ಬೆಂಗಳೂರು, ಏ.2: ಸಾಮಾಜಿಕ ಶಾಂತಿ, ನೆಮ್ಮದಿ, ಸಾಮರಸ್ಯ ಹಾಳು ಮಾಡುವ ಕೆಲವು ಶಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸರ ಧ್ವಜ ದಿನಾಚರಣೆ ಹಾಗೂ ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ಮುಖ್ಯಮಂತ್ರಿ ಪದಕ ವಿತರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವವರು ಯಾವುದೇ ಗುಂಪಿಗೆ, ಪಕ್ಷಕ್ಕೆ ಸೇರಿರಲಿ ಅಂಥವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪೊಲೀಸ್ ಕಾಯ್ದೆ ಜಾರಿಗೆ ಬಂದಾಗಿನಿಂದ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಪೊಲೀಸರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಮಹತ್ವದ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ. ಪೊಲೀಸರಿಗೆ ಮುಖ್ಯಮಂತ್ರಿಗಳ ಪದಕ ನೀಡುವುದು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು ಅವರ ವೃತ್ತಿಯ ದಕ್ಷತೆಯಿಂದ ಇಮ್ಮಡಿಗೊಳಿಸುವ ಉದ್ದೇಶದಿಂದ ಮತ್ತು ಅವರು ಇತರರಿಗೆ ಸ್ಪೂರ್ತಿಯಾಗಲಿ ಎಂದು ಹೇಳಿದರು.
ಹಲವು ಸಂದಿಗ್ದ ಪರಿಸ್ಥತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಅವರ ವೃತ್ತಿ ಪರತೆ ಮತ್ತು ಸಮಯ ಸ್ಪೂರ್ತಿ, ದಕ್ಷತೆಯನ್ನು ಪರಿಗಣಿಸಿ ಅವರಿಗೆ ಪದಕ ಕೊಡಲಾಗಿದೆ. ಯಾವುದೇ ಶಿಫಾರಸ್ಸು ಮತ್ತು ಒತ್ತಡವನ್ನು ಪರಿಗಣಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕಳೆದ ಒಂದು ವಾರದಿಂದ ಹಲವರು ನನ್ನ ಮೇಲೆ ಪೊಲೀಸರಿಗೆ ಪದಕ ನೀಡುವಂತೆ ಒತ್ತಡ ತಂದರು. ಆದರೂ ಇದ್ಯಾವುದನ್ನು ಪರಿಗಣಿಸದೆ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ಸೇವೆಯನ್ನು ಪರಿಗಣಿಸಿ ಪದಕ ನೀಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಶಿಸ್ತು ಬಹಳ ಮುಖ್ಯ. ದಕ್ಷ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಿದೆ ಎಂದರೆ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರ್ಥ. ಇದೇ ಪೊಲೀಸ್ ಇಲಾಖೆಯ ಉತ್ತಮ ಸೇವೆಯ ಮಾನದಂಡ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯ ಪೊಲೀಸ್ ಇಲಾಖೆಗೆ ತನ್ನದೇ ಆದ ಇತಿಹಾಸವಿದೆ. ಅಪರಾಧ ಪ್ರಕರಣಗಳ ಪತ್ತೆ, ಅಪರಾಧಿಗಳ ದಸ್ತಗಿರಿ, ಅವರಿಗೆ ಶಿಕ್ಷೆ ಕೊಡಿಸುವಲ್ಲಿ ಉತ್ತಮವಾಗಿ ನಮ್ಮ ಪೊಲೀಸರು ಕರ್ತವ್ಯ ನಿರ್ವಹಿಸಿರುವ ಹೆಮ್ಮೆ ಇದೆ ಎಂದು ಪ್ರಶಂಸಿಸಿದರು.
ತಮ್ಮ ಬಳಿ ಕಷ್ಟ ಹೇಳಿಕೊಂಡು ಬಂದವರಿಗೆ ಮಾನವೀಯತೆಯ ಹಿನ್ನೆಲೆಯಲ್ಲಿ ನೆರವಾಗಿ ಅವರ ಕಷ್ಟ ಪರಿಹರಿ, ಆಗ ಸಿಗುವ ಆತ್ಮತೃಪ್ತಿಯಿಂದ ನಿಮ್ಮ ಗೌರವ ಹೆಚ್ಚಾಗುತ್ತದೆ ಎಂದು ಕಿವಿಮಾತು ಹೇಳಿದರು. ನಿಮ್ಮ ಬೆಂಬಲಕ್ಕೆ ಸರ್ಕಾರ ಸದಾ ಸಿದ್ಧವಿದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ನಾವಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದರು.
ಪೊಲೀಸರ ಮಕ್ಕಳ ಶಿಕ್ಷಣಕ್ಕೆ ಧಾರವಾಡ, ಕೋರಮಂಗಲ, ಮೈಸೂರಿನಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಕಲ್ಬುರ್ಗಿ, ಉಡುಪಿ ಮುಂತಾದ ಕಡೆ ಮತ್ತೆ ಶಾಲೆಗಳನ್ನು ತೆರೆಯಲಾಗುವುದು. ಪೊಲೀಸರಿಗೆ 45 ಕ್ಯಾಂಟೀನ್‌ಗಳನ್ನು ತೆರೆಯಲಾಗಿದೆ. 3 ಸಾವಿರದಷ್ಟು ವಸ್ತುಗಳ ಖರೀದಿ ಮೇಲೆ ವ್ಯಾಟ್ ವಿನಾಯ್ತಿ ನೀಡಲಾಗಿದೆ. ಕ್ಯಾಂಟೀನ್ ಸೌಲಭ್ಯವನ್ನು ನಿವೃತ್ತ ಪೊಲೀಸರಿಗೆ ವಿಸ್ತರಿಸುವ ಚಿಂತನೆ ನಡೆಸಲಾಗಿದೆ.
ನಿವೃತ್ತ ಪೊಲೀಸರ ಸೌಲಭ್ಯಗಳಿಗೆ ಒಂದು ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಪೊಲೀಸರ ಆರೋಗ್ಯ ತಪಾಸಣೆಗೆ ಬಜೆಟ್‌ನಲ್ಲಿ ಒಂದು ಸಾವಿರ ರೂ. ಘೋಷಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ನಿನ್ನೆ ಕಾಲೇಜು ವಿದ್ಯಾರ್ಥಿನಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ರೀತಿ ಕೆಲಸ ಮಾಡಿದರೆ ಸಾರ್ವಜನಿಕರು ಪೊಲೀಸರ ಬಗ್ಗೆ ಒಳ್ಳೆಯ ವಿಶ್ವಾಸವಿಡುತ್ತಾರೆ ಎಂದು ಹೇಳಿದರು. ಗಣನೀಯ ಸೇವೆ ಸಲ್ಲಿಸಿದ 85 ಮಂದಿ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿ ಗೌರವಿಸಿದರು.
ಗೃಹ ಸಚಿವ ಕೆ.ಜೆ.ಜಾರ್ಜ್, ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆ ಅಪರ ಕಾರ್ಯದರ್ಶಿ ಪಟ್ನಾಯಕ್, ಹಿರಿಯ ಅಧಿಕಾರಿ ಕಿಶೋರ್ ಚಂದ್ರ ಈ ಸಂದರ್ಭದಲ್ಲಿ ಇದ್ದರು.
ಪೊಲೀಸರ ಕಾರ್ಯಕ್ಷಮತೆಗೆ ಸಿಎಂ ಪ್ರಶಂಸೆ
ಬೆಂಗಳೂರು: ಪ್ರಗತಿ ಕಾಲೇಜು ವಿದ್ಯಾರ್ಥಿನಿ ಗೌತಮಿ ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸಿಸಿದ್ದಾರೆ.
ಕೋರಮಂಗಲದ ಸಿಆರ್‌ಪಿಎಫ್ ಮೈದಾನದಲ್ಲಿ ಇಂದು ನಡೆದ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಗೆ ಗುಂಡಿಟ್ಟು ಕೊಂದ ದುಷ್ಕರ್ಮಿಯನ್ನು ಕೇವಲ ಆರೇಳು ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ರೀತಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ ಎಂದು ಬೆನ್ನು ತಟ್ಟಿದರು.
ಕಾಲೇಜು ವಿದ್ಯಾರ್ಥಿನಿ ಗೌತಮಿಯನ್ನು ಗುಂಡಿಟ್ಟು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ತಡಮಾಡದೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇದು ನಮ್ಮ ಪೊಲೀಸರ ದಕ್ಷತೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದ್ದಾರೆ.