ಬೆಂಗಳೂರು, ಏ.1: ಮಧ್ಯರಾತ್ರಿ ಹಾಸ್ಟೆಲ್‌ಗೆ ನುಗ್ಗಿದ ಅಟೆಂಡರ್ ಪಿಸ್ತೂಲಿನಿಂದ ಗುಂಡು ಹಾರಿಸಿ ದ್ವಿತೀಯ ಪಿಯು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ನಂತರ ತಡೆಯಲು ಬಂದ ಮತ್ತೊಬ್ಬ ವಿದ್ಯಾರ್ಥಿನಿ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಪತಂಜಲಿ ನಗರದ ರಮೇಶ್ ಎಂಬುವರ ಏಕೈಕ ಪುತ್ರಿ ಗೌತಮಿ (17) ಹತ್ಯೆಗೀಡಾದ ವಿದ್ಯಾರ್ಥಿನಿ.
ಈ ವೇಳೆ ಗೌತಮಿ ಜೊತೆಯಲ್ಲಿದ್ದ ಸ್ನೇಹಿತೆ, ಪಾವಗಡದ ಡಾ.ಜಯಂತಿ ಎಂಬುವರ ಒಬ್ಬಳೇ ಮಗಳಾದ ಸಿರಿಶಾ (17) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಕಲ್ಯಾಣಿ ಪ್ರಗತಿ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ (30) ಮಧ್ಯರಾತ್ರಿ ಕಾಲೇಜಿನ ಆವರಣದಲ್ಲೇ ಇರುವ ಮಹಿಳಾ ಹಾಸ್ಟೆಲ್‌ಗೆ ನುಗ್ಗಿದ್ದಾನೆ. ಮೂರನೇ ಮಹಡಿಯಲ್ಲಿ ಗೌತಮಿ ಮತ್ತು ಸಿರಿಶಾ ಅವರು ಇದ್ದ ಕೊಠಡಿ ಬಾಗಿಲು ತಟ್ಟಿದ್ದಾನೆ.
ಇಷ್ಟು ಹೊತ್ತಿನಲ್ಲಿ ಯಾರು ಬಂದಿದ್ದಾರೆ ಎಂದು ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಅವರನ್ನು ತಳ್ಳಿಕೊಂಡು ಮಹೇಶ್ ಒಳಹೊಕ್ಕಿದ್ದಾನೆ. ಏನು ನಡೆಯುತ್ತಿದೆ ಎಂಬುದು ತಿಳಿಯದೆ ವಿದ್ಯಾರ್ಥಿನಿಯರು ಕಿರುಚಿದ್ದಾರೆ. ತಕ್ಷಣ ಆತ ತಂದಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾನೆ.
ಆ ಗುಂಡು ಗೌತಮಿ ತಲೆಗೆ ಹೊಕ್ಕಿ ಆಕೆ ಕುಸಿದು ಬಿದ್ದ ನಂತರ ಅಲ್ಲೇ ಇದ್ದ ಸಿರಿಶಾ ಆತನನ್ನು ಹಿಡಿಯಲು ಮುಂದಾಗಿದ್ದಾಳೆ. ಆಗ ಆಕೆಯ ಮೇಲೂ ಹಲ್ಲೆ ನಡೆಸಿ ಮಹೇಶ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಮಹೇಶ್ ಮೂಲತಃ ಶಿವಮೊಗ್ಗ ಜಿಲ್ಲೆಯ ಆಗುಂಬೆ ನಿವಾಸಿ ಎಂದು ತಿಳಿದುಬಂದಿದ್ದು, ಈತನ ಪತ್ತೆಗಾಗಿ ತನಿಖೆ ಮುಂದುವರೆದಿದೆ. ಮಧ್ಯರಾತ್ರಿ ಹಾಸ್ಟೆಲ್‌ನಲ್ಲಿ ಗುಂಡಿನ ಸದ್ದುಕೇಳಿ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ನಿವಾಸಿಗಳು ಈ ಗುಂಡಿನ ಶಬ್ದ ಎಲ್ಲಿಂದ ಕೇಳಿ ಬಂತು ಎಂದು ಗಾಬರಿಯಾಗಿ ಹೊರಗೆ ಬಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಗೌತಮಿಯನ್ನು ವೈದೇಹಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕಾಡುಗೋಡಿ ಹಾಗೂ ವೈಟ್‌ಫೀಲ್ಡ್ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಅಲ್ಲಿನ ಕೆಲ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಘಟನೆಯಿಂದಾಗಿ ಹಾಸ್ಟೆಲ್‌ನಲ್ಲಿ ತಂಗಿರುವ ವಿದ್ಯಾರ್ಥಿನಿಯರ ಪೋಷಕರು ಗಾಬರಿಯಾಗಿ ಹಾಸ್ಟೆಲ್ ಮುಂದೆ ಜಮಾಯಿಸಿದ್ದರು.
ಪಾವಗಡದಲ್ಲಿ ನೀರವ ಮೌನ
ಮೂಲತಃ ಪಾವಗಡ ತಾಲೂಕಿನ ಪತಂಜಲಿ ನಗರದ ರಮೇಶ್ ಏಕೈಕ ಪುತ್ರಿಯಾದ ಗೌತಮಿಯನ್ನು ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು, ಸಂಬಂಧಿಕರು ಮಧ್ಯರಾತ್ರಿ 2 ಗಂಟೆ ಸಮಯದಲ್ಲೇ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಈ ಘಟನೆಯಿಂದಾಗಿ ಪಾವಗಡದಲ್ಲಿ ನೀರವ ಮೌನ ಆವರಿಸಿದೆ. ಗೌತಮಿ ಮನೆಗೆ ಬೀಗ ಹಾಕಿದ್ದರೂ ಅಲ್ಲಿ ಸ್ಥಳೀಯರು ಜಮಾಯಿಸಿದ್ದರು. ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಡಿಸಿಪಿ ರೋಹಿಣಿ, ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಗೌತಮಿ ವ್ಯಾಸಂಗ ಮಾಡುತ್ತಿದ್ದ ಕಾಲೇಜು ಹಾಗೂ ಹಾಸ್ಟೆಲ್‌ಗೆ ಭೇಟಿ ನೀಡಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಸ್ಥಳಕ್ಕೆ ಜಾರ್ಜ್ ಭೇಟಿ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಜಾರ್ಜ್ ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲೇ ಇದ್ದ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಂದ ಮಾಹಿತಿ ಪಡೆದು ಆರೋಪಿ ಬಂಧನಕ್ಕೆ ಕ್ಷಿಪ್ರ ಕಾರ್ಯಾಚರಣೆಗೆ ಸೂಚನೆ ನೀಡಿದರು. ನಂತರ ಕಮೀಷನರ್ ಎಂ.ಎನ್.ರೆಡ್ಡಿ ಮಾತನಾಡಿ, ಈಗಾಗಲೇ ಆರೋಪಿಯ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರ ಬಂಧಿಸುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿನಿ ಹತ್ಯೆಗೆ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ. ಗೌತಮಿ ಅವರ ಮುಖಕ್ಕೆ ಹಾಗೂ ತಲೆಗೆ ಗುಂಡು ತಗುಲಿದೆ. ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡಿರುವ ಸಿರಿಶಾ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳಾ ಹಾಸ್ಟೆಲ್‌ಗೆ ಮಹೇಶ್ ಬಂದಿದ್ದೇಗೆ?
ಬೆಂಗಳೂರು: ಸಾಮಾನ್ಯವಾಗಿ ಮಹಿಳಾ ಹಾಸ್ಟೆಲ್‌ಗಳಿಗೆ ರಾತ್ರಿ 10ರ ನಂತರ ಹೊರಗಿನವರು ಪ್ರವೇಶಿಸಲು ಅವಕಾಶವಿರುವುದಿಲ್ಲ ಮತ್ತು ವಾರ್ಡನ್‌ಗಳೂ ಸಹ ವಿದ್ಯಾರ್ಥಿನಿಯರ ಜೊತೆಗೆ ಇರುತ್ತಾರೆ. ಆದರೂ ಮಹೇಶ ಹೇಗೆ ಒಳನುಸುಳಿದ್ದು ಹೇಗೆ?
ಮೂಲಗಳ ಪ್ರಕಾರ ಮಹೇಶ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಆತನಿಗೆ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಪರಿಚಯವಿತ್ತು ಎನ್ನಲಾಗಿದೆ. ವಿದ್ಯಾರ್ಥಿನಿಯರು ಕೆಲ ಸಂದರ್ಭಗಳಲ್ಲಿ ತಿಂಡಿ, ಔಷಧಗಳನ್ನು ಕೇಳಿದರೆ ಅದನ್ನು ತಂದುಕೊಡುತ್ತಿದ್ದ ಎನ್ನಲಾಗಿದೆ. ಇದೇ ಸಲಿಗೆಯಿಂದ ನಿನ್ನೆ ರಾತ್ರಿಯೂ ಹಾಸ್ಟೆಲ್‌ನೊಳಗೆ ಮಹೇಶ್ ಪ್ರವೇಶಿಸಿ ಅಡಗಿಕೊಂಡಿದ್ದ ಎಂದು ಹೇಳಲಾಗಿದೆ.
ಗೌತಮಿಗೆ ಯಾವುದೇ ಲವ್ ಅಫೇರ್ ಇಲ್ಲ
ಬೆಂಗಳೂರು: ಪರೀಕ್ಷೆ ಮುಗಿದ ನಂತರವೂ ತಾಂತ್ರಿಕ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಗೌತಮಿ ಐಐಟಿ ಮತ್ತು ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ನನ್ನ ಮಗಳಿಗೆ ಲವ್ ಅಫೇರ್ ಇರಲಿಲ್ಲ, ಕೆಲವರು ಮಗಳ ಹೆಸರಿಗೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದ್ದಾರಷ್ಟೇ ಎಂದು ಮೃತಳ ತಂದೆ ಟಿ.ರಮೇಶ್ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಕಳಂಕ ಹಚ್ಚಬೇಡಿ ಎಂದು ಮನವಿ ಮಾಡಿದರು. ಕಾಲೇಜಿನ ಪ್ರಾಂಶುಪಾಲರೂ ಸಹ ಇಂತಹ ದುರ್ಘಟನೆ ನಡೆದಿರುವ ಬಗ್ಗೆ ಮಾಹಿತಿ ನೀಡಲೇ ಇಲ್ಲ. ಮಾಧ್ಯಮಗಳಲ್ಲಿ ನೋಡಿ ಆಘಾತಗೊಂಡು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಮತ್ತೊಬ್ಬ ವಿದ್ಯಾರ್ಥಿನಿ ಬಚಾವ್
ಬೆಂಗಳೂರು: ಗೌತಮಿ ಹಾಗೂ ಆಕೆಯ ಸ್ನೇಹಿತೆ ಮೇಲೆ ನಾಡ ಪಿಸ್ತೂಲಿನಿಂದ ಗುಂಡುಹಾರಿಸಿಬರುವಾಗ ಕಾರಿಡಾರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಮಹೇಶ್‌ನಿಗೆ ಎದುರಾಗಿದ್ದಳು ಎಂದು ಹೇಳಲಾಗಿದೆ. ಆತಂಕದ ಛಾಯೆಯಲ್ಲಿದ್ದ ಆತ ಆಕೆಯನ್ನು ನೋಡಿ ತಕ್ಷಣ ಪಿಸ್ತೂಲು ತೋರಿಸಿ ಗುಂಡು ಹಾರಿಸಲು ಮುಂದಾದರೂ ಅದು ಫೈರ್ ಆಗಿಲ್ಲ. ತಕ್ಷಣ ಆಕೆಯನ್ನು ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮಹೇಶ್ ಕೈಯಲ್ಲಿ ಪಿಸ್ತೂಲು ನೋಡಿ ಗಾಬರಿಯಿಂದ ಕಿರುಚಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ವಿದ್ಯಾರ್ಥಿನಿ ಹತ್ಯೆ ಪ್ರಕರಣ : ಕಾಲೇಜು ಲೈಸೆನ್ಸ್ ರದ್ದಿಗೆ ಆಗ್ರಹ
ಬೆಂಗಳೂರು: ಪ್ರಗತಿ ಕಾಲೇಜಿನ ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ಗೆ ನುಗ್ಗಿ ಹತ್ಯೆಗೈದಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಜತೆಗೆ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡದ ಈ ಕಾಲೇಜಿನ ಲೈಸೆನ್ಸ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕಾಲೇಜು ಮುಂದೆ ದಲಿತ ಸಂಘರ್ಷ ಭೀಮಾ ಸಮಿತಿ, ಕೆಜೆಎಸ್ ಮತ್ತು ಸಿಪಿಐ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ವಿದ್ಯಾರ್ಥಿನಿಗೆ ಆದಂತೆ ಇತರೆ ವಿದ್ಯಾರ್ಥಿನಿಯರಿಗೆ ಆಗಬಾರದು. ಈ ಹಾಸ್ಟೆಲ್‌ನಲ್ಲಿ ಇಂತಹ ಘಟನೆ ನಡೆದಿರುವುದಕ್ಕೆ ಆಡಳಿತ ಮಂಡಳಿಯೇ ಹೊಣೆ. ಈ ಹಿನ್ನೆಲೆಯಲ್ಲಿ ಈ ಕಾಲೇಜಿನ ಅನುಮತಿಯನ್ನು ರದ್ದುಗೊಳಿಸಬೇಕೆಂದು ಕೆಜೆಎಸ್‌ನ ಪರಮೇಶ್ ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗುತ್ತ ಆರೋಪಿಯನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕ್ಷಿಪ್ರ ಕಾರ್ಯಾಚರಣೆ:ಆರೋಪಿ ಬಂಧನ
ಘಟನೆ ನಡೆದ ನಂತರ ಎಚ್ಚೆತ್ತುಕೊಂಡಿದ್ದ ಪೊಲೀಸರು ಬಿ.ನಾರಾಯಣಪುರ ಬಳಿ ಅಕ್ಕನ ಮನೆಯಲ್ಲಿ ಅಡಗಿದ್ದ ಆರೋಪಿ ಮಹೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಆತನ ಮೊಬೈಲ್ ಹಾಗೂ ಸಂಬಂಧಿಕರ ಮನೆಯ ಬಗ್ಗೆ ಮಾಹಿತಿ ಕಲೆ ಹಾಕಿ ದಾಳಿ ನಡೆಸಿದ ಸಂದರ್ಭದಲ್ಲಿ ಆತ ಸಿಕ್ಕಿ ಬಿದ್ದಿದ್ದಾನೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಪಿಸ್ತೂಲನ್ನು ಕೂಡ ವಶಪಡಿಸಿಕೊಳ್ಳಲಾಗಿದ್ದು, ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.