ಕರ್ನಾಟಕ

ಕ್ರೀಡೆಯನ್ನು ಪ್ರೋತ್ಸಾಹಿಸಲು ಕಾರ್ಪೋರೇಟ್ ಸಂಸ್ಥೆಗಳಿಗೆ ರಾಜ್‌ನಾಥ್‌ಸಿಂಗ್ ಕರೆ

Pinterest LinkedIn Tumblr

BJP-and-Congress

ಬೆಂಗಳೂರು, ಏ.2: ವಿಶ್ವ ಕ್ರೀಡೆಯಲ್ಲಿ ಭಾರತ ಮಹಾನ್ ಶಕ್ತಿಯಾಗಿ ಹೊರಹೊಮ್ಮಲು ಕಾರ್ಪೋರೇಟ್ ಸಂಸ್ಥೆಗಳು ಕ್ರೀಡೆಯನ್ನು ಪ್ರೋತ್ಸಾಹಿಸಲು ಮುಂದೆ ಬರಬೇಕು ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್ ಇಂದಿಲ್ಲಿ ಕರೆ ನೀಡಿದರು.

ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೈರಸಂದ್ರ ವಾರ್ಡ್‌ನಲ್ಲಿ ನಿರ್ಮಿಸಲಾಗಿರುವ ಅಂತಾರಾಷ್ಟ್ರೀಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂ ಗಣ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಸಾಮಾಜಿಕ ಕಳಕಳಿಗೆ ಕಾರ್ಪೋರೇಟ್ ಸಂಸ್ಥೆಗಳು ಸ್ಪಂದಿಸುತ್ತವೆ. ಅದೇರೀತಿ ಕ್ರೀಡಾ ಕ್ಷೇತ್ರದಲ್ಲೂ ಹೆಚ್ಚಿನ ಬಂಡವಾಳ ಹೂಡುವತ್ತ ಗಮನಹರಿಸಬೇಕೆಂದು ಸಂಸ್ಥೆಗಳಿಗೆ ಮನವಿ ಮಾಡಿದರು. ಹಿಂದೆ ಒಂದು ದೇಶದ ಅಭಿವೃದ್ಧಿ ಯನ್ನು ಆರ್ಥಿಕತೆ ಆಧಾರದ ಮೇಲೆ ಅಳೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಆಯಾ ದೇಶಗಳ ಕ್ರೀಡಾ ಸಾಮರ್ಥ್ಯವನ್ನು ಓರೆಗೆ ಹಚ್ಚಿ ಅಭಿವೃದ್ಧಿಯನ್ನು ಅಳೆಯಲಾಗುತ್ತಿದೆ ಎಂದು ಹೇಳಿದರು.

ಬಲಿಷ್ಠ ಪಾಶ್ಚಿಮಾತ್ಯ ರಾಷ್ಟ್ರಗಳ ಕ್ರೀಡಾಪಟುಗಳು ಮಾತ್ರ ವಿಶ್ವ ಮನ್ನಣೆ ಗಳಿಸುವ ಕಾಲವೊಂದಿತ್ತು. ಆದರೆ ಇತ್ತೀಚೆಗೆ ದಕ್ಷಿಣ ಕೊರಿಯಾ, ಜಪಾನ್, ಚೀನಾ ದೇಶಗಳು ಪ್ರಾಬಲ್ಯ ಸಾಧಿಸಿವೆ. ಕಾಲ ಬದಲಾದಂತೆ ಭಾರತದ ಕ್ರೀಡಾಪಟುಗಳು ವಿಶ್ವ ಮನ್ನಣೆಗೆ ಪಾತ್ರರಾಗುತ್ತಿದ್ದಾರೆ. ಈ ಮೂಲಕ ಭಾರತ ಸಹ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು. ಮಹಿಳಾ ಪಟುಗಳು ಕ್ರೀಡೆಯಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಬಾಕ್ಸಿಂಗ್‌ನಲ್ಲಿ ಮೇರಿಕೋಮ್, ಶೆಟಲ್‌ನಲ್ಲಿ ಸೈನಾ ನೆಹವಾಲ್ ಎಂದು ಬಣ್ಣಿಸಿದರು.

ಸ್ವತಃ ಕ್ರೀಡಾಭಿಮಾನಿ ಯಾಗಿರುವ ಪ್ರಧಾನಿ ಮೋದಿ ಯವರು ಕ್ರೀಡಾಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ. ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸು ತ್ತಿದ್ದಾರೆ ಎಂದು ಹೇಳಿದರು. ಕ್ರೀಡೆಯನ್ನು ಪ್ರೋತ್ಸಾಹಿಸಲು ಕಾರ್ಪೋರೇಟ್ ಸಂಸ್ಥೆಗಳು ಮುಂದೆ ಬರಬೇಕು ಎಂದು ಕೋರಿದರು.

ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನ ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯ ಹೊಂದಿದೆ. ಇಲ್ಲಿ ತರಬೇತಿ ಪಡೆದ ಕ್ರೀಡಾ ಪಟುಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ದೇಶದ ಕೀರ್ತಿ ಪತಾಕೆ ಹಾರಿಸುವತ್ತ ಗಮನಹರಿಸುವಂತೆ ರಾಜ್‌ನಾಥ್‌ಸಿಂಗ್ ಕಿವಿಮಾತು ಹೇಳಿದರು.

ಸಚಿವ ರಾಮಲಿಂಗಾರೆಡ್ಡಿ ಮಾತ ನಾಡಿ, ಬೆಂಗಳೂರಿನ ಅಭಿವೃದ್ಧಿಗಾಗಿ ಬಿಡುಗಡೆಯಾಗುತ್ತಿದ್ದ ನರ್ಮ್ ಯೋಜನೆಯ ಹಣವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿ ಹೊಸ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಶೀಘ್ರವೇ ನಗರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ರಾಜ್‌ನಾಥ್‌ಸಿಂಗ್‌ರಲ್ಲಿ ಮನವಿ ಮಾಡಿದರು. ಸ್ಥಳೀಯ ಪಾಲಿಕೆ ಸದಸ್ಯ ಎನ್.ನಾಗರಾಜ್ ಮಾತನಾಡಿ, ಎಲ್ಲರ ಸಹಕಾರದೊಂದಿಗೆ 10ಕೋಟಿ ರೂ. ವೆಚ್ಚದಲ್ಲಿ ಈ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಿದ್ದೇವೆ. ದಕ್ಷಿಣ ಬೆಂಗಳೂರಿಗರಿಗೆ ಯಾವುದೇ ಕ್ರೀಡಾಂಗಣ ಇರಲಿಲ್ಲ.

ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣವಾಗಿದೆ. ಎಲ್ಲಾ ಸೌಲಭ್ಯವಿದೆ. ಎಲ್ಲಾ ರೀತಿಯ ಕ್ರೀಡಾ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಭಾಗದ ಜನರು ಇದರ ಸದುಪಯೋಗಪಡೆಯಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್, ರಾಜ್ಯ ಗೃಹ ಸಚಿವ ಕೆ.ಜೆ.ಜಾರ್ಜ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಬಿ.ಎನ್.ವಿಜಯಕುಮಾರ್, ಮೇಯರ್ ಶಾಂತಕುಮಾರಿ, ಉಪಮೇಯರ್ ಕೆ.ರಂಗಣ್ಣ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರು, ಗಣ್ಯರು ಹಾಜರಿದ್ದರು.

ಭಯೋತ್ಪಾದನೆ ನಿವಾರಣೆ ಅಹಿಂಸಾಚರಣೆಯಿಂದಲೂ ಸಾಧ್ಯ

ಬೆಂಗಳೂರು: ವಿಶ್ವವನ್ನೆ ಕಾಡುತ್ತಿರುವ ಭಯೋತ್ಪಾದನೆಯನ್ನು ಮಿಲಿಟರಿಯಂತಹ ಬಲಪ್ರಯೋಗದ ಮೂಲಕ ನಿವಾರಣೆ ಮಾಡಬಹುದಾದರೂ , ಮನೋಧರ್ಮದಲ್ಲಿರುವ ಹಿಂಸಾ ಪ್ರವೃತ್ತಿಯನ್ನು ನಿವಾರಿಸಲು ಅಹಿಂಸಾ ಚರಣೆಗಳಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅಭಿಪ್ರಾಯಪಟ್ಟರು.

ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಜೈನ ಯುವ ಸಮಾಜದ ವತಿಯಿಂದ ಏರ್ಪಡಿಸಿದ್ದ ಭಗವಾನ್ ಮಹಾವೀರರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಇಂದು ವಿಶ್ವಕ್ಕೆ ಸವಾಲಾಗಿದೆ. ಎಲ್ಲ ದೇಶಗಳಲ್ಲಿ ಆತಂಕ ಉಂಟುಮಾಡಿದೆ. ವಿಶ್ವ ಸಮುದಾಯ ಒಟ್ಟಾಗಿ ಸೈನ್ಯದಂತಹ ಶಕ್ತಿಬಳಿಸಿ ತಾತ್ಕಾಲಿಕವಾಗಿ ಭಯೋತ್ಪಾದನೆಯನ್ನು ನಿವಾರಣೆ ಮಾಡಬಹುದು. ಆದರೆ ಮನುಷ್ಯರಲ್ಲಿರುವ ಹಿಂಸಾತ್ಮಕ ಪ್ರವೃತ್ತಿ ತೊಡೆದು ಹಾಕಲು ಸಾಧ್ಯವಿಲ್ಲ. ಅದನ್ನು ತೊಡೆದುಹಾಕಬೇಕಾದರೆ ಜೈನ ಧರ್ಮದ ಅಹಿಂಸಾ ತತ್ವ ಅಗತ್ಯ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ಜೈನ ಧರ್ಮ ಅಮೂಲ್ಯ ರತ್ನ ಇದ್ದಂತೆ. ಹಲವಾರು ಧರ್ಮಗಳು ಹಲವಾರು ವೈಚಾರಿಕ ಆಚರಣೆ ಹೊಂದಿದೆ. ಆದರೆ, ಜೈನ ಧರ್ಮದ ಅಹಿಂಸೆ, ಧರ್ಮ ಪ್ರತಿಪಾದಿಸಿ ಅದನ್ನು ಆಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವ ಹಲವಾರು ಸಂಸ್ಕೃತಿ ಆಚರಣೆಗಳ ತುಣುಕುಗಳಿಂದ ನಿರ್ಮಾಣವಾಗಿದೆ. ಅದರಲ್ಲಿ ಜೈನ ಧರ್ಮ ಆಚರಣೆ ಪ್ರಮುಖ ಸ್ಥಾನ ಪಡೆದಿದೆ ಎಂದು ಪ್ರತಿಪಾದಿಸಿದರು. 2400 ವರ್ಷಗಳ ಹಿಂದೆ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಅವರ ಪಟ್ಟಾಭಿಷೇಕ ಜೈನ ಧರ್ಮ ಪದ್ದತಿಯಲ್ಲಿ ನಡೆದಿತ್ತು. ದೇಶದ ಅಖಂಡತೆಗೆ ಜೈನರ ಕೊಡುಗೆ ಅಪಾರವಾಗಿದೆ. ಜನಸಂಖ್ಯೆ ಕಡಿಮೆಯಿದ್ದರೂ ಸುಶಿಕ್ಷಿತ ಮತ್ತು ಸಂಸ್ಕಾರಯುತ ಜೈನರ ಪ್ರಭಾವ ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ನಮ್ಮ ನಡವಳಿಕೆ ಕ್ರಿಯೆ, ಆಚರಣೆಗಳು ಇನ್ನೊಬ್ಬರಿಗೆ ನೋವಾಗದಂತಿರಬೇಕು. ಅದೇ ಧರ್ಮ ಮಹಾವೀರರು ಇದೆ ತತ್ವವನ್ನು ಭೋಧಿಸಿದ್ದರು. ಎಲ್ಲ ಧರ್ಮೀಯರು ಸೌಹಾರ್ಧತೆಯಿಂದ ಬಾಳಬೇಕು ಸಮಾಜವನ್ನು ಕಟ್ಟುವ ಕೆಲಸವಾಗಬೇಕು. ಅದೇ ಅವರಿಗೆ ಸಲ್ಲಿಸುವ ಗೌರವ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಮಾಜದ ಒಡೆಯುವ ಕೆಲಸ ಮಾಡುತ್ತಿದೆ. ದ್ವೇಷ ಅಸೂಯೆ ಹುಟ್ಟುಹಾಕಿ, ಸಮಾಜದ ನಡುವೆ ಗೋಡೆ ನಿರ್ಮಿಸುವ ಶಕ್ತಿಗಳ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದರು. ಇತೀಚೆಗೆ ಭಯೋತ್ಪಾದನೆ ಹೆಚ್ಚುತ್ತಿದೆ. ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ದೊರೆಯದು. ಪ್ರೀತಿ-ಅಹಿಂಸೆಯಿಂದ ಏನನ್ನಾದರೂ ಪಡೆಯಬಹುದು. ಹುಟ್ಟು – ಸಾವಿನ ನಡುವೆ ಬದುಕಿರುವ ದಿನಗಳಲ್ಲಿ ನಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿಕೊಳ್ಳಬೇಕು. ಮಹಾವೀರರ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.

ಜೈನ ಯುವ ಸಂಘಟನೆ ಬಹಳಷ್ಟು ಸಾಮಾಜಿಕ ಕೆಲಸ ಕಾರ್ಯ ಮಾಡುತ್ತಿವೆ. ಅವರ ಚಟುವಟಿಕೆಗಳಿಗಾಗಿ ನಗರದಲ್ಲಿ ಜಾಗ ಕೇಳಿದ್ದಾರೆ. ಮುಂದೆ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿದರೆ ನಾಗರೀಕ ನಿವೇಶನ (ಸಿಎ ಸೈಟ್) ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಸಚಿವರಾದ ದಿನೇಶ್ ಗುಂಡೂರಾವ್, ಅಭಯ್‌ಚಂದ್ರ ಜೈನ್ ಅವರೊಂದಿಗೆ ಸಂಪರ್ಕ ಇಟ್ಟುಕೊಂಡು ಸೌಬ್ಯ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ತಮ್ಮ ಬಜೆಟ್‌ನಲ್ಲಿ ಜೈನ್ ಬಸದಿಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇವೆ. ಜೈನ ಶಿಲಾ ಶಾಸನಗಳ ಅಧ್ಯಯನ ಪೀಠ ಸ್ಥಾಪಿಸಲು ಆರ್ಥಿಕ ನೆರವು ನೀಡಲಾಗಿದೆ ಎಂದು ವಿವರಿಸಿದರು. ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮುನ್ನೋಟ್ ಮಾತನಾಡಿ, ಗೋವಿನಿಂದ ಅನ್ನಭಾಗ್ಯ, ಕ್ಷೀರಭಾಗ್ಯ, ಆದರೆ ಗೋವಿಗೇಕೆ ಹತ್ಯೆಯ ಭಾಗ್ಯ. ಗೋಹತ್ಯೆ ಸಮರ್ಥಿಸುವುದು ಬೇಡ. ಗೋವುಗಳನ್ನು ಸಂರಕ್ಷಿಸೋಣ ಎಂದು ಸಿಎಂ ಅವರಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ರಾಜನಾಥ ಸಿಂಗ್ ತೆರಳುವಾಗ ತ್ರಿಚಂದ್ರ ಗುಹೇಶ್ವರ ಸ್ವಾಮೀಜಿ ದೇಶದ್ಯಾಂತ ಗೋಹತ್ಯೆ ನಿಷೇದವಾಗಬೇಕು, ಗೋ ಸಂಪತ್ತು ಉಳಿಯಬೇಕೆಂದು ಪ್ರತಿಪಾದಿಸಿದರು. ಕಾರ್ಯಕ್ರಮದ ಆಯೋಜಕರು ಸಹ ಗಣ್ಯರಿಗೆ ಗೋಹತ್ಯೆ ತಡೆಗೆ ಮನವಿ ಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದ ಪಿ.ಸಿ.ಮೋಹನ್, ಅಭಯ್ ಚಂದ್ರ ಜೈನ್, ಕೇಂದ್ರದ ಮಾಜಿ ಸಚಿವ ಗುಲಾಬ್ ಚಂದ್, ಜೈನ ಯುವ ಸಂಘಟನೆ ಅಧ್ಯಕ್ಷ ರಮೇಶ್ ಗೋಕ, ಸುರೇಶ್, ಮತ್ತಿತರರು ಉಪಸ್ಥಿತರಿದ್ದರು.

Write A Comment