ಬೆಂಗಳೂರು, ಮಾ.30-ತನ್ನ ಸಮಯಪ್ರಜ್ಞೆಯಿಂದ ಹರಿಹರ-ಚಿತ್ರದುರ್ಗ ಪ್ಯಾಸೆಂಜರ್ ರೈಲು ದುರಂತ ತಪ್ಪಿಸಿದ 4ನೇ ಗತರಗತಿ ವಿದ್ಯಾರ್ಥಿ ದಾವಣಗೆರೆಯ ಅವರೆಗೆರೆ ಸಿದ್ದೇಶ್‌ನನ್ನು ರಾಜ್ಯ ಸರ್ಕಾರದಿಂದ ಪುರಸ್ಕರಿಸಲು ಪರಿಶೀಲನೆ ನಡೆಸಲಾಗಿದೆ ಎಂದು ವಾರ್ತಾ ಸಚಿವ ಆರ್.ರೋಷನ್‌ಬೇಗ್ ವಿಧಾನಪರಿಷತ್‌ಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು 4ನೇ ತರಗತಿ ವಿದ್ಯಾರ್ಥಿ ಸಿದ್ದೇಶ್ ಎಂಬ ಬಾಲಕ ಅವರೆಗೆರೆ ಬಳಿ ಇರುವ ಟೌನ್‌ಶಿಪ್ ಬಳಿ ಹಳಿ ಬಿರುಕು ಬಿಟ್ಟಿರುವುದನ್ನು
ಗಮನಿಸಿ ಹರಿಹರ-ದುರ್ಗ ಪ್ಯಾಸೆಂಜರ್ ರೈಲು ಬರುತ್ತಿದ್ದ ವೇಳೆ ತಾನು ಧರಿಸಿಕೊಂಡಿದ್ದ ಅಂಗಿಯನ್ನು ಕೋಲಿಗೆ ಕಟ್ಟಿ ಸಿಗ್ನಲ್ ತೋರಿಸಿ ರೈಲು ನಿಲ್ಲಿಸಿ ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದನ್ನು ರೈಲ್ವೆ ಇಲಾಖೆ ಪ್ರಶಂಸಿಸಿ ಗೌರವಿಸಿದೆ. ಈ ಬಾಲಕನ ಸಮಯ ಪ್ರಜ್ಞೆ ಪರಿಗಣಿಸಿ ರಾಜ್ಯ ಸರ್ಕಾರದಿಂದ ಸೂಕ್ತ ಪುರಸ್ಕಾರ ನೀಡಲು ಪರಿಶೀಲಿಸಲಾಗುವುದು ಹಾಗೂ ಕೇಂದ್ರದಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುವುದೆಂದರು.