ಕರ್ನಾಟಕ

ಬಿಬಿಎಂಪಿ ವಿಭಜನೆಗೆ ಸುಗ್ರೀವಾಜ್ಞೆ : ರಾಜ್ಯಪಾಲರಿಗೆ ದೂರು

Pinterest LinkedIn Tumblr

hdkone

ಬೆಂಗಳೂರು, ಏ.5- ಬಿಬಿಎಂಪಿಯನ್ನು ಮೂರು ಭಾಗ ಮಾಡಲು ರಾಜ್ಯಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದರೆ, ಇದಕ್ಕೆ ಸಹಿ ಹಾಕದಂತೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ಇಲ್ಲಸಲ್ಲದ ಸಬೂಬು ಹೇಳುತ್ತಿದೆ. ಬಿಬಿಎಂಪಿಯನ್ನು  ಮೂರು ಭಾಗ ಮಾಡಲು ಸುಗ್ರೀವಾಜ್ಞೆ ಜಾರಿ ಮಾಡಲು ಮುಂದಾಗಿದೆ ಎಂಬ ಮಾಹಿತಿ ಇದೆ.

ಒಂದು ವೇಳೆ ಸುಗ್ರೀವಾಜ್ಞೆ ಜಾರಿಗೆ ತಂದರೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಹೇಳಿದರು. ಚುನಾವಣೆ ನಡೆಸಲು ತಾಕತ್ತಿಲ್ಲದಿದ್ದರೆ ಕಾಂಗ್ರೆಸ್ ಸರ್ಕಾರ ಜನತೆ ಮುಂದೆ ಸೋಲನ್ನು ಒಪ್ಪಿಕೊಳ್ಳಬೇಕು. ಆದರೆ, ಇದಕ್ಕೆ ಇಲ್ಲಸಲ್ಲದ ನೆಪ ಹೇಳಿ ಚುನಾವಣೆ ಮುಂದೂಡುವ ಪ್ರಯತ್ನ ಮಾಡಬಾರದು. ಹಾಗೊಂದು ವೇಳೆ ಸುಗ್ರೀವಾಜ್ಞೆ ಜಾರಿ ಮಾಡಿದರೆ ನಮ್ಮ ಪಕ್ಷ ಕಾನೂನು ಹೋರಾಟಕ್ಕೂ ಸಿದ್ಧವಿದೆ ಎಂದು ಘೋಷಣೆ ಮಾಡಿದರು.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ವಿಭಜನೆಗೆ ಸರ್ಕಾರ ತೀರ್ಮಾನಿಸಿದೆ. ಒಂದೆಡೆ ಚುನಾವಣೆಯನ್ನು ಮುಂದೂಡಲು ಒಳಗೊಳಗೆ ಕುತಂತ್ರ ನಡೆಸಿದೆ. ಮತ್ತೊಂದೆಡೆ ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಇದು ಸರ್ಕಾರದ ದ್ವಂದ್ವ ನಿಲುವಿಗೆ ಹಿಡಿದ ಕೈಗನ್ನಡಿ ಎಂದು ವ್ಯಂಗ್ಯವಾಡಿದರು. ವರದಿಯನ್ನೇ ನೀಡಿಲ್ಲ: ಬಿಬಿಎಂಪಿಯನ್ನು ವಿಭಜನೆ ಮಾಡುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ವಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಈವರೆಗೂ ವರದಿಯನ್ನೇ ನೀಡಿಲ್ಲ ಎಂದು ಕುಮಾರಸ್ವಾಮಿ ಇದೇ ವೇಳೆ ಬಹಿರಂಗಪಡಿಸಿದರು. ಸರ್ಕಾರ ಹೇಳಿರುವಂತೆ ವಿ.ಎಸ್.ಪಾಟೀಲ್ ನೇತೃತ್ವದ ಮೂವರು ಸದಸ್ಯರ ಸಮಿತಿ ಬಿಬಿಎಂಪಿಯನ್ನು ಮೂರು ಹೋಳು ಮಾಡುವಂತೆ ಶಿಫಾರಸು ಮಾಡಿದೆ ಎಂದು ಹೇಳಿದೆ.

ವಾಸ್ತವವಾಗಿ ಈ ಸಮಿತಿ ವರದಿಯನ್ನೇ ನೀಡಿಲ್ಲ. ನನಗಿರುವ ಮಾಹಿತಿಯಂತೆ ಬಿಬಿಎಂಪಿಯನ್ನು ಎಂಟು ವಿಭಾಗ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ. ಆದರೆ, ಸರ್ಕಾರ ಯಾವ ಕಾರಣಕ್ಕಾಗಿ ಬಿಬಿಎಂಪಿ ವಿಭಜನೆ ಮಾಡಲು ಹೊರಟಿದೆ ಎಂದು ಪ್ರಶ್ನೆ ಮಾಡಿದರು.

ಸಮಿತಿಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆ ಮುಂದಿಡಬೇಕೆಂದು ಒತ್ತಾಯಿಸಿದ ಅವರು, ಚುನಾವಣೆ ನಡೆಸಲು ಸರ್ಕಾರಕ್ಕೆ ಸುತರಾಂ ಇಷ್ಟವಿಲ್ಲ. ಹೇಗಾದರೂ ಮಾಡಿ ಮುಂದೂಡಲು ಕುಂಟುನೆಪ ಹುಡುಕುತ್ತದೆ ಎಂದು ಕುಹಕವಾಡಿದರು.

ಬಿಬಿಎಂಪಿಯನ್ನು ಸೂಪರ್‌ಸೀಡ್ ಮಾಡಿದರೆ  ಒಂದಷ್ಟು ತಿಂಗಳು ಮುಂದೂಡಬಹುದೆಂಬುದು ಸರ್ಕಾರದ ಹುನ್ನಾರ. ವಾರ್ಡ್ ಮೀಸಲಾತಿ ಪಟ್ಟಿಯಲ್ಲಿನ ಗೊಂದಲ ಇಲ್ಲವೆ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿರುವ  ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ ಎಂದು ದೂರಿದರು.

Write A Comment