ಕರ್ನಾಟಕ

​​ಸಂಪುಟ ವಿಸ್ತರಣೆಗೆ ‘ಪರಮೇಶ್ವರ’ ಗ್ರಹಣ

Pinterest LinkedIn Tumblr

Siddu-and-Param

ಬೆಂಗಳೂರು, ಏ.9- ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದ ಪ್ರಮುಖರಲ್ಲಿ ಒಬ್ಬರಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಭಾಗಿಯಾಗದಿರುವ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಹೊಸ ಸಂಕಟ ಎದುರಾಗಿದ್ದು ಬಹು ನೀರಿಕ್ಷಿತ ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಿದೆ. ಸರ್ಕಾರಕ್ಕೆ ಎರಡು ವರ್ಷ ತುಂಬುವ ವೇಳೆಗೆ ಹೊಸ ಸಚಿವರೊಂದಿಗೆ ಆಡಳಿತಕ್ಕೆ ಹೊಸ ಸ್ವರೂಪ ಕೊಡಲು ನಿರ್ಧರಿಸಿದ್ದ ಸಿದ್ದರಾಮಯ್ಯ

ಇದ್ದಕ್ಕಿದ್ದ ಹಾಗೇ ಪಂಚಾಯತ್ ಚುನಾವಣೆ ವರೆಗೂ ಸಂಪುಟ ವಿಸ್ತರಣೆ ಇಲ್ಲ ಎಂಬ ಸಂದೇಶ ನೀಡುತ್ತಿದ್ದಾರೆ, ಇದಕ್ಕೆ ಪರಮೇಶ್ವರ್ ಅವರ ಮುನಿಸು ಕಾರಣ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಪರಮೇಶ್ವರ್ ಅವರು 2013ರ ಚುನಾವಣೆಯಲ್ಲಿ ಹಗಲು ರಾತ್ರಿ ಶ್ರಮಿಸಿ ಪಕ್ಷ ಸಂಘಟಿಸಿದರು. ಆದರೆ ಕೊರಟಗೆರೆ ಕ್ಷೇತ್ರದ ಜನ ಕೈಹಿಡಿಯಲಿಲ್ಲ. ಸೋಲುಕಂಡ ಪರಮೇಶ್ವರ್ ಅವರನ್ನು ಅಧಿಕಾರದಿಂದ ದೂರ ಇಡುವ ಷ್ಯಡ್ಯಂತ್ರಗಳು ವ್ಯವಸ್ಥಿತವಾಗಿ ನಡೆದವು. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹಿರಿಯ ಕಾಂಗ್ರೆಸಿಗರು ವಕಾಲತ್ತು ವಹಿಸಿದರು. ಇದಕ್ಕೆ ಒಪ್ಪದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಒಂದೇ ಶಕ್ತಿ ಕೇಂದ್ರ ಇರಬೇಕು ಎಂದು ಹೈಕಮಾಂಡ್ ಮುಂದೆ ಪಟ್ಟು ಹಾಕಿ ಕುಳಿತರು. ಅನಿವಾರ್ಯವಾಗಿ ದಿಲ್ಲಿ ನಾಯಕರು ಒಪ್ಪಿಗೆ ಸೂಚಿಸಿದರು,

ಅದೃಷ್ಟ ಎಂಬಂತೆ ಎಲ್ಲಾ ಪರಿಸ್ಥಿತಿಗಳು ಸಿದ್ದರಾಮಯ್ಯ ಅವರ ಪರವಾಗಿಯೇ ಬರುತ್ತಿವೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಭೇದಿಸಿ ಕಾಂಗ್ರೆಸ್ ಜಯಗಳಿಸಿತ್ತು. ಎದುರಾದ ಎಲ್ಲಾ ವಿಘ್ನಗಳು ತನ್ನಷ್ಟಕ್ಕೆ ತಾನೇ ದೂರವಾದವು. ರಾಷ್ಟ್ರಮಟ್ಟದಲ್ಲಿ ನಡೆದ ಲೋಕಸಭೆ ಹಾಗೂ ಇತರ ರಾಜ್ಯಗಳ ವಿಧಾನಸಭೈ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿತ್ತು.  ಇದರಿಂದ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಇನ್ನಷ್ಟು ಬಲಿಷ್ಠರಾದರು. ಹೈಕಮಾಂಡ್‌ಗೆ ವಿಶ್ವಾಸವಿದ್ದರೂ ಪರಮೇಶ್ವರ್ ಅವರ ಪ್ರಭಾವಳಿ ದಿಲ್ಲಿಯಲ್ಲಿ ಹಂತ ಹಂತವಾಗಿ ಕಡಿಮೆಯಾಗಿದೆ. ಸಿದ್ದರಾಮಯ್ಯ ಅವರ ಮಾತಿಗೆ ಹೆಚ್ಚು ಮನ್ನಣೆ ಸಿಗಲಾರಂಭಿಸಿತು. ರಾಜ್ಯದಲ್ಲಿ ಪರಮೇಶ್ವರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ರೀತಿ ವರ್ತಿಸುತ್ತಲೇ ಸಿದ್ದರಾಮಯ್ಯ ಮೂಲೆಗುಂಪು ಮಾಡಲಾರಂಭಿಸಿದರು.

ತಾವೇ ಅಧಿಕಾರಕ್ಕೆ ತಂದ ಸರ್ಕಾರಕ್ಕೆ ಪರಮೇಶ್ವರ್ ಅಪರಿಚಿತರಾದರೂ. ವಿಧಾನ ಪರಿಷತ್ ಸದಸ್ಯ ಸ್ಥಾನ ಗಳಿಸಲು ಲಾಬಿ ಮಾಡಬೇಕಾಯಿತು, ಯಾವುದೇ ಸ್ಥಾನವೂ ಖಾಲಿ ಎಲ್ಲ ಎಂಬ ಉತ್ತರ ಸಿಕ್ಕಾಗ ಬಿಜೆಪಿ/ಕೆಜೆಪಿಯಲ್ಲಿದ್ದ ಪ್ರೊ. ಮುಮತ್ತಾಜ್ ಆಲಿಖಾನ್ ಅವರಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಕೊಡಿಸಬೇಕಾಯಿತು. ಅನಂತರವೂ ವಿಪಕ್ಷ ಸ್ಥಾನ ಸುಲಭವಾಗಿ ಸಿಗಲಿಲ್ಲ, ಎಲ್ಲರನ್ನೂ ನೇಮಕ ಮಾಡುವ ವೇಳೆ ಪರಮೇಶ್ವರ್ ಅವರನ್ನು ಆಯ್ಕೆ ಮಾಡಲಾಯಿತು.ಈ ನಡುವೆ ಸಿದ್ದು ಬೆಂಬಲಿಗರು ಪರಮೇಶ್ವರ್ ಎಲ್ಲರಂತೆ ಒಬ್ಬರು, ಅವರಿಗೇಕೆ ವಿಶೇಷ ಸ್ಥಾನ ಮಾನ. ಸೋತವರ ಪಟ್ಟಿಯಲ್ಲಿ ಪರಮೇಶ್ವರ್ ಕೂಡ ಸೇರುತ್ತಾರೆ ಎಂದು ಕುಹಕವಾಡಿದರು. ಹಗುರ ಮಾತುಗಳಿಂದ ನೊಂದಿರುವ ಪರಮೇಶ್ವರ್ ಸಂಪುಟದಿಂದ ಹೊರಗುಳಿಯಲು ನಿರ್ಧರಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಖುದ್ದು ಸಿದ್ದರಾಮಯ್ಯ ಅವರೇ ಪರಮೇಶ್ವರ್ ಅವರನ್ನು ಸಂಪುಟಕ್ಕೆ ಆಹ್ವಾನಿಸಿ ಕೈಗಾರಿಕೆ-ವಾಣಿಜ್ಯ ಹಾಗೂ ಗೃಹ ಇಲಾಖೆಗಳ ಜವಾಬ್ದಾರಿ ನೀಡುವ ಮಾತುಗಳನ್ನಾಡಿದ್ದಾರೆ. ಆದರೆ ಪರಮೇಶ್ವರ್ ಯಾವುದೇ ಅಭಿಪ್ರಾಯ ಹೇಳಿಲ್ಲ ಎನ್ನಲಾಗಿದೆ. ಆಪ್ತರ ಬಳಿ ತಮ್ಮ ನೋವು ತೊಡಿಕೊಂಡಿರುವ ಪರಮೇಶ್ವರ್ ಅವರು ತಾವು ಸಂಪುಟ ಸೇರುವುದಿಲ್ಲ. ತನು, ಮನ, ಧನ ಪೂರ್ವಕವಾಗಿ ಪಕ್ಷಕ್ಕೆ ಶ್ರಮಿಸಿ ಮೊದಲ ಸಾಲಿನಲ್ಲಿ ನಿಂತು ಪಕ್ಷ ಅಧಿಕಾರಕ್ಕೆ ತಂದು ಒಂದು ಸಚಿವ ಸ್ಥಾನಕ್ಕೆ ಇಷ್ಟೆಲ್ಲಾ ಮಾತು ಕೇಳಬೇಕೇ, ಅವಮಾನ ಸಹಿಸಬೇಕೇ ಎಂದು ಪ್ರಶ್ನಿಸಿದ್ದಾರೆ.

ಮುಂದಿನ ಸೆಪ್ಟಂಬರ್ 28ರವರೆಗೂ ಅಧ್ಯಕ್ಷ ಸ್ಥಾನದ ಅಧಿಕಾರವಧಿ ಇದೆ. ಹೈಕಮಾಂಡ್ ಬಯಸಿದರೆ ಅಲ್ಲಿವರೆಗೂ ಇರುತ್ತೇನೆ. ಅನಂತರ ನೇರವಾಗಿ ಮನೆಗೆ ಹೋಗುತ್ತೇನೆ. ಹೈಕಮಾಂಡ್ ಇಚ್ಛಿಸಿದರೆ ವಿಧಾನ ಪರಿಷತ್ ಸದಸ್ಯನಾಗಿರುತ್ತೇನೆ. ಅದಕ್ಕೂ ಕುಹಕಗಳು ಕೇಳಿ ಬಂದರೆ ಮುಲ್ಲಾಜಿಲ್ಲದೆ ರಾಜೀನಾಮೆ ನೀಡಿ ತಟಸ್ಥನಾಗಿ ಉಳಿಯುತ್ತೇನೆ ಎಂದಿದ್ದಾರೆ. ಸರ್ಕಾರದ ಬಗ್ಗೆ ನಾನು ಏನೇ ಹೇಳಿದರೂ ಅನಗತ್ಯವಾಗಿ ವಿವಾದ ಮಾಡಲಾಗುತ್ತಿದೆ. ಇದಕ್ಕೆಂದೇ ಮುಖ್ಯಮಂತ್ರಿ ಹಿಂದೆ ಕೆಲವರಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಮಾಡಬೇಕಾದ ರಾಜಕಾರಣವನ್ನು ನನ್ನ ವಿರುದ್ಧ ಮಾಡಲಾಗುತ್ತಿದೆ. ಕೆಲವು ಸಂಘಟನೆಗಳು ದಲಿತ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆ ಮುಂದಿಟ್ಟರೆ ಅದಕ್ಕೂ ನನ್ನನ್ನೇ ಹೊಣೆ ಮಾಡಿ ಹೈಕಮಾಂಡ್‌ಗೆ ದೂರು ನೀಡಲಾಗುತ್ತಿದೆ. ನನ್ನ ಪರಿಶ್ರಮ ನಿಧಾನಕ್ಕೆ ದಿಲ್ಲಿ ನಾಯಕರಿಗೆ ಅರಿವಾಗಲಿದೆ ಆವರೆಗೂ ನಾನು ಮೌನವಾಗಿರುತ್ತೇನೆ ಎಂದು ಪರಮೇಶ್ವರ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ದಲಿತರಿಗೆ ಸಂದೇಶ:
ತಾವು ಸರ್ಕಾರದಲ್ಲಿ ಭಾಗಿಯಾಗದೆ ತಟಸ್ಥವಾಗಿ ಉಳಿದು ಹೈಕಮಾಂಡ್ ಹಾಗೂ ದಲಿತ ಸಮುದಾಯಕ್ಕೆ ಏಕಕಾಲಕ್ಕೆ ಸ್ಪಷ್ಟ ಸಂದೇಶ ನೀಡಲು ಪರಮೇಶ್ವರ್ ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲಾಗಿದೆ, ಪರಮೇಶ್ವರ್ ಅವರನ್ನು ಸಂಪುಟಕ್ಕೆ ತಗೆದುಕೊಳ್ಳದೆ ಅವಮಾನಿಸಲಾಗಿದೆ ಎಂಬ ಸಂದೇಶ ರವಾನೆಯಾದರೆ ಕರ್ನಾಟಕದಲ್ಲಿ ದಲಿತರು ಕಾಂಗ್ರೆಸ್‌ನಿಂದ ಶ್ವಾಸ್ವತವಾಗಿ ದೂರವಾಗಲಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಾವೇ ಕಾರಣ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ 2018ರ ಚುನಾವಣೆಯಲ್ಲಿ ಸಾಧನೆ ಮಾಡಿ ತೋರಿಸಲಿ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಪರಮೇಶ್ವರ್ ಸಂಪುಟ ಸೇರದೇ ತಟಸ್ಥವಾಗಿ ಉಳಿದರೆ ಜನ ತಮ್ಮನ್ನು ತಪ್ಪು ತಿಳಿದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ. ಹೈಕಮಾಂಡ್ ನಾಯಕರ ಮೂಲಕ ಪರಮೇಶ್ವರ್ ಅವರ ಮನವೊಲಿಕೆ ಯತ್ನ ನಡೆದಿದೆ, ಪಟ್ಟು ಸಡಿಲಿಸದೇ ಇರುವ ಪರಮೇಶ್ವರ್‌ರಿಂದಾಗಿ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Write A Comment