ್ಯಂಗ್ಯವಾಡಿದರು. ಅದೇ ಚಿಹ್ನೆಯಲ್ಲಿ ಸ್ಪರ್ಧೆ: ರಾಷ್ಟ್ರಮಟ್ಟದಲ್ಲಿ ಜನತಾ ಪರಿವಾರ ಒಗ್ಗೂಡಿದ್ದರೂ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಈಗಿರುವ ಪಕ್ಷದ ಚಿಹ್ನೆಯಡಿಯೇ ಸ್ಪರ್ಧೆ ಮಾಡುತ್ತದೆ. ಜೆಡಿಯು ರಾಜ್ಯಾಧ್ಯಕ್ಷ ನಾಡಗೌಡ ಅವರ ಜತೆ ಮಾತುಕತೆ ನಡೆಸಿ ಚುನಾವಣೆಯನ್ನು ಒಟ್ಟಿಗೆ ಎದುರಿಸುತ್ತೇವೆ. 198 ವಾರ್ಡ್‌ಗಳಲ್ಲೂ ಪಕ್ಷದ ಪರ ನಾನೇ ಪ್ರಚಾರ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ರಮೇಶ್‌ಬಾಬು, ರತನ್‌ಸಿಂಗ್ ಮತ್ತಿತರರಿದ್ದರು.

Write A Comment