ಕರ್ನಾಟಕ

ಕನ್ನಡ ಪುಸ್ತಕ ಪ್ರಾಧಿಕಾರ ಕ್ರಾಂತಿಕಾರಕ ಕೆಲಸ ಮಾಡುತ್ತಿಲ್ಲ : ಮೊಯ್ಲಿ

Pinterest LinkedIn Tumblr

veerapa_moily

ಬೆಂಗಳೂರು, ಏ.5- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕ್ರಾಂತಿಕಾರಕ ಕೆಲಸವಾಗುತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬುಕ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎ.ಮಾಧವ ಉಡುಪ ಅವರ ದಾಸ ಸಾಹಿತ್ಯದಲ್ಲಿ ಆತ್ಮೋನ್ನತಿ ಸಮಾಜೋನ್ನತಿ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರ ಸ್ಥಾಪನೆ ಮೂಲಕ ಕ್ರಾಂತಿ ಮಾಡಬೇಕೆಂಬ ಕನಸನ್ನು ಕಂಡಿದ್ದೆ. ಆದರೆ ಆ ಹಾದಿಯಲ್ಲಿ ಪ್ರಾಧಿಕಾರ ಸಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಭಾಷೆ, ಬರಹಗಾರರ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದೆ. ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಸಾಕಷ್ಟಿದ್ದರೂ ಸಕಾಲದಲ್ಲಿ ಜನರಿಗೆ ಪುಸ್ತಕಗಳು ತಲುಪುವ ಕೆಲಸ ಆಗುತ್ತಿಲ್ಲ. ಮಾಧವ ಉಡುಪ ಅವರು, ಪಿಎಚ್‌ಡಿ ಪ್ರಬಂಧಕ್ಕಾಗಿ ಬರೆದ ಈ ಕೃತಿ ಸಾಹಿತ್ಯಿಕವಾಗಿಯೂ ಮೌಲ್ಯಿಕ ಕೃತಿಯಾಗಿದೆ ಎಂದು ಬಣ್ಣಿಸಿದರು.

ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ಮಾತನಾಡಿ, ಕನ್ನಡ ಪುಸ್ತಕೋದ್ಯಮ ಸರ್ಕಾರವನ್ನು ಆಶ್ರಯಿಸದೆ ಓದುಗರನ್ನು ಆಶ್ರಯಿಸಬೇಕು. ಪ್ರಕಟಣೆಯಾದ ಪುಸ್ತಕಗಳು ಸರಿಯಾಗಿ ಓದುಗರಿಗೆ ಹಂಚಿಕೆಯಾಗುತ್ತಿಲ್ಲ. ಕನ್ನಡ ಶ್ರೇಷ್ಠ ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು, ವರ ಕವಿ ಬೇಂದ್ರೆ ಅಂತಹವರು ಕೂಡ ದಾಸ ಸಾಹಿತ್ಯದಿಂದ ಪ್ರೇರಣೆ ಪಡೆದಿದ್ದರು. ಆಧುನಿಕ ಸಾಹಿತ್ಯದ ಮೇಲೂ ದಾಸ ಸಾಹಿತ್ಯದ ಪ್ರಭಾವವಿದೆ ಎಂದರು. ವಚನ ಸಾಹಿತ್ಯಕ್ಕೆ ಸಿಕ್ಕ ಮನ್ನಣೆ ದಾಸ ಸಾಹಿತ್ಯಕ್ಕೆ ಸಿಗುತ್ತಿಲ್ಲ ಎಂದ ಅವರು, ಭಕ್ತಿ ಮತ್ತು ಸಂಗೀತಕ್ಕೆ ದಾಸ ಸಾಹಿತ್ಯವನ್ನು ಸೀಮಿತಗೊಳಿಸದೆ ಸಾಹಿತ್ಯ ದೃಷ್ಟಿಯಿಂದಲೂ ಪರಿಗಣಿಸಬೇಕಾಗುತ್ತದೆ ಎಂದರು. ನ್ಯಾಯಮೂರ್ತಿ ಡಾ.ಎಂ.ರಾಮಾಜೋಯಿಸ್ ಮಾತನಾಡಿ, ಹಣ ಗಳಿಕೆಗೆ ಶಿಕ್ಷಣ ಬಳಕೆಯಾಗುತ್ತಿರುವುದು ವಿಷಾದಕರ ಸಂಗತಿ. ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ , ನಟ ಶ್ರೀಧರ್, ಲೇಖಕ ಮಾಧವ ಉಡುಪ, ಪ್ರೊ.ಬಿ.ವಿ.ನಾರಾಯಣರಾವ್ ಮತ್ತಿತರರು ಪಾಲ್ಗೊಂಡಿದ್ದರು.

Write A Comment