ಮಡಿಕೇರಿ: ಕುಡಿದ ಅಮಲಿನಲ್ಲಿ ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ಅದನ್ನು ತನ್ನ ಪತ್ನಿಯೇ ಅಡಗಿಸಿಟ್ಟಿದ್ದಾಳೆಂದು ಭಾವಿಸಿ ಆಕೆಗೆ ಕಬ್ಬಿಣದ ರಾಡಿನಿಂದ ಹೊಡೆದು ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.
ಮಡಿಕೇರಿಯ ನೀರುಕೊಲ್ಲಿ ಗ್ರಾಮದ ಕೂಲಿ ಕಾರ್ಮಿಕ ಗಣಪತಿ ಎಂಬಾತ ತನ್ನ ಮೊಬೈಲ್ ಕಳೆದುಕೊಂಡಿದ್ದನೆಂದು ಹೇಳಲಾಗಿದ್ದು, ಕುಡಿಯಲು ಹೋದ ವೇಳೆ ಅದನ್ನು ಬಿಟ್ಟು ಬಂದಿದ್ದ ಆತ ಮನೆಯಲ್ಲಿ ಪತ್ನಿಗೆ ಮೊಬೈಲ್ ನೀಡುವಂತೆ ಕೇಳಿದ್ದಾನೆ.
ತನ್ನ ಬಳಿ ಇಲ್ಲವೆಂದು ಪತ್ನಿ ಚಂದ್ರಾವತಿ ಹೇಳಿದಾಗ ಕುಡಿದ ಅಮಲಿನಲ್ಲಿದ್ದ ಗಣಪತಿ ಕೋಪದ ಭರದಲ್ಲಿ ಕಬ್ಬಿಣದ ರಾಡಿನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಇದರಿಂದಾಗಿ ಚಂದ್ರಾವತಿ ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿ ಗಣಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.