ಕರ್ನಾಟಕ

ತೆರವು ಕಾರ್ಯಾಚರಣೆ ಕೈಗೊಳ್ಳಲು ಸಿದ್ಧತೆ: ನೀರು, ವಿದ್ಯುತ್‌ ಸಂಪರ್ಕ ಸ್ಥಗಿತಕ್ಕೆ ಚಿಂತನೆ; ಗೋವಾದ ಬೈನಾ ಕನ್ನಡಿಗರು ಮತ್ತಷ್ಟು ಕಂಗಾಲು

Pinterest LinkedIn Tumblr

pvec13aprdckar2ep

ಕಾರವಾರ:  ಬೈನಾದಲ್ಲಿನ 205 ಮನೆಗಳ ವಿದ್ಯುತ್‌ ಸಂಪರ್ಕವನ್ನು 24 ಗಂಟೆಯೊಳಗೆ ಕಡಿತಗೊಳಿಸಲಾಗುವುದು ಎಂದು ವಿದ್ಯುತ್‌ ಇಲಾಖೆಯ ವಾಸ್ಕೋ ಉಪವಿಭಾಗೀಯ ಕಚೇರಿಯಿಂದ ಸೋಮವಾರ ಸಂಜೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಎಲ್ಲ ಮನೆಗಳಿಗೂ  ನೋಟಿಸ್‌ ಜಾರಿಗೊಳಿಸಲಾಗಿದೆ. ಇದರಿಂದಾಗಿ ಇನ್ನೆರಡು ದಿನಗಳಲ್ಲಿ ತೆರವು ಕಾರ್ಯಾಚರಣೆ ನಡೆಯುವುದು ಬಹುತೇಕ ಖಚಿತವಾಗಿದೆ. ದಕ್ಷಿಣ ಗೋವಾ ಜಿಲ್ಲಾಡಳಿತವು ತೆರವು ಕಾರ್ಯಾಚರಣೆಗೆ ಆಂತರಿಕವಾಗಿ ಸಿದ್ಧತಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಜಿಲ್ಲಾಡಳಿತವು ಸೂಕ್ತ ಪೊಲೀಸ್‌ ಭದ್ರತೆಯಲ್ಲಿ ಮನೆಗಳನ್ನು ತೆರವುಗೊಳಿಸಲು ಅಣಿಯಾಗುತ್ತಿದೆ.

ಇದಕ್ಕಾಗಿ ಜಿಲ್ಲಾಡಳಿತವು ಹಂತ ಹಂತವಾಗಿ ವಿವಿಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಾ ಬಂದಿದೆ. ಗೋವಾ ಸರ್ಕಾರದ ಈ ಕ್ರಮದಿಂದಾಗಿ, ನೆಲೆ ಕಳೆದುಕೊಳ್ಳುವ ಭೀತಿಯಲ್ಲಿರುವ ನೂರಾರು ಕನ್ನಡಿಗರು ಇದರಿಂದ ಮತ್ತಷ್ಟು ಕಂಗಾಲಾಗಿದ್ದಾರೆ.
ಸೋಮವಾರದಿಂದಲೇ ನೀರು, ವಿದ್ಯುತ್‌ ಸ್ಥಗಿತವಾಗುವ ಸಾಧ್ಯತೆ ಇದೆ.

ಅಲ್ಲದೇ ಇದೇ 15ರಂದು ಬೆಳಿಗ್ಗೆ ಮನೆಗಳ ತೆರವು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಬೈನಾದಲ್ಲಿನ ಮನೆಗಳನ್ನು ಕೆಡವಿಯೇ ತೀರುತ್ತೇವೆ ಎಂದು ಗೋವಾ ಇಂಧನ ಸಚಿವ ಮಿಲಿಂದ್‌ ನಾಯಕ್‌ ಕೂಡ ಹೇಳಿದ್ದಾರೆ.

ತೆರವಿಗೆ ಸಿದ್ಧತೆ: 25 ಜೆಸಿಬಿಗಳೊಂದಿಗೆ ಮನೆಗಳನ್ನು ನೆಲಸಮಗೊಳಿಸಲು ಅಲ್ಲಿನ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ತೆರವು ಕಾರ್ಯಾಚರಣೆಗಾಗಿ 2,500 ಪೊಲೀಸರು ಹಾಗೂ 25ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ. ಆದರೆ ಸ್ಥಳದಲ್ಲಿ ಇದುವರೆಗೆ ಯಾವುದೇ ಪೊಲೀಸ್‌ ಪಡೆಯಾಗಲಿ, ಅಧಿಕಾರಿಗಳಾ ಗಲಿ ಬೀಡುಬಿಟ್ಟಿಲ್ಲ.

ಧರಣಿ 2ನೇ ದಿನಕ್ಕೆ: ಈ ನಡುವೆ, ಬೈನಾ ಕನ್ನಡಿಗರ ಪುನರ್ವಸತಿಗೆ ಕರ್ನಾಟಕ ಸರ್ಕಾರ ₹100 ಕೋಟಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಶಾಸಕ ನಡಹಳ್ಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ನೂರಾರು ಮಹಿಳೆಯರು, ಮಕ್ಕಳು ಸಹ ಧರಣಿಯಲ್ಲಿ ಪಾಲ್ಗೊಂಡಿದ್ದರು. ಶಾಸಕರು ರಾತ್ರಿ ಅಲ್ಲಿನ ಗುಡಿಸಲಿ
ನಲ್ಲಿಯೇ ವಾಸ್ತವ್ಯ ಹೂಡಿದ್ದರು.

ಸರ್ಕಾರಕ್ಕೆ ವರದಿ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆಗೆ ಮೇರೆಗೆ ಗೋವಾದ ಬೈನಾಕ್ಕೆ ಸೋಮವಾರ ತೆರಳಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್‌, ದಕ್ಷಿಣ ಗೋವಾದ ಕಲೆಕ್ಟರ್‌ ಸಚಿನ್‌ ಸಿಂಧೆ ಹಾಗೂ ಬೈನಾ ಕನ್ನಡಿಗರಿಂದ ಮಾಹಿತಿ ಪಡೆದಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

‘ಅಸುರಕ್ಷಿತ ವಲಯದಲ್ಲಿರುವುದರಿಂದ ಬೈನಾ ಕಡಲತೀರದ ಜನರನ್ನು ತೆರವುಗೊಳಿಸಲಾಗುತ್ತಿದೆ.ಅಲ್ಲದೇ ಅತಿಕ್ರಮಣ ತೆರವುಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್‌ ಆದೇಶ ಕೂಡ ಇರುವುದರಿಂದ ತೆರವು ಅನಿವಾರ್ಯವಾಗಲಿದೆ’ ಎಂದು ದಕ್ಷಿಣಾ ಗೋವಾದ ಕಲೆಕ್ಟರ್‌ ಸಚಿನ್‌ ಸಿಂಧೆ  ಉಜ್ವಲ್‌ಕುಮಾರ್‌ ಅವರಿಗೆ ತಿಳಿಸಿದ್ದಾರೆ.

Write A Comment