* ಎಚ್. ಮಹೇಶ್
ವರ್ಲ್ಡ್ ಕಪ್ ಸೀಸನ್‌ಗೆ ಶುಭಂ ಹೇಳುವ ಸಮಯ ಬಂದಿದೆ. ವರ್ಲ್ಡ್ ಕಪ್ ಕ್ರಿಕೆಟ್ ನಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾಗಳು ಗೆಲ್ಲುವುದಿಲ್ಲ ಎಂಬ ಅಭಿಪ್ರಾಯ ಸುಳ್ಳಾಗಿದೆ. ಅದಕ್ಕೆ ಉದಾಹರಣೆ ಇತ್ತೀಚೆಗೆ ಬಿಡುಗಡೆಯಾದ ಶಶಾಂಕ್ ನಿರ್ದೇಶನದ ‘ಕೃಷ್ಣ ಲೀಲಾ’ ಹಾಗೂ ಸಂತೋಷ್ ನಿರ್ದೇಶನದ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಚಿತ್ರಗಳು.
ಇಂಡಿಯಾ ಹಾಗೂ ಆಸೀಸ್ ನಡುವಿನ ಕ್ರಿಕೆಟ್ ಪಂದ್ಯದ ದಿನ ಬೆಂಗಳೂರಿನ ಅನೇಕ ರೋಡ್‌ಗಳು ಖಾಲಿ ಹೊಡೆಯುತ್ತಿದ್ದವು. ಆದರೆ ಚಿತ್ರಮಂದಿರಗಳು ಭರ್ತಿಯಾಗಿದ್ದವು ಎಂಬುದನ್ನು ನಂಬಲೇಬೇಕು. ಕಳೆದ ಶುಕ್ರವಾರ ಮಾರ್ಚ್ 20ರಂದು ‘ಕೃಷ್ಣಲೀಲಾ’ ಚಿತ್ರ ಬಿಡುಗಡೆಯಾಗಿತ್ತು. ಒಂದೇ ದಿನ ಆ ಚಿತ್ರ ಬರೋಬ್ಬರಿ 3.50 ಕೋಟಿ ರೂ ಗಳಿಸಿದೆ.
‘ವರ್ಲ್ಡ್ ಕಪ್ ಕ್ರಿಕೆಟ್, ವಿದ್ಯಾರ್ಥಿಗಳ ಪರೀಕ್ಷೆ, ಡಿ.ಕೆ.ರವಿ ಅವರ ಸಾವಿನ ಇಶ್ಯೂ ಇದ್ದರೂ ನಮ್ಮ ಚಿತ್ರ ಉತ್ತಮ ಗಳಿಕೆ ಕಂಡಿದೆ. ಕನ್ನಡ ಸಿನಿಮಾ ಮಾತ್ರ ಇಷ್ಟರಮಟ್ಟಿಗೆ ಹಣ ಗಳಿಸಿದೆ ಬಿಟ್ಟರೆ ಬೇರೆ ಯಾವ ಸಿನಿಮಾ ಕೂಡ ಇಷ್ಟು ಹಣ ಗಳಿಸಿಲ್ಲ. ಇದು ನಿಜಕ್ಕೂ ಹೆಮ್ಮೆಯ ವಿಷಯ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಶಾಂಕ್.
ಯಶ್ ಅಭಿನಯದ ‘ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ’ ಚಿತ್ರ ಕೂಡ ಇದೇ ರೀತಿ ದಾಖಲೆ ನಿರ್ಮಿಸಿತ್ತು. ಅದಕ್ಕೆ ವಿತರಕರು ಕೊಡುವ ವಿಶ್ಲೇಷಣೆ ಈ ರೀತಿ ಇದೆ : ರಾಮಾಚಾರಿ ಸಿನಿಮಾ ತೆರೆಕಂಡಾಗ ಅಮೀರ್ ಖಾನ್ ಅಭಿನಯದ ಪಿ.ಕೆ.ಚಿತ್ರ ತೆರೆಕಂಡಿತ್ತು. ಪಿ.ಕೆ ಹವಾ ಮುಂದೆ ಕನ್ನಡ ಸಿನಿಮಾದ ಗಳಿಕೆ ಏನೇನೂ ಇಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರಾಮಾಚಾರಿ ಯಾವ ಮಟ್ಟಕ್ಕೆ ಹಿಟ್ ಆಯಿತು ಎಂದರೆ ಅಮೀರ್ ಖಾನ್ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಿತ್ತು. ಇಂದಿಗೂ ರಾಮಾಚಾರಿ ಸಿನಿಮಾದ ಕಲೆಕ್ಷನ್ ಉತ್ತಮ ಸ್ಥಿತಿಯಲ್ಲೇ ಇದೆ. ಕೃಷ್ಣ ಲೀಲಾ ಹಾಗೂ ರಾಮಾಚಾರಿ ಸಿನಿಮಾಗಳು ಕನ್ನಡ ಚಿತ್ರರಂಗ ಹೆಸರನ್ನು ಉತ್ತಂಗಕ್ಕೆ ಕರೆದುಕೊಂಡು ಹೋಗುತ್ತವೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ವಿತರಕ ಎನ್. ನಾಗಪ್ರಸಾದ್.
ಕನ್ನಡ ಸಿನಿಮಾಗಳ ಮೇಲೆ ಜನರಿಗೆ ಮತ್ತೆ ಭರವಸೆ ಮೂಡಿದೆ. ಮುಂಗಾರು ಮಳೆ, ದುನಿಯಾ ಸಿನಿಮಾಗಳು ಹಿಟ್ ಆದಾಗ ಕನ್ನಡ ಚಿತ್ರರಂಗದಲ್ಲಿ ಇದೇ ರೀತಿಯ ವಾತಾರವಣ ನಿರ್ಮಾಣವಾಗಿತ್ತು. ಈಗ ಮತ್ತೆ ಅದು ಮರುಕಳಿಸಿದೆ. ವರ್ಲ್ಡ್ ಕಪ್ ಫೀವರ್ ನಡುವೆಯೂ ಕನ್ನಡ ಸಿನಿಮಾಗಳ ಗಳಿಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂಬುದು ಕನ್ನಡ ಚಿತ್ರಗಳ ಮೇಲೆ ಬಂಡವಾಳ ಹೂಡಿಕೆ ಮಾಡುವವರಿಗೆ ಮತ್ತೆ ನಂಬಿಕೆ ಬಂದಂತೆ ಆಗಿದೆ.
ಕೃಷ್ಣ ಲೀಲಾ ಚಿತ್ರ ಎರಡನೇ ವಾರದ ಕಡೆ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರ ಮೊದಲ ವಾರದಲ್ಲಿ 135 ಕೇಂದ್ರಗಳಲ್ಲಿ ಬಿಡುಗಡೆಯಾಗಿತ್ತು. ಈಗ ಇದೇ ಚಿತ್ರ ಎರಡನೇ ವಾರದಲ್ಲಿ 160 ಕೇಂದ್ರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಚಿತ್ರಗಳಿಗೆ ಬಂದಿರುವ ಬೇಡಿಕೆ ಎಂದು ಕಪಾಲಿ ಚಿತ್ರಮಂದಿರದ ಮೇನೇಜರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ವರ್ಲ್ಡ್ ಕಪ್, ಫೆಸ್ಟಿವಲ್ ಸೀಸನ್, ಪರೀಕ್ಷೆಗಳು ಇದ್ದರೂ ಕನ್ನಡ ಸಿನಿಮಾಗಳ ಕಲೆಕ್ಷನ್ ಕಡಿಮೆ ಆಗಿಲ್ಲ. ರಾಮಾಚಾರಿ ಹಾಗೂ ಕೃಷ್ಣ ಲೀಲಾ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ. – ಶಶಾಂಕ್, ನಿರ್ದೇಶಕ.