ಕನ್ನಡ ವಾರ್ತೆಗಳು

ಯಲಹಂಕ: ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಐದು ಅಡಿ ಮಳೆನೀರು ಸಂಗ್ರಹ: ಸವಾರರ ಪರದಾಟ; ವಾಹನ ಸಂಚಾರ ಅಸ್ತವ್ಯಸ್ತ

Pinterest LinkedIn Tumblr

pvec14shrylk-rain

ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದ ಯಲಹಂಕದ ಸರ್ಕಾರಿ ಪದವಿಪೂರ್ವ ಕಾಲೇಜು ಸಮೀಪದಲ್ಲಿರುವ ರೈಲ್ವೆ ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು

ಬೆಂಗಳೂರು: ಸೋಮವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಯಲಹಂಕದ ಸರ್ಕಾರಿ ಪದವಿಪೂರ್ವ ಕಾಲೇಜು ಸಮೀಪದಲ್ಲಿರುವ ರೈಲ್ವೆ ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲಿ ನೀರುನಿಂತ ಪರಿಣಾಮ ಸಂಚಾರದ ಒತ್ತಡ ಉಂಟಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

ಮಧ್ಯಾಹ್ನ 3 ಗಂಟೆಗೆ ಮಳೆ ಆರಂಭವಾಗಿ ಕೆಲವೇ ಹೊತ್ತಿನಲ್ಲಿ ರೈಲ್ವೆ ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲಿ ಸುಮಾರು 5 ಅಡಿಗಳಷ್ಟು ನೀರು ನಿಂತಿತು. ಇದರಿಂದ ನಗರದ ಕಡೆಯಿಂದ ಬರುವ, ಯಲಹಂಕದ ಮೂಲಕ ಹಲವಾರು ಗ್ರಾಮಗಳಿಗೆ ತೆರಳುವ ವಾಹನಗಳು ಹಾಗೂ ದೊಡ್ಡಬಳ್ಳಾಪುರ ಮುಖ್ಯರಸ್ತೆ ಕಡೆಯಿಂದ ಬಂದು, ಯಲಹಂಕದ ಮೂಲಕ ನಗರದ ಹಾಗೂ ದೇವನಹಳ್ಳಿ ಕಡೆಗೆ ಸಂಚರಿಸುವ ವಾಹನ  ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.

ಐದು ಗಂಟೆಗೂ ಹೆಚ್ಚುಕಾಲ ಸಂಚಾರದ ಒತ್ತಡ ಉಂಟಾದ ಪರಿಣಾಮ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಸಿಆರ್‌ಪಿಎಫ್‌, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮುಖ್ಯರಸ್ತೆಯ ಬಾಗಲೂರು ಕ್ರಾಸ್‌ ಹಾಗೂ ಜಕ್ಕೂರು ಸಿಗ್ನಲ್‌ವರೆಗೂ ವಾಹನಗಳು ಸಾಲುಗಟ್ಟಿ ನಿಂತವು. ಇದರಿಂದ ಸಂಚಾರ ಪೊಲೀಸರು ಸಂಚಾರದ ಒತ್ತಡವನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು.

ನಂತರ ಸಂಚಾರ ಪೊಲೀಸರು ಯಲಹಂಕದ ಮೂಲಕ ನಗರದ ಕಡೆಗೆ ತೆರಳುವ ವಾಹನಗಳನ್ನು ಎನ್‌ಇಎಸ್‌ ವೃತ್ತದ ಮೂಲಕ ಅಳ್ಳಾಳಸಂದ್ರ ಕೆರೆ ಹಾಗೂ ನ್ಯಾಯಾಂಗಬಡಾವಣೆ ಮಾರ್ಗವಾಗಿ ನಗರದ ಕಡೆಗೆ ತೆರಳಲು ಅನುವು ಮಾಡಿಕೊಟ್ಟರು. ಇದರಿಂದ ಆ ಪ್ರದೇಶಗಳಲ್ಲಿಯೂ ಸಂಚಾರ ಅಸ್ತವ್ಯಸ್ತಗೊಂಡು ವಾಹನಸವಾರರು ಪರದಾಡುವಂತಾಯಿತು.

ನಂತರ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ, ಈ ಜಾಗದಿಂದ ಸಂಪರ್ಕ ಹೊಂದಿದ್ದ ಇನ್ನೊಂದು ಜಾಗದಲ್ಲಿ ಒಳಚರಂಡಿಯನ್ನು ತೆರೆದು, ಸೇತುವೆ ಕೆಳಭಾಗದಲ್ಲಿ ಸಂಗ್ರಹವಾಗಿದ್ದ ನೀರು ಹರಿದುಹೋಗಲು ಅವಕಾಶ ಮಾಡಿಕೊಟ್ಟರು. ಭಾನುವಾರ ಸಹ ಇದೇ ರೀತಿ ನೀರು ನಿಂತು ವಾಹನ ಸಂಚಾರದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಯ ಉಂಟಾಗಿತ್ತು.

Write A Comment