ಕರ್ನಾಟಕ

ಜನತಾ ಪರಿವಾರ ಒಗ್ಗೂಡಿಕೆಗೆ ದೇವೇಗೌಡರ ಹಸಿರು ನಿಶಾನೆ

Pinterest LinkedIn Tumblr

devegougouda

ಬೆಂಗಳೂರು, ಏ.7- ಕಾಂಗ್ರೆಸ್-ಬಿಜೆಪಿಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬರಲಿರುವ ಜನತಾ ಪರಿವಾರದ ಒಗ್ಗೂಡುವಿಕೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಜನತಾ ಪರಿವಾರ ದೊಂದಿಗೆ ಜೆಡಿಎಸ್ ವಿಲೀನವಾಗಬೇಕಾದರೆ ಎಡಪಕ್ಷವನ್ನು ಬಿಟ್ಟು ಬರಬೇಕೆಂದು ದಳಪತಿಗಳು ಷರತ್ತು ವಿಧಿಸಿದ್ದರು. ಆದರೆ, ಹಲವು ವರ್ಷಗಳಿಂದಲೂ ಎಡಪಕ್ಷಗಳ ಜತೆ ಅವಿನಾಭಾವ ಸಂಬಂಧ ಹೊಂದಿರುವ ಗೌಡರು ಜನತಾ ಪರಿವಾರದೊಂದಿಗೆ  ಜೆಡಿಎಸ್ ವಿಲೀನಗೊಳಿಸುವ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು.

ಇದೀಗ ಕೆಲವು ಷರತ್ತುಗಳೊಂದಿಗೆ ತಮ್ಮ ಪಕ್ಷವನ್ನು ಜನತಾ ಪರಿವಾರದ ಜತೆ ವಿಲೀನಗೊಳಿಸಲು ಗೌಡರು ಸಮ್ಮತಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಗೌಡರ ಷರತ್ತಿನ ಪ್ರಕಾರ, ಕೆಲವು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್  ಎಡಪಕ್ಷದ ಜತೆ ಚುನಾವಣೆ ಸಂದರ್ಭದಲ್ಲಿ ಇಲ್ಲವೆ ಬೇರೆ ಬೇರೆ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಜನತಾ ಪರಿವಾರದ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.

ಜೆಡಿಎಸ್ ಅಸ್ತಿತ್ವ ಉಳಿಸಿಕೊಂಡಿರುವ ಕರ್ನಾಟಕ, ಕೇರಳ, ಗೋವಾ ಮತ್ತಿತರ ಕಡೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಎಡ ಪಕ್ಷಗಳ ಜತೆ  ತಮ್ಮ ಸಂಬಂಧ ಮುಂದುವರಿಸಿಕೊಂಡು ಹೋಗಲು ಅಡ್ಡಿಯಿಲ್ಲ ಎಂಬ ಮಾತು ಪರಿವಾರದ ನಾಯಕರಿಂದ ಬಂದಿದೆ.
ಈಗಾಗಲೇ ಜನತಾ ಪರಿವಾರದ ನಾಯಕರಾದ ಮುಲಾಯಂಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್, ನವೀನ್ ಪಟ್ನಾಯಕ್, ಓಂ ಪ್ರಕಾಶ್ ಚೌತಾಲಾ ಸೇರಿದಂತೆ ಹಲವರ ಜತೆ ಮಾತುಕತೆ ನಡೆಸಿರುವ ಗೌಡರು, ಎಡಪಕ್ಷಗಳ ಸಂಬಂಧವನ್ನು ಕಳಚಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಕರ್ನಾಟಕ, ಪಶ್ಚಿಮ ಬಂಗಾಳ, ಗೋವಾ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಡಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡರೆ ಜನತಾ ಪರಿವಾರವನ್ನು ಸದೃಢಗೊಳಿಸಲು ಸಾಧ್ಯವಾಗುತ್ತದೆ. ಏಕಾಏಕಿ ಸಂಬಂಧ ಕಳಚಿಕೊಳ್ಳಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ದೂರವಿಟ್ಟು ಜನತಾ ಪರಿವಾರ ಒಗ್ಗೂಡಿ ಅಧಿಕಾರ ರಚಿಸಬೇಕು. ಒಂದು ವೇಳೆ ಇದು ಯಶಸ್ವಿಯಾದರೆ ಮುಂಬರುವ ಎಲ್ಲ ಚುನಾವಣೆಗಳಿಗೂ ಇದೇ ಪ್ರಯೋಗ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.

ಈ ವಾರ ಮತ್ತೊಂದು ಪರಿವಾರದ ನಾಯಕರ ಜತೆ ಗೌಡರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಪಕ್ಷವನ್ನು ವಿಲೀನ ಮಾಡಲು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

Write A Comment