– ಅನಿತಾ ಈ.
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿದ್ದು, ವಾರದಲ್ಲಿ ಎರಡು ಅಥವಾ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವವರ ಪರಿಸ್ಥಿತಿ ನಿಜಕ್ಕೂ ಮನಮಿಡಿಯುವಂಥದ್ದು.
ಬಡತವರಿಗೆ ಉಚಿತವಾಗಿ ಡಯಾಲಿಸಿಸ್ ಮಾಡಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆ ಅರ್ಪಣಾ. ಬೆಂಗಳೂರು ಕಿಡ್ನಿ ಫೌಂಡೇಷನ್ ಸಹಯೋಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಉಚಿತವಾಗಿ ಕಿಡ್ನಿ ಡಯಾಲಿಸಿಸ್ ಮಾಡಿಸುತ್ತಾ ಬಂದಿದೆ.
2009ರಲ್ಲಿ ಸಂಸ್ಥೆ ಆರಂಭವಾದಾಗ ಸಣ್ಣ ಪ್ರಮಾಣದಲ್ಲಿ ಹಳೇ ನ್ಯೂಸ್ ಪೇಪರ್‌ಗಳ ಸಂಗ್ರಹ ಕಾರ್ಯವನ್ನು ಪ್ರಾರಂಭಿಸಿತು. ಆಗ ಕೇವಲ ಪರಿಚಿತರಿಂದ 200–300 ಕೆ.ಜಿ. ಹಳೇ ಪೇಪರ್ ಸಂಗ್ರಹಿಸಿ, ಅದನ್ನು ಮಾರಿ ಬಂದ ಹಣದಿಂದ ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ ಮಾಡಿಸಲು ಪ್ರಾರಂಭಿಸಿದರು. ಈಗ ಇದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ನಿತ್ಯ ಸಂಸ್ಥೆಯ ಸದಸ್ಯರು ನಗರದ ಹೋಟೆಲ್, ಕಚೇರಿಗಳು ಹಾಗೂ ದೊಡ್ಡ ವಸತಿ ಸಮುಚ್ಚಯಗಳಿಗೆ ತೆರಳಿ ಧನ ಸಹಾಯದ ಬದಲಾಗಿ ಹಳೇ ಪೇಪರ್‌ಗಳನ್ನು ಸಂಗ್ರಹಿಸುತ್ತಿದ್ದಾರೆ.
‘ಆರ್ಥಿಕವಾಗಿ ಹಿಂದುಳಿದ ವ್ಯಕ್ತಿ ಕಿಡ್ನಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಹೀಗೆ ಸಂಗ್ರಹಿಸಿದ ರದ್ದಿ ಪೇಪರನ್ನು ಮಾರಿ ಬಂದ ಹಣದಿಂದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಬಳಸಿಕೊಳ್ಳುತ್ತಿದ್ದಾರೆ. ಸಂಸ್ಥೆ ಪ್ರಾರಂಭವಾದಾಗ ಧನ ಸಹಾಯಕ್ಕಾಗಿ ಜನರ ಮುಂದೆ ಹೋದಾಗ ನಿರಾಸೆ ಎದುರಾದದ್ದೇ ಹೆಚ್ಚು. ಇದರಿಂದ ನಿಧಿ ಸಂಗ್ರಹಿಸಲು ಹಳೇ ಪೇಪರ್ ಸಂಗ್ರಹಿಸುವ ದಾರಿ ಹಿಡಿಯಬೇಕಾಯಿತು’ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಸಿ.ವಿ.ಸುಂದರೇಶ್.
‘ಪೇಪರ್ ಮಾರುವುದರಿಂದ ಬರುವ ಹಣದಿಂದ ಬಡ ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದು ತುಂಬಾ ಕಷ್ಟ. ಆದರೆ ಪೇಪರ್ ಸಂಗ್ರಹದ ವೇಳೆ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಅರಿವು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಈ ವರ್ಷ ಸುಮಾರು 700 ಮಂದಿಗೆ ಉಚಿತವಾಗಿ ಡಯಾಲಿಸಿಸ್ ಮಾಡಿಸುವ ಉದ್ದೇಶ ನಮ್ಮದು’ ಎನ್ನುತ್ತಾರೆ.
‘ಹಳೇ ಪೇಪರ್ ಕೇಳಲು ಹೋದಾಗಲೂ ನಿರಾಸೆ, ಜನರ ಬೈಗುಳ ಎಲ್ಲವನ್ನೂ ಎದುರಿಸಬೇಕಾಯಿತು. ಆದರೆ ಪೇಪರ್ ಸಂಗ್ರಹದೊಂದಿಗೆ ಸಂಸ್ಥೆಯ ಉದ್ದೇಶ ಹಾಗೂ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಹಾಗೂ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಅರಿವು ಮೂಡಿಸಲು ಪ್ರಾರಂಭಿಸಿದೆವು. ಇದರಿಂದ ದಿನ ಕಳೆದಂತೆ ಸಂಸ್ಥೆಯ ಕಾರ್ಯಕ್ಕೆ ಜನ ಕೈ ಜೋಡಿಸಿದರು. ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಕಾರ್ಯ ಈಗ ದೊಡ್ಡದಾಗಿ ಬೆಳೆಯುತ್ತಿದೆ’ ಎಂದು ಸಂತೋಷದಿಂದ ಹೇಳುತ್ತಾರೆ ಅವರು.
‘ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಬಾರಿ ಕಿಡ್ನಿ ಡಯಾಲಿಸಿಸ್ ಮಾಡಿಸಲು ₹600 ವೆಚ್ಚವಾಗುತ್ತದೆ. ಅದೇ ಖಾಸಗಿ ಆಸ್ಪತ್ರೆಯಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಸಲು ಒಂದು ತಿಂಗಳಿಗೆ ₹6 ಸಾವಿರ ತೆರಬೇಕಾಗುತ್ತದೆ. ಎಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ತಂತ್ರಜ್ಞಾನ, ನುರಿತ ಸಿಬ್ಬಂದಿ ಹಾಗೂ ಬೇಕಾದ ಸೌಲಭ್ಯ ಸಿಗುವುದಿಲ್ಲ. ಇದರಿಂದಾಗಿ ಬೇರೆ ದಾರಿ ಇಲ್ಲದೆ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಇದರೊಂದಿಗೆ ಇತರೆ ಔಷಧಗಳಿಗೆ ಮತ್ತಷ್ಟು ಹಣ ಖರ್ಚು ಮಾಡಬೇಕು. ಎಷ್ಟೋ ಸಂದರ್ಭಗಳಲ್ಲಿ ಹಣ ಜೋಡಿಸಲಾಗದೆ ಹಲವರು ಚಿಕಿತ್ಸೆ ಪಡೆಯದೆಯೇ ಇರುತ್ತಾರೆ’ ಎಂದು ಬೇಸರದಿಂದ ನುಡಿದರು.
ಸಂಸ್ಥೆ ಸಂಗ್ರಹಿಸಿದ ನಿಧಿ ಹಾಗೂ ಪೇಪರ್ ಮಾರಿ ಬಂದ ಹಣವನ್ನು ಬೆಂಗಳೂರು ಕಿಡ್ನಿ ಫೌಂಡೇಷನ್‌ಗೆ ನೀಡುವ ಮೂಲಕ ಅಲ್ಲಿ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಮಾಡಿಸುತ್ತಾರೆ. ಡಯಾಲಿಸಿಸ್‌ಗಾಗಿ ಬರುವ ರೋಗಿಯ ಆರ್ಥಿಕ ಪರಿಸ್ಥಿತಿ ಬಗ್ಗೆ ಫೌಂಡೇಷನ್‌ನ ಸದಸ್ಯರು ವಿಚಾರಿಸುತ್ತಾರೆ. ರೋಗಿ ನೀಡಿದ ವಿವರಗಳು ಸರಿಯಾಗಿದ್ದಲ್ಲಿ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಅರ್ಪಣಾ ಸಂಸ್ಥೆಯ ವತಿಯಿಂದ ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
ಕಿಡ್ನಿ ಸಮಸ್ಯೆ ಕುರಿತಂತೆ ಪಾರ್ಕ್, ಸಾರ್ವಜನಿಕ ಪ್ರದೇಶಗಳು ಸೇರಿದಂತೆ ನಗರದೆಲ್ಲೆಡೆ ಹಲವು ಬಾರಿ ಅರಿವಿನ ಕಾರ್ಯಕ್ರಮಗಳು, ಕೈಪಿಡಿ ಹಂಚಿಕೆ ಸೇರಿದಂತೆ ನಾನಾ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಅದರಲ್ಲೂ ಕಿಡ್ನಿ ದಿನಾಚರಣೆಯ ದಿನ ನಗರದಲ್ಲಿ ವಾಕಥಾನ್ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಇದಕ್ಕೆ ಚಿತ್ರರಂಗದ ನಟ–ನಟಿಯರು ಸಹ ಕೈ ಜೋಡಿಸಿದ್ದಾರೆ.
ಸಂಪರ್ಕಕ್ಕೆ: 9845201563