ಕರ್ನಾಟಕ

ಇಲಿ ಪ್ರೇಮ ಪುರಾಣ

Pinterest LinkedIn Tumblr

kdec14 gulrat

ಪ್ರೀತಿ, ಪ್ರೇಮ, ಪ್ರಣಯ ಮನುಷ್ಯರಿಗಷ್ಟೇ ಸೀಮಿತವಲ್ಲ. ಹಾಗೆಯೇ ಪ್ರಿಯತಮೆಯನ್ನು ಒಲಿಸಿಕೊಳ್ಳಲು  ಪರದಾಡುವ ಪರಿಯೂ.

ಪ್ರಿಯತಮೆಯನ್ನು ಒಲಿಸಿಕೊಳ್ಳಲು ಪ್ರೇಮ ಗೀತೆಗಳನ್ನು ಹಾಡುವ ಪಡ್ಡೆ ಹುಡುಗರಂತೆಯೇ ಇಲಿಗಳೂ ವರ್ತಿಸುತ್ತವಂತೆ. ಹೆಣ್ಣು ಇಲಿಯನ್ನು ಒಲಿಸಿಕೊಳ್ಳಲು ಗಂಡು ಇಲಿಯೂ ಪ್ರೇಮಗೀತೆಗಳನ್ನು ಪರಿ‍ಪರಿಯಾಗಿ ಹಾಡುತ್ತವಂತೆ.

ಇದು ತಿಳಿದುಬಂದಿರುವುದು ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯಲ್ಲಿ. ಹೆಣ್ಣು ಇಲಿಯನ್ನು ತನ್ನತ್ತ ಸೆಳೆಯಲು ಬೇರೆ ಬೇರೆ ರೀತಿಯ ಧ್ವನಿಗಳನ್ನು ಹೊರಡಿಸುತ್ತದೆ ಗಂಡು ಇಲಿ. ಹೆಣ್ಣು ಇಲಿಯ ಮೂತ್ರದ ವಾಸನೆ ಮಾತ್ರ ಸಿಕ್ಕಿ, ಆ ಜಾಗದಲ್ಲಿ ಹೆಣ್ಣು ಇಲಿ ಕಾಣದಿದ್ದರೆ ತುಂಬಾ ಗಟ್ಟಿ ಧ್ವನಿಯಲ್ಲಿ ಹಾಡುತ್ತದೆ. ಇದನ್ನು ಕೇಳಿ ಹೆಣ್ಣು ಇಲಿ ಬರುತ್ತದೆ. ಅದು ಕಾಣಿಸಿಕೊಳ್ಳುತ್ತಿದ್ದಂತೆ ಗಂಡು ಇಲಿಯ ರಾಗವೇ ಬದಲಾಗುತ್ತದೆ. ಮೆದು ದನಿಯಲ್ಲಿ ಹಾಡಲು ಶುರು ಮಾಡುತ್ತದೆ’ ಎಂದಿದ್ದಾರೆ ನ್ಯೂರೋಬಯಾಲಜಿ ಪ್ರೊಫೆಸರ್ ಎರಿಕ್ ಜಾರ್ವಿಸ್.

ಇತ್ತೀಚೆಗೆ ಮನುಷ್ಯರಿಗಿಂತ ಪ್ರಾಣಿಗಳ ಸಂವಹನದ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಇಲಿಯ ಧ್ವನಿಯ ಏರಿಳಿತದ ಬಗ್ಗೆ ಕುತೂಹಲವೂ ಹುಟ್ಟಿಕೊಂಡಿತ್ತು.

‘ಗಂಡು ಇಲಿ ತನಗೆ ಸಂಗಾತಿ ಬೇಕೆನಿಸಿದಾಗ ಹೊರಡಿಸುವ ಈ ಧ್ವನಿ ತುಂಬಾ ಎತ್ತರದ ಸ್ವರದಲ್ಲಿರುತ್ತವೆ. 50 ಕಿಲೋ ಹರ್ಟ್ಸ್‌ನ ಸ್ವರದಲ್ಲಿರುತ್ತವೆ ಮತ್ತು ಇದು ಮನುಷ್ಯರಿಗೆ ಅಷ್ಟು ಬೇಗ ಕಿವಿಗೆ ಬೀಳುವುದಿಲ್ಲ. ಆದರೆ ಹೆಣ್ಣು ಇಲಿ ಕಾಣುತ್ತಿದ್ದಂತೆ ಬದಲಾಗುವ ಅದರ ಸ್ವರವನ್ನು ಗಮನಿಸಿದರೆ ಹಕ್ಕಿಯ ಕೂಗಿನಂತೆ ಇರುತ್ತದೆ’ ಎಂದಿದ್ದಾರೆ ಡ್ಯೂಕ್‌ನ ಸಂಶೋಧಕ ಜೊನಾತನ್ ಚಾಬಟ್. ಗಂಡು ಹಕ್ಕಿ ತನ್ನ ಸಂಗಾತಿಯ ಪ್ರೇಮಯಾಚಿಸುವ ಕೂಗಿನಂತೆಯೇ ಗಂಡು ಇಲಿಯ ಕೂಗೂ ಇರುತ್ತದೆ ಎಂದು ಹಕ್ಕಿಗೂ, ಇಲಿಗೂ ಹೋಲಿಸಿದ್ದಾರೆ.

ಹೆಚ್ಚಾಗಿ ಪ್ರಾಣಿಗಳು ತಮ್ಮ ತಾಯಿಯನ್ನು ಕರೆಯಲು ಈ ರೀತಿ ಬೇರೆ ಬೇರೆ ಧ್ವನಿ ಹೊರಡಿಸುತ್ತವೆ. ಆದರೆ ಇದು ಭಿನ್ನ. ಈ ಸಂವನಹ ಕಲೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಈ ಸಂಶೋಧನೆ ನಡೆಸಲಾಗಿದೆ ಎಂದು ವಿವರಿಸಿದರು. ಗಂಡು ಇಲಿಯನ್ನು ವಿವಿಧ ವಾತಾವರಣಗಳಲ್ಲಿ ಪರೀಕ್ಷಿಸಿ, ಅದರ ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ವಿಶ್ಲೇಷಿಸಿದ್ದಾರೆ ಅವರು.

ಸಂಶೋಧಕರ ಪ್ರಕಾರ, ಗಂಡು ಇಲಿಯು ತನ್ನ ಹಾಡಿನ ಮೂಲಕ ಹೆಣ್ಣು ಇಲಿಗೆ ‘ನನ್ನತ್ತ ಗಮನ ನೀಡು, ನಾನಿಲ್ಲಿದ್ದೇನೆ ಹಾಗೂ ನಿನಗಾಗಿ ಈ ಹಾಡುಗಳನ್ನು ಹಾಡುತ್ತಿದ್ದೇನೆ ನೋಡು’ ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತವಂತೆ. ನಂತರ ಹೆಣ್ಣು ಇಲಿಯು ಬಂದಾಗ ಸರಳವಾಗಿ ಹಾಡಲು ಶುರು ಮಾಡುತ್ತದೆ. ಇದು ಇಲಿಗಳ ಸಂವಹನ ಕಲೆಯೂ ಹೌದು.

‘ಗಂಡು ಇಲಿ, ಹೆಣ್ಣು ಇಲಿಯನ್ನು ಆಕರ್ಷಿಸಲು ಎರಡು ರೀತಿಯ ಹಾಡುಗಳನ್ನು ಹಾಡುತ್ತದೆ. ಈ ಹಾಡಿನಲ್ಲಿ  ಪ್ರತ್ಯೇಕ ಉಚ್ಚಾರಣೆಯೂ ಗಮನಕ್ಕೆ ಬಂದಿದೆ’ ಎಂದಿದ್ದಾರೆ ಚಬೌಟ್. ಈ ಸಂಶೋಧನೆಯು ಫ್ರಂಟಿಯರ್ಸ್ ಆಫ್ ಬಿಹೇವಿಯರಲ್ ನ್ಯೂರೊಸೈನ್ಸ್‌ನಲ್ಲಿ ಪ್ರಕಟಗೊಂಡಿತ್ತು.

Write A Comment