ಕರ್ನಾಟಕ

ಗೃಹಬಂಧನ, ಕಚ್ಚಿ ಚಿತ್ರಹಿಂಸೆ; ಮಹಿಳೆ ಸಂಬಂಧಿಕರಿಂದ ಪತಿಗೆ ಹಿಗ್ಗಾಮುಗ್ಗಾ ಥಳಿತ

Pinterest LinkedIn Tumblr

pvec13april15h-Assault-new

ಬೆಂಗಳೂರು: ರಿಯಲ್‌ ಎಸ್ಟೇಟ್ ಉದ್ಯಮಿಯೊಬ್ಬ ವರದಕ್ಷಿಣೆ ಹಣಕ್ಕಾಗಿ ಪತ್ನಿಯನ್ನು ಗೃಹಬಂಧನದಲ್ಲಿರಿಸಿ, ದೇಹದ ವಿವಿಧೆಡೆ ರಕ್ತ ಬರುವಂತೆ ಕಚ್ಚಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ವಿಜಯನಗರದ ಮೂಡಲಪಾಳ್ಯದಲ್ಲಿ ನಡೆದಿದೆ.

ಪತಿ ವೇಣುಗೋಪಾಲ್‌ನ ಕ್ರೌರ್ಯದಿಂದ ಗಾಯಗೊಂಡಿರುವ ಶೋಭಾ, ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯ ವರ್ತನೆಯಿಂದ ಆಕ್ರೋಶಗೊಂಡ ಗಾಯಾಳು ಸಂಬಂಧಿಕರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

15 ದಿನಗಳಿಂದ ಅನ್ನ– ನೀರು ಕೊಡದೆ ಪತ್ನಿಯನ್ನು ಕೂಡಿಟ್ಟಿರುವ ಆರೋಪಿ, ಮುಖ, ಕುತ್ತಿಗೆ, ಬೆನ್ನು, ಎದೆ ಹಾಗೂ ಗುಪ್ತಾಂಗದ ಬಳಿ ಕಚ್ಚಿದ್ದಾನೆ. ದೇಹದ ತುಂಬೆಲ್ಲಾ ಹಲ್ಲಿನ ಗುರುತುಗಳು ನೆಟ್ಟಿವೆ. ತಂಗಿಯನ್ನು ಹಬ್ಬಕ್ಕೆ ಕರೆಯಲು ಗಾಯಾಳುವಿನ  ಅಣ್ಣ ಸುದರ್ಶನ್ ಶನಿವಾರ ಮಧ್ಯಾಹ್ನ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ವೇಣುಗೋಪಾಲ್ ಮೂಲತಃ ಮಾಗಡಿ ತಾಲ್ಲೂಕಿನ ಕುತ್ತಿನಗೆರೆ ಗ್ರಾಮದವನು. ತಾನು ಬ್ಯಾಂಕ್‌ ಉದ್ಯೋಗಿ ಎಂದು ಸುಳ್ಳು ಹೇಳಿ ಶೋಭಾಳನ್ನು  ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ವರದಕ್ಷಿಣೆ ರೂಪದಲ್ಲಿ ₨ 2 ಲಕ್ಷ ನಗದು ಹಾಗೂ ಒಡವೆಗಳನ್ನು ಕೊಟ್ಟಿದ್ದೆವು. ಆತ ನಿರುದ್ಯೋಗಿ ಎಂಬುದು ಎರಡು ತಿಂಗಳ ನಂತರ ಗೊತ್ತಾಯಿತು. ವರದಕ್ಷಿಣೆ ಹಣವನ್ನೆಲ್ಲ ತಿಂದು ತೇಗಿದ ಆತ, ಮತ್ತೆ ಹಣಕ್ಕಾಗಿ ಪೀಡಿಸಲು ಆರಂಭಿಸಿದ್ದ’ ಎಂದು ಶೋಭಾ ಅಣ್ಣ ಸುದರ್ಶನ್  ತಿಳಿಸಿದರು.

‘ಹಣ ತರಲು ನಿರಾಕರಿಸಿದ ಕಾರಣಕ್ಕೆ ಈಗಾಗಲೇ ಮೂರು ಬಾರಿ ಶೋಭಾಳನ್ನು ಮನೆಯಿಂದ ಆಚೆ ಹಾಕಿದ್ದ. ಆತ ಕಿರುಕುಳ ನೀಡುತ್ತಿರುವ ಸಂಬಂಧ ಈ ಹಿಂದೆಯೇ ವಿಜಯನಗರ, ರಾಜಗೋಪಾಲನಗರ ಹಾಗೂ ಬಸವನಗುಡಿ ಮಹಿಳಾ ಠಾಣೆಗಳಲ್ಲಿ ದೂರು ಕೊಟ್ಟಿದ್ದೆವು. ಪ್ರತಿ ಬಾರಿಯೂ ರಾಜಿಯಾಗಿ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಆತ, ಕೆಲ ದಿನಗಳಲ್ಲೇ ಮತ್ತೆ ತನ್ನ ಅಸಲಿ ಬಣ್ಣ ತೋರಿಸುತ್ತಿದ್ದ. ಈ ಬಾರಿ ತುಂಬಾ ಹೀನಾಯವಾಗಿ ನಡೆದುಕೊಂಡಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಬ್ಬಕ್ಕೆ ಕರೆಯಲು ಮಧ್ಯಾಹ್ನ 3.30ಕ್ಕೆ ಮನೆ ಸಮೀಪ ಹೋಗಿದ್ದೆ. ಆಗ ಒಳಗಿನಿಂದ ತಂಗಿಯ ಚೀರಾಟ ಕೇಳಿಸುತ್ತಿತ್ತು. ಕಿಟಕಿ ಮೂಲಕ ನೋಡಿದಾಗ ಆತ, ಆಕೆಯ ಕೈಗಳನ್ನು ಕಾಲಿನಿಂದ ತುಳಿದುಕೊಂಡಿದ್ದ. ಕೂಡಲೇ ಬಾಗಿಲು ಮುರಿದು ಒಳಗೆ ಹೋದೆವು. ಆಗ ಆರೋಪಿ ನಮ್ಮ ಮೇಲೂ ಹಲ್ಲೆಗೆ ಯತ್ನಿಸಿದ.  ಜತೆಗಿದ್ದ ಸಂಬಂಧಿಕರು ಆತನನ್ನು ಥಳಿಸಿದರು. ನಂತರ ತಂಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ವಿವರಿಸಿದರು.

‘ಕೃತ್ಯದ ಹಿಂದೆ ಆತನ ತಂದೆ ಆಂಜನಪ್ಪ ಹಾಗೂ ತಾಯಿ ಪಾರ್ವತಮ್ಮ ಅವರ ಕುಮ್ಮಕ್ಕೂ ಇದೆ. ಘಟನೆ ವೇಳೆ ಅವರಿಬ್ಬರೂ ಮನೆಯಲ್ಲಿರಲಿಲ್ಲ. ಜತೆಗೆ ಅವರ ಸಂಬಂಧಿಕರಾದ ವೆಂಕಟಾಚಲಯ್ಯ ಹಾಗೂ ಗೋವಿಂದರಾಜು ಸಹ ಆರೋಪಿಗೆ ಮತ್ತೊಂದು ಮದುವೆ ಮಾಡಲು ಓಡಾಡುತ್ತಿದ್ದರು. ಹೀಗಾಗಿ ಶೋಭಾಳನ್ನು ಮನೆಯಿಂದ ಹೊರ ಕಳುಹಿಸಲು ಆತನಿಗೆ ಆಗಾಗ್ಗೆ ಕಿವಿ ಚುಚ್ಚುತ್ತಿದ್ದರು. ಹೀಗಾಗಿ ಅವರ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ಸುದರ್ಶನ್ ಆರೋಪಿಸಿದರು.

Write A Comment