ಕರ್ನಾಟಕ

10 ಕೋಟಿ ಸದಸ್ಯತ್ವಕ್ಕೆ ಅಮಿತ್ ಷಾ ಕಟ್ಟಾದೇಶ

Pinterest LinkedIn Tumblr

Amith-Sha

ಬೆಂಗಳೂರು, ಏ.2: ಹತ್ತು ಕೋಟಿ ಸದಸ್ಯತ್ವ ಗುರಿ ಮುಟ್ಟಲೇಬೇಕು. ಈ ತಿಂಗಳ ಅಂತ್ಯಕ್ಕೆ ಸಂಪೂರ್ಣ ವರದಿ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎಲ್ಲ ರಾಜ್ಯಗಳ ಬಿಜೆಪಿ ಘಟಕ ಅಧ್ಯಕ್ಷರಿಗೆ ಕಟ್ಟಾದೇಶ ನೀಡಿದ್ದಾರೆ. ನಗರದ ಪಂಚತಾರಾ ಹೊಟೇಲ್‌ನಲ್ಲಿಂದು ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ 8.5 ಕೋಟಿ ಹೊಸ ಸದಸ್ಯರು ಬಿಜೆಪಿಗೆ ಸೇರ್ಪಡೆ ಯಾಗಿದ್ದಾರೆ. ಆದರೂ ನಮ್ಮ ಗುರಿ ಇರುವುದು 10 ಕೋಟಿ. ಅದನ್ನು ಮುಟ್ಟಬೇಕು. ಇದಕ್ಕೆ ಇನ್ನೂ 30 ದಿನಗಳ ಸಮಯಾವಕಾಶವಿದೆ. ಶೀಘ್ರದಲ್ಲೇ ಪೂರ್ಣಗೊಳಿಸಿ ವರದಿ ನೀಡಬೇಕು ಎಂದು ತಿಳಿಸಿದ್ದಾರೆ.

‘ನಮ್ಮದು ಈಗ ದಕ್ಷಿಣದಿಂದ ಈಶಾನ್ಯದೆಡೆಗೆ’ ದಕ್ಷಿಣ ಭಾರತದ ಪ್ರಮುಖ ನೆಲೆಯಾಗಿರುವ ಬೆಂಗಳೂರಿನಲ್ಲಿ ಕಾರ್ಯಕಾರಿಣಿ ನಡೆಯುತ್ತಿರುವುದು ವಿಶೇಷವಾಗಿದೆ. ಇದೇ ಹುಮ್ಮಸ್ಸಿನಲ್ಲಿ ಈಶಾನ್ಯ ರಾಜ್ಯಗಳತ್ತವೂ ಪಕ್ಷವನ್ನು ಸಂಘಟಿಸಿ ವೃದ್ಧಿಸುವ ಸಂಕಲ್ಪ ತೊಡೋಣ ಎಂದು ಹೇಳಿದರು.

ಕಾರ್ಯಕಾರಿಣಿಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಬೇಕು. ಅದರಂತೆ ಕಾರ್ಯಸೂಚಿ ಸಿದ್ಧಪಡಿಸಲಾಗುವುದು. ಬಿಜೆಪಿ ಸರ್ಕಾರೇತರ ರಾಜ್ಯಗಳಲ್ಲಿ ಕಮಲ ಅರಳಬೇಕು. ಅದಕ್ಕಾಗಿ ಈಗಿನಿಂದಲೇ ಕಾರ್ಯಕ್ರಮ ಸಿದ್ಧವಾಗಲಿ ಎಂದು ಸಲಹೆ ನೀಡಿದರು.

ಇದೇ ವೇಳೆ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ತಮಿಳುನಾಡು ಸೇರಿದಂತೆ ಈಶಾನ್ಯ, ಉತ್ತರ ಭಾರತದಲ್ಲಿ ಕೆಲವು ರಾಜ್ಯಗಳ ಚುನಾವಣೆಯಿದ್ದು, ಅಲ್ಲಿ ನಮ್ಮ ಶಕ್ತಿ ಪ್ರದರ್ಶನವಾಗಬೇಕಾಗಿದೆ. ಪ್ರಸ್ತುತ ಕೆಲವು ವಿವಾದಗಳಿಂದ ಜನರಲ್ಲಿ ತಪ್ಪು ಮಾಹಿತಿಗಳು ರವಾನೆಯಾಗುತ್ತಿವೆ. ಇದನ್ನು ತಪ್ಪಿಸಿ ಕೇಂದ್ರ ಸರ್ಕಾರದಿಂದ ಜನರಿಗೆ ಸಿಗಬೇಕಾದ ಸವಲತ್ತು ಮತ್ತು ಜನಪರ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಿ ಎಂದು ಸೂಚನೆ ನೀಡಿದರು. ನಂತರ ರಾಜ್ಯ ಘಟಕಗಳ ಅಧ್ಯಕ್ಷರು ಕಳೆದ ಒಂದು ವರ್ಷದಿಂದ ಆಗಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಮಂಡಿಸಿದರು.

ನಗರದಲ್ಲಿ ಪ್ರಧಾನಿ ಮೋದಿ ಜಪ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಿದರು. ಎಚ್‌ಎಎಲ್ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಆಗಮಿಸಿದ ಅವರು ಸಂಜೆ ಖಾಸಗಿ ಹೊಟೇಲ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ವಿವಿಧ ರಾಜ್ಯಗಳ ರಾಜ್ಯಾಧ್ಯಕ್ಷರು ಹಾಗೂ ರಾಜ್ಯಗಳ ಉಸ್ತುವಾರಿ ಹೊಣೆ ಹೊತ್ತಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ.

ಇಂದು ರಾತ್ರಿ ರಾಜ್ಯದ ಸಂಸದರು ಹಾಗೂ ಶಾಸಕರ ಜತೆ ಔತಣಕೂಟವಿದ್ದು, ಸಂವಾದ ನಡೆಸುವ ಸಾಧ್ಯತೆಗಳೂ ಇದ್ದು, ನಾಳೆ ಬೆಳಿಗ್ಗೆಯಿಂದ ಆರಂಭಗೊಳ್ಳುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಸಂಜೆ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿಯವರು ಭಾಷಣ ಮಾಡಲಿದ್ದಾರೆ.

ನಾಳೆ ರಾತ್ರಿ ಮಾಜಿ ಶಾಸಕರು, ಮಾಜಿ ಸಂಸದರೊಂದಿಗೆ ಮೋದಿ ಸಮಾಲೋಚನೆ ನಡೆಸಲಿದ್ದಾರೆ. ಶನಿವಾರ ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ತೆರಳುವ ಮುನ್ನ ಬಿಬಿಎಂಪಿ ಬಿಜೆಪಿ ಸದಸ್ಯರು ಹಾಗೂ ಬೆಂಗಳೂರಿನ ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸುವ ಕಾರ್ಯಕ್ರಮವಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇಂದು ಮತ್ತು ನಾಳೆ ಸಾರ್ವತ್ರಿಕ ರಜಾದಿನವಾಗಿರುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗದಂತೆ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿದೆ. ಅಲ್ಲದೆ, ಶನಿವಾರ ಕೂಡ ಹೆಚ್ಚಿನ ಸಂಚಾರ ಒತ್ತಡ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸಂಚಾರ ದಟ್ಟಣೆಯ ಕಿರಿಕಿರಿ ಉಂಟಾಗದಿರಲಿ ಎಂಬ ಉದ್ದೇಶದಿಂದ ಈ ಮೂರೂ ದಿನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ ದಾಖಲೆ ಸದಸ್ಯತ್ವ:ಹುಸೇನ್

ಬೆಂಗಳೂರು, ಏ.2-ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ತಿಳಿಸಿದ್ದಾರೆ. ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಇಂದು ನಡೆದ ಸಭೆಯಲ್ಲಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಪರಸ್ಪರ ಸಂತಸ ವ್ಯಕ್ತಪಡಿಸಲಾಯಿತು. ಇಂದು ಸಂಜೆ ಪ್ರಧಾನಿ ಮೋದಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ನಾಳೆ ನಡೆಯಲಿರುವ ಕಾರ್ಯಕಾರಣಿಯಲ್ಲಿ ಪ್ರಧಾನಿ ಮೋದಿ, ಅಡ್ವಾನಿ ಸೇರಿದಂತೆ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಆದರೆ ಅನಾರೋಗ್ಯದ ನಿಮಿತ್ತ ಅಟಲ್ ಬಿಹಾರಿ ವಾಜಪೇಯಿ ಪಾಲ್ಗೊಳ್ಳುತ್ತಿಲ್ಲ. 10 ಕೋಟಿ ಸದಸ್ಯರನ್ನು ನೇಮಕ ಮಾಡಬೇಕು ಎಂದು ಹೇಳಿದರು

Write A Comment