ಬೆಂಗಳೂರು, ಏ.1- ರಾಜ್ಯ ಹೈಕೋರ್ಟ್ ಆದೇಶದಂತೆ ನಿಗದಿತ ಅವಧಿಯೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲಾಗುವುದೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ನಿಗದಿತ ಅವಧಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಚುನಾವಣೆ ಮುಂದೂಡುವ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ. ಬಿಬಿಎಂಪಿಯನ್ನು ವಿಭಜನೆ ಮಾಡುವ ಉದ್ದೇಶವಿತ್ತು.
ಹೈಕೋರ್ಟ್ ಆದೇಶವನ್ನು ಪಾಲಿಸುವ ಮೂಲಕ ಸದ್ಯಕ್ಕೆ ಬಿಬಿಎಂಪಿ ವಿಭಜನೆ ಪ್ರಸ್ತಾವವನ್ನು ಕೈಬಿಟ್ಟು ಚುನಾವಣೆ ನಡೆಸುವ ಕಡೆ ಗಮನಹರಿಸಲಾಗುವುದು ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಒದಗಿಸಲಾಗಿದೆ. ರಾಜೀವ್‌ಗಾಂಧಿ ಪ್ರಧಾನಿ ಆಗಿದ್ದಾಗ ಮಹಿಳಾ ಮೀಸಲಾತಿ ಜಾರಿಗೆ ಬಂದಿತ್ತು ಎಂದರು. ಮಹಿಳೆಯರ ಸ್ವಂತ ಶಕ್ತಿಜತೆ ಮೀಸಲು ಸೌಲಭ್ಯ ಕೂಡ ಅಗತ್ಯ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸಲಾಗುವುದು. ಮಹಿಳೆಯರು ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕ, ಚಾಲಕ, ಮ್ಯಾಕನಿಕ್ ಹುದ್ದೆ ಕೂಡ ಮಹಿಳೆಯರು ನಿರ್ವಹಿಸುತ್ತಿದ್ದಾರೆ. ಒಟ್ಟು 2743 ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಕೆಎಸ್‌ಆರ್‌ಟಿಸಿಯಲ್ಲಿ ಅಧಿಕಾರಿ ಸಿಬ್ಬಂದಿ ಸಂಖ್ಯೆ 37,569 ಮಂದಿಯಿದ್ದು, ಇದರಲ್ಲಿ ಶೇ.7.3ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆಂದರು. ರಾತ್ರಿ ತಂಗುವ ಬಸ್ಗ್‌ಳಲ್ಲಿ ಮಹಿಳಾ ನಿರ್ವಾಹಕಿಯರನ್ನು ನಿಯೋಜಿಸುವುದಿಲ್ಲ. ಒಂದು ವೇಳೆ ಅಪೇಕ್ಷೆಪಟ್ಟು ಲಿಖಿತ ಮನವಿ ಸಲ್ಲಿಸಿದರೆ ಮಾತ್ರ ರಾತ್ರಿ ಬಸ್‌ಗಳು ತಂಗುವ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರುಗಳಿಗಾಗಿ ಮಹಿಳಾ ದೂರು ನಿರ್ವಹಣಾ ಸಮಿತಿಯನ್ನು ತೆರೆಯಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
15 ವಿಭಾಗದ ಮಹಿಳಾ ನಿರ್ವಾಹಕಿಯರು, ಮಹಿಳಾ ತಾಂತ್ರಿಕ ಸಿಬ್ಬಂದಿ ಸೇರಿದಂತೆ 30 ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಇದೇ ವೇಳೆ ಉಚಿತ ನೇತ್ರ ತಪಾಸಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾದ ಲೋಹಿತ್ ಡಿ.ನಾಯ್ಕರ್, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್ ಕಠಾರಿಯಾ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಉಪಾಧ್ಯಕ್ಷ ಡಾ.ವೆಂಕಟರಮಣ, ನಟಿ ಸಂಜನಾ, ಗಾಯಕಿ ಸಂಗೀತಕಟ್ಟಿ, ಬರಹಗಾರ್ತಿ ಗೀತಾ ಮತ್ತಿತರರು ಪಾಲ್ಗೊಂಡಿದ್ದರು.