ಬೆಂಗಳೂರು, ಏ.11- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟಪಟ್ಟು ಸಚಿವ ಸ್ಥಾನ ಕೊಟ್ಟರೆ ಒಪ್ಪಿಕೊಳ್ಳುತ್ತೇನೆ.ವಿಧಾನಸಭಾಧ್ಯಕ್ಷ ಸ್ಥಾನ ನನಗೆ ಬೇಡ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಬಸವರಾಜರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಐದು ಬಾರಿ ಶಾಸಕನಾಗಿ, ಒಮ್ಮೆ ಸಂಸದನಾಗಿ ಕೆಲಸ ಮಾಡಿದ ಅನುಭವವಿದೆ. ಸಚಿವ ಸ್ಥಾನ ಕೊಡಿ ಎಂದು ನಾನು ಬೇಡುವುದಿಲ್ಲ. ಕೊಡದೇ ಇದ್ದರೂ ನನಗೇನು ನಷ್ಟವಿಲ್ಲ. ನಾನು ಸಂಬಳ, ಮನೆ ಬಾಡಿಗೆ ಪಡೆಯುವುದಿಲ್ಲ.
ಓಡಾಟದ ಖರ್ಚಿಗಾಗಿ ಪೆಟ್ರೋಲ್ ಶುಲ್ಕವನ್ನು ಪಡೆದುಕೊಳ್ಳುತ್ತೇನೆ. ಸಚಿವ ಸ್ಥಾನ ಕೊಟ್ಟರೆ ಚೆನ್ನಾಗಿ ಕೆಲಸ ಮಾಡುತ್ತೇನೆ. ಕೊಡದೆ ಇದ್ದರೆ ಚಿಂತೆ ಇಲ್ಲ ಎಂದು ಹೇಳಿದರು. ತಮ್ಮ ಪಕ್ಷದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರ ಕಾಂಗ್ರೆಸ್ ಸರ್ಕಾರ ನೀರಾವರಿಗೆ ಕಡಿಮೆ ಅನುದಾನ ನೀಡಿದೆ ಎಂಬ ಆರೋಪವನ್ನು ರಾಯರೆಡ್ಡಿ ತಳ್ಳಿ ಹಾಕಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಕರ ಅಸ್ತಿತ್ವಕ್ಕೆ ಬಂದ ನಂತರ ನೀರಾವರಿಗೆ ಅನುದಾನ ಕಡಿಮೆಯಾಗಿದೆ. ಜಗದೀಶ್ ಶೆಟ್ಟರ್ ಕೂಡ ಕೇವಲ 9ಸಾವಿರ ಕೋಟಿ ನೀರಾವರಿಗೆ ಕೊಟ್ಟಿದ್ದು, ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ ಪ್ರತಿ ಬಜೆಟ್‌ನಲ್ಲೂ 10ಸಾವಿರ ಕೋಟಿಗಿಂತಲೂ ಹೆಚ್ಚು ಹಣ ನೀಡುತ್ತಿದ್ದಾರೆ. 2015-16ನೇ ಸಾಲಿನಲ್ಲಿ 72,592ಕೋಟಿ ಯೋಜನಾ ವೆಚ್ಚದಲ್ಲಿ ಶೇ.19.1ರಷ್ಟು ಅನುದಾನವನ್ನು ನೀರಾವರಿಗೆ ನೀಡಲಾಗಿದೆ. 12,956ಕೋಟಿ ರೂ. ನೀರಾವರಿಗೆ ಅನುದಾನ ಸಿಕ್ಕಿದೆ. ಇನ್ನು 2-3ಸಾವಿರ ಕೋಟಿ ಹೆಚ್ಚು ಹಣ ನೀಡುವಂತೆ ಮುಖ್ಯಮಂತ್ರಿ ಬಳಿ ನಾನು ಒತ್ತಾಯಿಸುತ್ತೇನೆ. ಮುಂದಿನ ಬಜೆಟ್‌ನಲ್ಲಿ 15ಸಾವಿರ ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಹೆಚ್ಚು ಹಣ ಕೊಡಿ ಎಂದು ಕೇಳುವುದು ನ್ಯಾಯ. ಆದರೆ, ಅನುದಾನ ಕಡಿಮೆ ಯಾಗಿದೆ ಎಂಬ ನಡಹಳ್ಳಿ ಆರೋಪ ಆಧಾರರಹಿತ ಎಂದರು.
ನಡಹಳ್ಳಿ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ನೋಟಿಸ್ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದಕ್ಕೂ ಮೊದಲು ನಡಹಳ್ಳಿ ಅವರೇ ಸ್ವಪ್ರೇರಣೆಯಿಂದ ಪಕ್ಷದ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ. 2014-15ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಪಾಲಿನ ರೂಪದಲ್ಲಿ 15,410ಕೋಟಿ ಅನುದಾನದ ರೂಪದಲ್ಲಿ 20,428 ಕೋಟಿ ಒಟ್ಟು 35,888 ಕೋಟಿ ರೂ. ಅನುದಾನ ಬಂದಿದೆ. 2015-16ನೇ ಸಾಲಿಗೆ 24,789ಕೋಟಿ ತೆರಿಗೆ ಪಾಲು, 9,918ಕೋಟಿ ಅನುದಾನ ಸೇರಿ 34,708ಕೋಟಿ ಬರಲಿದೆ. ತೆರಿಗೆ ಪಾಲು ಹೆಚ್ಚು ಮಾಡಿ ಅನುದಾನಗಳನ್ನು ಕಡಿಮೆ ಮಾಡಲಾಗಿದೆ. ನೇರವಾಗಿಯೇ 1,180 ಕೋಟಿ ಅನುದಾನ ಕಡಿಮೆಯಾಗುವ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಇತರೆ ಇಲಾಖೆಗಳಿಗೆ 4500ಕೋಟಿ ಅನುದಾನ ಕಡಿತ ಮಾಡಲಾಗಿದೆ. ಒಟ್ಟು 5600ಕೋಟಿ ರೂ. ರಾಜ್ಯಕ್ಕೆ ಅನುದಾನ ಕಡಿಮೆಯಾಗುತ್ತಿದೆ.
ಇನ್ನು ರಾಜ್ಯ ಪ್ರಕೃತಿ ವಿಕೋಪ ನಿಧಿಯಡಿ ಕರ್ನಾಟಕಕ್ಕೆ ಈ ವರ್ಷ 276 ಕೋಟಿ ಮಾತ್ರ ಒದಗಿಸಲಾಗಿದ್ದು, ಬಿಜೆಪಿ ಆಡಳಿತವಿರುವ ಗುಜರಾತ್‌ಗೆ 705 ಕೋಟಿ, ಮಧ್ಯಪ್ರದೇಶಕ್ಕೆ 877 ಕೋಟಿ, ಮಹಾರಾಷ್ಟ್ರಕ್ಕೆ 1483 ಕೋಟಿ, ರಾಜಸ್ಥಾನಕ್ಕೆ 1103ಕೋಟಿ ರೂ. ಅನುದಾನ ನೀಡಲಾಗುತ್ತಿದೆ. 2020ರ ವೇಳೆಗೆ ಕರ್ನಾಟಕಕ್ಕೆ ಪ್ರಕೃತಿ ವಿಕೋಪನಿಧಿಯಡಿ 1527 ಕೋಟಿ ಅನುದಾನ ಬಂದರೆ, ಗುಜರಾತ್‌ಗೆ 3893ಕೋಟಿ, ಮಧ್ಯಪ್ರದೇಶಕ್ಕೆ 4848ಕೋಟಿ, ಮಹಾರಾಷ್ಟ್ರಕ್ಕೆ 8195ಕೋಟಿ, ರಾಜಸ್ಥಾನಕ್ಕೆ 6094ಕೋಟಿ, ತಮಿಳುನಾಡಿಗೆ 3751 ಕೋಟಿ, ಆಂಧ್ರಪ್ರದೇಶಕ್ಕೆ 2429 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಡಿಡಿಪಿ ಗಾತ್ರ ನಿಗದಿಯಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಇದರಿಂದ ನೀರಾವರಿ ಹಾಗೂ ಇತರೆ ಯೋಜನೆಗಳಿಗೆ ಅನುದಾನ ಒದಗಿಸುವುದು ಕಷ್ಟವಾಗುತ್ತದೆ. ಮೋದಿಯನ್ನು ಹೊಗಳುವುದನ್ನು ಬಿಟ್ಟು ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚು ಅನುದಾನ ತರಲು ಪ್ರಯತ್ನಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಒತ್ತಡ ಹೇರಬೇಕು ಎಂದರು.
ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇಡುತ್ತಿರುವ ಉಮೇಶ್‌ಕತ್ತಿ, ಎ.ಎಸ್.ಪಾಟೀಲ್ ನಡಹಳ್ಳಿ ಅವರ ಹೇಳಿಕೆಗಳು ಖಂಡನೀಯ, ಮೂರ್ಖತನದ ಪರಮಾವಧಿ, ಅಧಿಕಾರಕ್ಕಾಗಿ ರಾಜ್ಯ ಒಡೆಯುವುದನ್ನು ಬಿಟ್ಟು ಏಕೀಕರಣದ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು. ಅಖಂಡ ಕರ್ನಾಟಕ ಒಂದಾಗಿರಲು ಸಹಕರಿಸಬೇಕು ಎಂದರು.