ಬೆಂಗಳೂರು, ಏ.5- ದಲಿತರು ಎಂಬ ಕಾರಣಕ್ಕಾಗಿ ಬಾಬು ಜಗಜೀವನರಾಮ್ ಅವರಿಗೆ ಪ್ರಧಾನಮಂತ್ರಿ ಸ್ಥಾನ ನೀಡದೆ ವಂಚಿಸಲಾಯಿತು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದ ಮುಂದಿರುವ ಬಾಬುಜಗಜೀವನರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವತಂತ್ರ ಸೇನಾನಿಯಾಗಿದ್ದ ಬಾಬುಜಗಜೀವನ ರಾಮ್ ಆಡಳಿತ ನಡೆಸಿದ ಎಲ್ಲಾ ಇಲಾಖೆಗಳಲ್ಲೂ ಉತ್ತಮ ವ್ಯವಸ್ಥೆ ನಿರ್ಮಿಸಿದರು.
ಅವರು ಪ್ರಧಾನಿಯಾಗಬೇಕಾಗಿತ್ತು. ದಲಿತರು ಎಂಬ ಕಾರಣಕ್ಕಾಗಿ ಅವಕಾಶ ತಪ್ಪಿಸಲಾಯಿತು. ಇದಕ್ಕೆ ಜನತಾ ಪರಿವಾರವೇ ಮೂಲ ಕಾರಣ ಎಂದು ಆರೋಪಿಸಿದರು. ಬಾಬುಜಗಜೀವನರಾಮ್ ಅವರಿಗೆ ಪ್ರಧಾನಮಂತ್ರಿ ಸ್ಥಾನ ಸಿಗದೇ ಇರುವ ಕೊರಗು ಇಂದಿಗೂ ದಲಿತರನ್ನು ಕಾಡುತ್ತಿದೆ. ಜಾತಿಯ ಕಾರಣಕ್ಕೆ ಸಮರ್ಥ ನಾಯಕರನ್ನು ಮೂಲೆಗುಂಪು ಮಾಡಿದ ವ್ಯವಸ್ಥೆಯ ಬಗ್ಗೆ ದಲಿತರಲ್ಲಿ ಅಸಮಾಧಾನವಿದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಅವರ ಪರಮ ಅಧಿಕಾರ. ನಮ್ಮ ಹಂತದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡುವುದು ಸಮಂಜಸವಲ್ಲ ಎಂದರು.
ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಯಾಗಿದೆ. ಇದು ಎಂದಿಗೂ ಸಾಧ್ಯವಿಲ್ಲ. ಬಿಜೆಪಿಯವರ ಹಗಲುಕನಸು ನನಸಾಗುವುದಿಲ್ಲ ಎಂದು ಆಂಜನೇಯ ತಿರುಗೇಟು ನೀಡಿದರು. ಹಿರಿಯ ಶಾಸಕ ಗೋವಿಂದಕಾರಜೋಳ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.