ಮನೋರಂಜನೆ

ನ್ಯೂಜಿಲೆಂಡ್‌ ಯಶೋಗಾಥೆ

Pinterest LinkedIn Tumblr

new

ಆಕ್ಲಂಡ್‌ನ ಈಡನ್ ಪಾರ್ಕ್‌ ಕ್ರೀಡಾಂಗಣದ ಮಧ್ಯಭಾಗದಲ್ಲಿ ಗ್ರಾಂಟ್‌ ಎಲಿಯಟ್‌ ಮತ್ತು ಡೇನಿಯಲ್‌ ವೆಟೋರಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸುತ್ತಿದ್ದರೆ, ಅಲ್ಪ ದೂರದಲ್ಲಿ ಡೇಲ್‌ ಸ್ಟೇಯ್ನ್‌ ಗರಬಡಿದವರಂತೆ ಕುಳಿತಿದ್ದರು. ನಿರಾಸೆ, ಆಘಾತ ಅವರ ಮುಖದಲ್ಲಿ ಎದ್ದುಕಾಣುತ್ತಿತ್ತು. ಪ್ರತಿ ವಿಶ್ವಕಪ್‌ ಟೂರ್ನಿ ಅಭಿಮಾನಿಗಳಿಗೆ ಕೆಲವೊಂದು ಸ್ಮರಣೀಯ ದೃಶ್ಯಗಳನ್ನು ನೀಡುತ್ತದೆ. ಈ ಮೇಲೆ ವಿವರಿಸಿದ ಘಟನೆ 2015ರ ವಿಶ್ವಕಪ್‌ನಲ್ಲಿ ಮೂಡಿಬಂದ ಸ್ಮರಣೀಯ ದೃಶ್ಯಗಳಲ್ಲೊಂದು.

ಈಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಪಡೆಯಲು ನ್ಯೂಜಿಲೆಂಡ್‌ಗೆ ಕೊನೆಯ ಎರಡು ಎಸೆತಗಳಲ್ಲಿ ಐದು ರನ್‌ಗಳು ಬೇಕಿದ್ದವು. ಸ್ಟೇಯ್ನ್‌ ಬೌಲ್‌ ಮಾಡಿದ ಚೆಂಡು ಎಲಿಯಟ್‌ ಬ್ಯಾಟ್‌ನ ಮಧ್ಯಭಾಗಕ್ಕೆ ಅಪ್ಪಳಿಸಿ ಲಾಂಗ್ ಆನ್‌ ಬೌಂಡರಿ ಗೆರೆ ಮೇಲಿಂದ ಗ್ಯಾಲರಿಗೆ ಹೋಗಿ ಬಿದ್ದಾಗ ಕಿವೀಸ್‌ ಕ್ರಿಕೆಟ್‌ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ಸೃಷ್ಟಿಯಾಗಿತ್ತು.

ಅದೊಂದು ಸಾಮಾನ್ಯ ಸಿಕ್ಸರ್‌ ಆಗಿರಲಿಲ್ಲ. ಗ್ರಾಂಟ್‌ ಎಲಿಯಟ್‌ ಅವರ ಕ್ರಿಕೆಟ್‌ ಜೀವನದ ಅತ್ಯಂತ ಬೆಲೆಯುಳ್ಳ ಹೊಡೆತ ಅದಾಗಿತ್ತು. 1975 ರಿಂದಲೂ ನ್ಯೂಜಿಲೆಂಡ್‌ ತಂಡವನ್ನು ಕಾಡುತ್ತಿದ್ದ ‘ಭೂತ’ವನ್ನು ಎಲಿಯಟ್‌ ಆ ಸಿಕ್ಸರ್‌ ಮೂಲಕ ಹೊಡೆದೋಡಿಸಿದ್ದರು. ಹೌದು. ಕಿವೀಸ್‌ ತಂಡ ವಿಶ್ವಕಪ್‌ನಲ್ಲಿ ಈ ಹಿಂದೆ ಆರು ಸಲ ಸೆಮಿಫೈನಲ್‌ವರೆಗೆ ಪ್ರವೇಶಿಸಿದ್ದರೂ, ಫೈನಲ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಗಿತ್ತು. ಈ ಬಾರಿ ಸೆಮಿ ‘ತಡೆ’ಯನ್ನು ದಾಟಿದೆ. ಫೈನಲ್‌ ಪಂದ್ಯದ ಅನುಭವವನ್ನು ಮೊದಲ ಬಾರಿ ಪಡೆದುಕೊಂಡಿದೆ.

ತವರು ನೆಲದಲ್ಲಿ ನಡೆದ  ವಿಶ್ವಕಪ್‌ಗೆ ನ್ಯೂಜಿಲೆಂಡ್‌ ತಕ್ಕ ರೀತಿಯಲ್ಲಿ ಸಜ್ಜಾಗಿತ್ತು. ಅಂಗಳದಲ್ಲಿ ಈ ತಂಡ ನೀಡಿದ ಆಟವೇ ಇದಕ್ಕೆ ಸಾಕ್ಷಿ. ಸಂಘಟಿತ ಪ್ರಯತ್ನವೇ ಕಿವೀಸ್‌ ತಂಡದ ಯಶಸ್ಸಿನ ಗುಟ್ಟು. ಯುವ ಹಾಗೂ ಅನುಭವಿ ಆಟಗಾರರು ಬ್ರೆಂಡನ್‌ ಮೆಕ್ಲಮ್‌ ನಾಯಕತ್ವದಡಿ ಒಂದು ತಂಡವಾಗಿ ಆಡಲು ಯಶಸ್ವಿಯಾದರು.

ಹಿಂದಿನಿಂದಲೇ ತಯಾರಿ
2011ರ ವಿಶ್ವಕಪ್‌ ಬಳಿಕ ನ್ಯೂಜಿಲೆಂಡ್‌ ತಂಡ ಕೈಗೊಂಡಿದ್ದ ಎಲ್ಲ ಯೋಜನೆ ಮತ್ತು ಬದಲಾವಣೆಗಳು 2015ರ ವಿಶ್ವಕಪ್‌ ಟೂರ್ನಿಯನ್ನು ಗುರಿಯಾಗಿಸಿಯೇ ಇತ್ತು. ಈ ಪ್ರತಿಷ್ಠಿತ ಟೂರ್ನಿಗೆ ನಾಲ್ಕು ವರ್ಷಗಳ ಹಿಂದಿನಿಂದಲೇ ಸಿದ್ಧತೆ ನಡೆಸುತ್ತಾ ಬಂದಿತ್ತು. ಅತ್ಯುತ್ತಮ ಸ್ಥಿತಿಯಲ್ಲಿದ್ದರೂ ಹಠಾತ್‌ ಕುಸಿತ ಅನುಭವಿಸಿ ಸೋಲಿನ ಹಾದಿ ಹಿಡಿಯುವುದು ನ್ಯೂಜಿಲೆಂಡ್‌ ತಂಡದ ಪ್ರಮುಖ ದೌರ್ಬಲ್ಯವಾಗಿತ್ತು.  ರನ್‌ ಬೆನ್ನಟ್ಟಿ ಗೆಲುವು ಪಡೆಯುವಲ್ಲೂ ಈ ತಂಡಕ್ಕೆ ಹೆಚ್ಚಿನ ಯಶಸ್ಸು ದೊರೆತಿರಲಿಲ್ಲ.

ಈ ಎರಡು ದೌರ್ಬಲ್ಯಗಳಿಂದ ಹೊರಬರಲು  ಹೆಚ್ಚಿನ ಗಮನ ನೀಡಿತ್ತು. ಸಾಕಷ್ಟು ತಯಾರಿಯನ್ನೂ ನಡೆಸಿತ್ತು. ಅದರ ಫಲ ವಿಶ್ವಕಪ್‌ ಟೂರ್ನಿಯಲ್ಲಿ ಕಂಡುಬಂದಿದೆ.  ಕಿವೀಸ್ ತಂಡ ಲೀಗ್‌ ಹಂತದ ಆರು ಪಂದ್ಯಗಳಲ್ಲಿ ಐದರಲ್ಲೂ ಗುರಿ ಬೆನ್ನಟ್ಟಿ ಗೆಲುವು ಪಡೆದಿದೆ! ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ ಸವಾಲಿನ ಗುರಿಯನ್ನೂ ಯಶಸ್ವಿಯಾಗಿ ಬೆನ್ನಟ್ಟಿತ್ತು.

ಜವಾಬ್ದಾರಿ ನಿರ್ವಹಿಸಿದ ಆಟಗಾರರು
ನ್ಯೂಜಿಲೆಂಡ್‌ನ ಎಲ್ಲ ಆಟಗಾರರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಮೆಕ್ಲಮ್‌ ಬಿರುಸಿನ ಆರಂಭ ನೀಡಿ ಇತರ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತಿದ್ದರು. ಸೆಮಿಫೈನಲ್‌ನಲ್ಲಿ 26 ಎಸೆತಗಳಲ್ಲಿ 59 ರನ್‌ ಗಳಿಸಿ ತಂಡದ ಇನಿಂಗ್ಸ್‌ಗೆ ಭದ್ರ ತಳಹದಿ ನಿರ್ಮಿಸಿದ್ದರು. ಆ ತಳಹದಿಯ ಮೇಲೆ ಇತರ ಬ್ಯಾಟ್ಸ್‌ಮನ್‌ಗಳು ಸ್ಫೋಟಕ ಆಟ ಆಡಿದ್ದರು.

ಕಿವೀಸ್‌ ಆಟಗಾರರ ಬದ್ಧತೆ ಹೇಗಿತ್ತು ಎಂಬುದಕ್ಕೆ 36ರ ಹರೆಯದ ಡೇನಿಯಲ್‌ ವೆಟೋರಿ ಆಟವೇ ನಿದರ್ಶನ. ಅವರು ವೃತ್ತಿಜೀವನದ ಕೊನೆಯ ಟೂರ್ನಿಯಲ್ಲಿ ಅದ್ಭುತವಾಗಿ ಆಡಿದರು.  ಯುವ ಆಟಗಾರರಿಗಿಂತ ತಾನೇನು ಕಡಿಮೆಯಿಲ್ಲ ಎಂಬುದನ್ನು ಸಾಬೀತು ಮಾಡಿದರು. ವೆಸ್ಟ್‌ ಇಂಡೀಸ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮರ್ಲಾನ್‌ ಸ್ಯಾಮುಯೆಲ್ಸ್‌ ಅವರನ್ನು ಔಟ್‌ ಮಾಡಲು  ವೆಟೋರಿ ಹಿಡಿದ ಕ್ಯಾಚ್‌ ಅದ್ಭುತವಾಗಿತ್ತು.

ಗ್ರಾಂಟ್  ಎಲಿಯಟ್ ಮತ್ತು ಮಾರ್ಟಿನ್‌ ಗುಪ್ಟಿಲ್‌ ಅವರಂತಹ ಹೊಸ ಹೀರೊಗಳನ್ನು ನ್ಯೂಜಿಲೆಂಡ್‌ ಈ ವಿಶ್ವಕಪ್‌ ಮೂಲಕ ಕ್ರಿಕೆಟ್‌ ಜಗತ್ತಿಗೆ ಪರಿಚಯಿಸಿದೆ.  ವೆಸ್ಟ್‌ ಇಂಡೀಸ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಗುಪ್ಟಿಲ್‌ ಕಿವೀಸ್‌ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗವೂ ನಿರಾಸೆ ಉಂಟುಮಾಡಲಿಲ್ಲ. ಫೈನಲ್‌ ಹೊರತುಪಡಿಸಿ ಇತರ ಎಲ್ಲ ಪಂದ್ಯಗಳನ್ನು ತವರಿನಲ್ಲಿ ಆಡಿದ್ದು ಕೂಡಾ ನ್ಯೂಜಿಲೆಂಡ್‌ನ ಗೆಲುವಿನ ಓಟಕ್ಕೆ ನೆರವು ನೀಡಿತು. ಈ ವಿಶ್ವಕಪ್‌ನಲ್ಲಿ ದೊರೆತ ಯಶಸ್ಸು ನ್ಯೂಜಿಲೆಂಡ್‌ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸುವುದರಲ್ಲಿ ಅನುಮಾನ ಬೇಡ.
***
*ನ್ಯೂಜಿಲೆಂಡ್‌ ಈ ಹಿಂದೆ ಆರು ಸಲ ಸೆಮಿಫೈನಲ್‌ ಪ್ರವೇಶಿಸಿದ್ದರೂ, ಫೈನಲ್‌ ತಲುಪುವಲ್ಲಿ ವಿಫಲವಾಗಿತ್ತು
*ಗ್ರಾಂಟ್‌ ಎಲಿಯಟ್‌, ಮಾರ್ಟಿನ್‌ ಗುಪ್ಟಿಲ್‌ ಹೊಸ ಹೀರೊಗಳು

Write A Comment