ಬೆಂಗಳೂರು,ಮಾರ್ಚ್.30- ಅನ್ನಭಾಗ್ಯ ಯೋಜನೆಯಡಿ ಹಿಂದೆ ಒಂದು ರೂಗೆ ಕೆಜಿಯಂತೆ,ಈಗ ಉಚಿತವಾಗಿ ಅಕ್ಕಿ ನೀಡುತ್ತಿರುವುದರಿಂದ ಕೆಲಸಕ್ಕೆ ಜನ ಹೋಗುತ್ತಿಲ್ಲ. ಹೀಗಾಗಿ ನೀವು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದೀರಿ ಎಂದು ಪ್ರತಿಪಕ್ಷಗಳು ಟೀಕಿಸಿದಾಗ,ಶತಮಾನಗಳಿಂದ ಬೆವರು ಹರಿಸಿ ದುಡಿದ ವರ್ಗದವರೂ ಸ್ವಲ್ಪ ರೆಸ್ಟು ತಗಳ್ಳಲಿ ಬಿಡ್ರೀ ಎಂದು ಸಿದ್ಧರಾಮಯ್ಯ ಗದರಿದ ಬೆಳವಣಿಗೆ ವಿಧಾನಸಭೈಯಲ್ಲಿಂದು ನಡೆದಿದೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು,ಅನ್ನಭಾಗ್ಯ ಯೋಜನೆಯ ವಿವರ ನೀಡಿದಾಗ ಪ್ರತಿಪಕ್ಷಗಳ
ಹಲ ಸದಸ್ಯರು, ಈ ಯೋಜನೆ ಜಾರಿಗೆ ತಂದ ಪರಿಣಾಮವಾಗಿ ಗದ್ದೆಗಳಲ್ಲಿ ಕೆಲಸ ಮಾಡಲು ಜನ ಸಿಗುತ್ತಿಲ್ಲ ಎಂದರು. ಕೂಲಿ ಮಾಡಲು ಜನರೇ ಇಲ್ಲ.ನೀವು ಮಾಡಿದ ಯೋಜನೆಯಿಂದ ದುಡಿಯುವವರು ದುಡಿಯದಂತಾಗಿ ಹೋಯಿತು.ಹೀಗಿರುವಾಗ ಕೃಷಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಹೇಗೆ ಸಾಧ್ಯ?ಎಂದಾಗ ಸಿದ್ಧರಾಮಯ್ಯ ಇದ್ದಕ್ಕಿದ್ದಂತೆ ಗರಂ ಆದರು.
ನಾವೆಲ್ಲ ಕಾಯಕ ಮಾಡದೆಯೇ ನೆಮ್ಮದಿಯಾಗಿ ಬದುಕಿರಲಿಲ್ಲವೇ?ನಮ್ಮಂತಹ ಅನೇಕರು ಕಾಯಕವನ್ನೂ ಮಾಡಲಿಲ್ಲ.ಬೆವರನ್ನೂ ಹರಿಸಲಿಲ್ಲ.ಆದರೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಶತ ಶತಮಾನಗಳಿಂದ ಬೆವರು ಹರಿಸಿ ದುಡಿದವರು. ಅವರು ಮಾತ್ರ ಬೆವರು ಹರಿಸಬೇಕು.ಕಾಯಕ ಮಾಡದೆ ಬದುಕುವವರು ಹಾಗೇ ಬದುಕಬೇಕು ಎಂದರೆ ಹೇಗೆ?ಹೀಗಾಗಿ ಬೆವರು ಹರಿಸಿ ಕಾಯಕ ಮಾಡುವ ವರ್ಗ ಸ್ವಲ್ಪ ರೆಸ್ಟು ತಗಳ್ಳಲಿ ಬಿಡ್ರೀ ಎಂದಾಗ ಸದನದಲ್ಲಿ ಮೌನ ಆವರಿಸಿತು. ಮುಂದುವರಿದು ಮಾತನಾಡಿದ ಸಿದ್ಧರಾಮಯ್ಯ,ಕೂಲಿ ಮಾಡುವವರು ಎಲ್ಲಿಗೂ ಹೋಗಿಲ್ಲ.ಅವರು ಕೂಲಿ ಮಾಡುತ್ತಲೇ ಇದ್ದಾರೆ.ಆದರೆ ಹೆಚ್ಚಿನ ಹಣಕ್ಕೆ ಕೂಲಿ ಮಾಡುತ್ತಿದ್ದಾರೆ ಎಂದು ನುಡಿದರು. ಇಂತವರಿಗೆ ಕೆಲಸ ಮಾಡುವ ಸಲುವಾಗಿಯೇ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿದ್ದೇ ಹಿಂದಿದ್ದ ಕೇಂದ್ರದ ಯುಪಿಎ ಸರ್ಕಾರ. ಬಡವರ ಪರ ಕಾಂಗ್ರೆಸ್ ಇದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.