ಕರ್ನಾಟಕ

ಬಿಬಿಎಂಪಿ ಮೇಲೆ ಲೋಕಾ ದಾಳಿ : ಮುಖ್ಯ ಲೆಕ್ಕಾಧಿಕಾರಿ ಕಚೇರಿ ತಪಾಸಣೆ

Pinterest LinkedIn Tumblr

BBMP

ಬೆಂಗಳೂರು, ಏ.7- ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದರು. ಬಿಬಿಎಂಪಿಯಲ್ಲಿ ಹಣಕಾಸು ವೈಫಲ್ಯ, ಅವ್ಯವಹಾರಗಳು ನಡೆಯುತ್ತಿವೆ ಎಂದು ರಾಜೇಂದ್ರಕುಮಾರ್ ಕಠಾರಿಯ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಆ ವರದಿ ಆಧರಿಸಿ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಬೆನ್ನಲ್ಲೇ ಲೋಕಾಯುಕ್ತ ಡಿವೈಎಸ್‌ಪಿ ವೆಂಕಟಸ್ವಾಮಿ ನೇತೃತ್ವದ ವಿಶೇಷ ತಂಡ ಮುಖ್ಯ ಲೆಕ್ಕಾಧಿಕಾರಿ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿದೆ.

ಕಚೇರಿಯಲ್ಲಿರುವ ಸಂಪೂರ್ಣ ಕಡತಗಳನ್ನು ವಶಕ್ಕೆ ತೆಗೆದುಕೊಂಡಿರುವ ಲೋಕಾಯುಕ್ತ ಪೊಲೀಸರು ಮುಖ್ಯಲೆಕ್ಕಾಧಿಕಾರಿ ಕನಕರಾಜ್ ಮತ್ತು ನಾರಾಯಣಸ್ವಾಮಿ ಎಂಬ ಅಧಿಕಾರಿಯನ್ನು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಬಿಲ್ ಬಿಡುಗಡೆಯಲ್ಲಿ ಸೇವಾ ಹಿರಿತನವನ್ನು ಕಡೆಗಣಿಸಲಾಗುತ್ತಿದೆ. ತಮಗೆ ಬೇಕಾದವರಿಗೆ ಮನಸೋ ಇಚ್ಚೆ ವಿಶೇಷ ಹಣ ಬಿಡುಗಡೆ ಪತ್ರವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ಕಳೆದ ಹಲವಾರು ದಿನಗಳಿಂದ ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಪಾಲಿಕೆ ಸಭೆಯಲ್ಲೂ ಕೂಡಾ ವಿಶೇಷ ಹಣ ಬಿಡುಗಡೆ ಪತ್ರದ ಬಗ್ಗೆ ತೀವ್ರ ಚರ್ಚೆ ನಡೆಯಿತು. ಚರ್ಚೆ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರು ಈ ಹಿಂದೆ ಮುಖ್ಯಲೆಕ್ಕಾಧಿಕಾರಿಗಳಾಗಿದ್ದ ಮಹಮ್ಮದ್‌ರಿಜ್ವಿ, ವೀರೇಂದ್ರಕುಮಾರ್ ಪಾಟೀಲ್ ಅವರು ಸಾಕಷ್ಟು ಗೋಲ್‌ಮಾಲ್ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಈಗಾಗಲೇ ವೀರೇಂದ್ರಕುಮಾರ್ ಪಾಟೀಲ್ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅವರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಉಪಲೋಕಾಯುಕ್ತ ಸುಭಾಷ್ ಬಿ ಅಡಿ ಅವರು ಈ ಹಿಂದೆ ಎರಡು-ಮೂರು ಬಾರಿ ಮುಖ್ಯಲೆಕ್ಕಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿ ನಿಯಮಾನುಸಾರ ಬಿಲ್ ಮಾಡುವಂತೆ ಎಚ್ಚರಿಕೆ ನೀಡಿದ್ದರು.

ಆದರೂ ಇಲ್ಲಿ ಮನಸೋ ಇಚ್ಚೆ ಬಿಲ್ ಬಿಡುಗಡೆ ನಡೆದೇ ಇತ್ತು. ಈ ಹಿನ್ನೆಲೆಯಲ್ಲಿ ಇಂದು ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಡಿವೈಎಸ್‌ಪಿ ವೆಂಕಟಸ್ವಾಮಿ ನೇತೃತ್ವದ ವಿಶೇಷ ತಂಡ ಅವ್ಯವಹಾರ ಕುರಿತು  ಮಾಹಿತಿ ಕಲೆ ಹಾಕಿ ದಾಖಲೆಗಳನ್ನು ಸಂಗ್ರಹಿಸುತ್ತಿದೆ.
ಒಂದು ವೇಳೆ ಹಣ ಬಿಡುಗಡೆಯಲ್ಲಿ ಭಾರಿ ಪ್ರಮಾಣದ ಲೋಪದೋಷ ಕಂಡು ಬಂದರೆ ಕನಕರಾಜ್ ಮತ್ತು ನಾರಾಯಣಸ್ವಾಮಿ ಅವರನ್ನು ಬಂಧಿಸುವ ಸಾಧ್ಯತೆ ಇದೆ.

Write A Comment