ಕರ್ನಾಟಕ

ಮಹತ್ವಾಕಾಂಕ್ಷೆಯ ಸಮೀಕ್ಷೆ : ಶುರುವಾಯಿತು ‘ಜಾತಿಲೆಕ್ಕಾಚಾರ’

Pinterest LinkedIn Tumblr

jatiganathi

ಬೆಂಗಳೂರು, ಏ.11-ದೇಶದಲ್ಲೇ ಪ್ರಪ್ರಥಮವಾದ ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ, ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಾದ  ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿವಾರು ಜನಗಣತಿ ಇಂದಿನಿಂದ ಆರಂಭವಾಯಿತು. 84 ವರ್ಷಗಳ ನಂತರ ನಡೆಯುತ್ತಿರುವ ಜಾತಿ ಜನಗಣತಿ ಇಂದು ವಿಧ್ಯುಕ್ತವಾಗಿ ಹಲವು ನಾಯಕರು ಹಾಗೂ ರಾಜಕೀಯ ಮುಖಂಡರ ಮನೆಯಿಂದಲೇ ಪ್ರಾರಂಭವಾಯಿತು. ಜಾತಿವಾರು ಗಣತಿದಾರರು ರಾಜ್ಯದಲ್ಲಿರುವ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಹಾಗೂ ರಾಜಕೀಯ

ಪ್ರಾತಿನಿಧ್ಯ ಅಂಶಗಳ ಮೇಲೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಇಂದಿನಿಂದ ಏಪ್ರಿಲ್ 30ರವರೆಗೆ ಈ ಗಣತಿ ನಡೆಯಲಿದೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯಲಿರುವ ಈ ಸಮೀಕ್ಷೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು.

ಚಿತ್ರದುರ್ಗದಲ್ಲಿ ಸಚಿವ ಎಚ್.ಆಂಜನೇಯ ಅವರು ತಮ್ಮ ಮನೆಯಿಂದಲೇ  ಗಣತಿಯ ವಿವರವನ್ನು ಪ್ರಾರಂಭಿಸಿದರು. ಅದೇ ರೀತಿ ಕೋರಮಂಗಲ ಆಡುಗೋಡಿಯಲ್ಲಿ ರಾಮಲಿಂಗಾರೆಡ್ಡಿ ಅವರು ಜಾತಿವಾರು ಜನಗಣತಿಗೆ ಚಾಲನೆ ನೀಡಿದರು. ಎಲ್ಲಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಖುದ್ದು ಹಾಜರಿದ್ದು, ಸಮೀಕ್ಷೆ ಪ್ರಾರಂಭಕ್ಕೆ ಚಾಲನೆ ಕೊಟ್ಟರು. ಈಗಾಗಲೇ ಈ ಸಮೀಕ್ಷೆ ಕಾರ್ಯಕ್ಕೆ ಅಗತ್ಯವಾದ ಎಲ್ಲಾ ಸಲಕರಣೆಗಳನ್ನು, ಸಿಬ್ಬಂದಿಗಳನ್ನು 55ಕಾಲಂಗಳಿರುವ ನಮೂನೆ ಕೈಪಿಡಿಗಳನ್ನು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ಇದನ್ನು ತರಬೇತಿ ಪಡೆದ ಗಣತಿದಾರರು  ಪ್ರತಿ ಗ್ರಾಮಗಳ ಮನೆ ಮನೆಗಳಿಗೆ ತೆರಳಿ ಕೂಲಂಕಷವಾಗಿ ಮಾಹಿತಿ ಪಡೆಯಲಾರಂಭಿಸಿದ್ದಾರೆ. ಪ್ರಥಮ ದಿನದ ಗಣತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರವನ್ನು ವ್ಯಾಪಕವಾಗಿ ಕೈಗೊಳ್ಳಲಾಗಿತ್ತು. ಗಣತಿದಾರರಿಗೆ ಸೂಕ್ತ ಮಾಹಿತಿ ನೀಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಹೀಗಾಗಿ ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಗಣತಿ ಕಾರ್ಯ ಪ್ರಾರಂಭವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜ್ ತಿಳಿಸಿದ್ದಾರೆ.

ಗಣತಿ ವೇಳೆ ವಾಸ್ತವಾಂಶದ ಮಾಹಿತಿಯನ್ನು ನೀಡಬೇಕು. ಯಾವುದೇ ರೀತಿ ಸುಳ್ಳು ಮಾಹಿತಿ ನೀಡಬಾರದೆಂದು ಅಧ್ಯಕ್ಷರು ಮನವಿ ಮಾಡಿದ್ದಾರೆ.

Write A Comment