ರಾಷ್ಟ್ರೀಯ

ಆರ್‌ಎಸ್‌ಎಸ್ ಆಟಕ್ಕೆ ಮೌನಕ್ಕೆ ಸರಿದ ಬಿಜೆಪಿ ಭೀಷ್ಮ

Pinterest LinkedIn Tumblr

BJP-BHishma

ನವದೆಹಲಿ, ಏ.5- ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ ಅವರು ಪಕ್ಷದ ಉಸಿರುಗಟ್ಟುವ ವಾತಾವರಣದಲ್ಲಿ ಸಿಲುಕಿ ಹಾಕಿಕೊಂಡು ಧರ್ಮ ಸಂಕಟ ಅನುಭವಿಸು ತ್ತಿದ್ದಾರೆ ಎಂಬುದು ನಿನ್ನೆ ಬೆಂಗಳೂರಿನಲ್ಲಿ ಮುಗಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಹಿರಂಗವಾಗಿದೆ. ಇತ್ತ ದರಿ ಅತ್ತ ಪುಲಿ ಎಂಬ ಪರಿಸ್ಥಿತಿಯ ನಡುವೆ ನರಳಾಡುತ್ತಿರುವ ಅವರೀಗ  ಆರ್‌ಎಸ್‌ಎಸ್ ಸೃಷ್ಟಿಸಿರುವ ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡು ಅದರಿಂದ ಹೊರ ಬರಲಾಗದೆ ಮನದ ತುಂಬಾ ಬೇಗುದಿ ತುಂಬಿಕೊಂಡು ನೋವು ಅನುಭವಿಸುತ್ತಿದ್ದಾರೆ.

ಶಿಷ್ಯನನ್ನೇ ಗುರುವಿನ ವಿರುದ್ಧ ಎತ್ತಿ ಕಟ್ಟಿರುವ ಆರ್‌ಎಸ್‌ಎಸ್ ಮುಂದೊಂದು ದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮುನ್ನೆಚ್ಚರಿಕೆ ಗಂಟೆ ಬಾರಿಸಿದೆ. ಬಿಜೆಪಿ ಆರ್‌ಎಸ್‌ಎಸ್‌ನ ಅಡಿಯಲ್ಲೇ ಕಾರ್ಯ ನಿರ್ವಹಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ರವಾನಿಸಿದೆ.

ಮೋದಿ ಅವರು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ರಾಜಕೀಯ ಮಾಡುವುದನ್ನು ಕೈ ಬಿಟ್ಟಿದ್ದಾರೆಯೇ ಎಂಬುದೊಂದು ಪ್ರಶ್ನೆಗೆ ಅವರು ಅಡ್ವಾಣಿ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸ್ಪಷ್ಟಪಡಿಸಿದೆ. ಇದನ್ನು ಈ ದೇಶದ ಜನತೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಮುಂದೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಗಲಿದೆ. ಆ ವೇಳೆಗೆ ಪಕ್ಷವನ್ನು ಮೋದಿ ಹಿಡಿತದಿಂದ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹವಣಿಕೆಗೆ ಆರ್‌ಎಸ್‌ಎಸ್ ಕಾರ್ಯತಂತ್ರ ರೂಪಿಸುತ್ತಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕಾಗಿಯೇ ಮೋದಿ ಅವರ ಕೈಗೆ ಎಲ್ಲಾ ಸೂತ್ರವನ್ನು ನೀಡಿ ಗಾಳಿಪಟ ಹಾರಿಸುತ್ತಿದೆ.  ಗುರು-ಶಿಷ್ಯರ ಮುಸುಕಿನ ಗುದ್ದಾಟದ ನಡುವೆ ತಾನು ಅವಕಾಶವಾದಿತನ ಮೆರೆಯಲು ಮುಂದಾಗಿದೆ. ಆ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅದು ತಂತ್ರ ರೂಪಿಸುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಅಕಸ್ಮಾತ್ ಅಧಿಕಾರಕ್ಕೆ ಏರದಿದ್ದರೆ ಅದನ್ನು ಮುಂದಿಟ್ಟುಕೊಂಡು ಮೋದಿಯವರನ್ನು ಅಣಿಯುವ ತಂತ್ರಕ್ಕೆ ಮುಂದಾಗಿದೆ. ಒಟ್ಟಾರೆ ಭಾಜಪ ಆರ್‌ಎಸ್‌ಎಸ್ ಜಪ ಮಾಡುತ್ತಲೇ ಇರಬೇಕು ಎಂಬುದು ಈ ಸಂಘಟನೆಯ ನಾಯಕರ ಮಂತ್ರವಾಗಿದೆ.

Write A Comment