ಕರ್ನಾಟಕ

ಕೆನ್ನೆ ಕೊಟ್ಟು ಸಿಎಮ್ ನಿಂದ ತಟ್ಟಿಸಿಕೊದ ಶಾಸಕ

Pinterest LinkedIn Tumblr

CM-Slap

ಬೆಂಗಳೂರು, ಏ.16- ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಒಬ್ಬ ಶಾಸಕರಿಗೆ ಪ್ರೀತಿಯಿಂದ ಕಪಾಳಮೋಕ್ಷ ಮಾಡಿದರೆ, ಮತ್ತೊಬ್ಬರಿಗೆ ಖಾರದ ಮಾತುಗಳಿಂದ ಬೆವರಿಳಿಸಿದ ಘಟನೆ ನಡೆಯಿತು. ಅಧಿಕೃತ ನಿವಾಸ ಕಾವೇರಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾದಾರರಿಗೆ ಮಾಹಿತಿ ನೀಡಿದ ನಂತರ ಹೊರಡುತ್ತಿದ್ದ ಮುಖ್ಯಮಂತ್ರಿ ಅವರಿಗೆ ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯಕ್ ಎದುರಾದರು. ಅವರನ್ನು ಕಂಡ ತಕ್ಷಣ ಏನ್ಲಾ ಎಂದು ತಮ್ಮ ಶೈಲಿಯಲ್ಲೇ ಮುಖ್ಯಮಂತ್ರಿ ವಿಚಾರಿಸಿಕೊಂಡರು. ಬೆಳಬೆಳಗ್ಗೇನೆ ಬೈಯ್ತೀರಾ ಎಂದು

ಗೊತ್ತಿತ್ತು ಎಂದು ಶಿವಮೂರ್ತಿ ಹೇಳಿದಾಗ, ಏನ್ಲಾ ಅಂದ್ರೆ ಬೈದಾ ಹಾಗೋ ಎಂದು ಹೇಳಿದ ಮುಖ್ಯಮಂತ್ರಿ ಅವರು, ಶಿವಮೂರ್ತಿಯವರ ಎಡ ಕೆನ್ನೆಗೆ ಮೃದುವಾಗಿ ತಟ್ಟಿದರು. ಅದೇಕೋ ಸುಮ್ಮನಿರಲಾಗದ ಶಿವಮೂರ್ತಿ ಬಲಕೆನ್ನೆಯನ್ನೂ ತೋರಿಸಿದರು. ಮುಖ್ಯಮಂತ್ರಿ ಅವರು ಜೋರಾಗಿಯೇ ಬಲಕೆನ್ನೆಗೆ ಮೋಕ್ಷ ಮಾಡಿದರು. ನಂತರ ಅವರ ಬೆನ್ನನ್ನು ಬಳಸಿ ತಬ್ಬಿ ಹಿಡಿದು ಪ್ರೀತಿಯಿಂದ ಕರೆದುಕೊಂಡು ಹೋದರು.

ಪಕ್ಕದಲ್ಲೇ ಇರುವ ಗೃಹ ಕಚೇರಿಕೃಷ್ಣಾಗೆ ಆಗಮಿಸಿದ ಮುಖ್ಯಮಂತ್ರಿ ಅವರು ಸಂಗೋಳ್ಳಿ ರಾಯಣ್ಣ ಕುರಿತು ಸಂಶೋಧನಾ ಗ್ರಂಥವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮ ಮುಗಿಸಿ ಹೊರಡಬೇಕು ಎನ್ನುವಾಗ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಪೊನ್ನಪ್ಪ ಸಂಜೆ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವಂತೆ ಮನವಿ ಮಾಡಿದರು.  ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಅಕಾಡೆಮಿಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವುದಿಲ್ಲವಂತೆ, ಬೆಳಗ್ಗೆಯಿಂದ ಪೊನ್ನಪ್ಪ ಒಂದೇ ಸಮನೆ ಅಳುತ್ತಿದ್ದಾರೆ ಎಂದು ಕಿಚಾಯಿಸಿದರು. ಇದ್ದಕ್ಕಿದ್ದಂತೆ ಮುಖ ಗಂಟು ಮಾಡಿಕೊಂಡ ಮುಖ್ಯಮಂತ್ರಿ ಅವರು ನಿಮಗೆ ಹೇಳಿದ್ದು ಯಾರು ಎಂದು ಕೇಳಿದರು. ರೇವಣ್ಣ ಅವರು, ಪಕ್ಕದಲ್ಲೇ ಇದ್ದ ಮೈಸೂರು ಜಿಲ್ಲೆಯ ಶಾಸಕ ಎಂ.ಕೆ.ಸೋಮಶೇಖರ್ ಅವರತ್ತ ಕೈ ತೋರಿಸಿದರು.
ಸಿಟ್ಟಾದ ಮುಖ್ಯಮಂತ್ರಿ ಅವರು ನಿಮಗೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದೆನೆ ಎಂದು ಪ್ರಶ್ನಿಸಿದರಲ್ಲದೆ, ಇಂತಹ ಆಟಗಳನ್ನು ಆಡಬಾರದು, ಗೊತ್ತಿದ್ದರೆ ಹೇಳಿ, ಇಲ್ಲದಿದ್ದರೆ ಸುಮ್ಮನಿರಿ, ನಾನು ಒಬ್ಬನಿದ್ದೇನೆ ಎಂದು ಅಧಿಕ ಪ್ರಸಂಗತನ ಬೇಡ ಎಂದು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮದಲ್ಲಿದ್ದ ಅಷ್ಟೂ ಜನರ ಎದುರು ಮುಖ್ಯಮಂತ್ರಿ ಅವರ ಟೀಕೆಯಿಂದ ಮನನೊಂದ ಸೋಮಶೇಖರ್ ಅವರು ಕೆಲ ಕಾಲ ಮೌನವಹಿಸಿದರು. ಸಾವರಿಸಿಕೊಂಡು ಮುಖ್ಯಮಂತ್ರಿ ಮೈಸೂರು ಜಿಲ್ಲೆಯ ಪ್ರವಾಸದಲ್ಲಿರುತ್ತಾರೆ. ಮಾಧ್ಯಮ ಅಕಾಡೆಮಿ ಕಾರ್ಯಕ್ರಮಕ್ಕೆ ಬಂದರೂ ಬರಬಹುದು, ಬರದೇ ಇದ್ದರೂ ಇರಬಹುದು ಎಂದು ಹೇಳಿದ್ದೆ ಎಂಬ ಸಮಜಾಯಿಸಿ ನೀಡಿದರು. ಇದರಿಂದ ಮುಖ್ಯಮಂತ್ರಿ ಅವರಿಗೆ ಸಮಾಧಾನವಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಸೋಮಶೇಖರ್ ಅವರು ಅಲ್ಲಿಂದ ನಾಪತ್ತೆಯಾದರು. ಸಿಎಂ ಅವರು ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಕರೆ ಮಾಡಿ, ನಾನು ಮೈಸೂರು ಪ್ರವಾಸದಲ್ಲಿರುತ್ತೇನೆ. ನನ್ನ ಪರವಾಗಿ ಮಾಧ್ಯಮ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಸೂಚನೆ ನೀಡಿದರು.

Write A Comment