ಅಫರ್ಡೆಬಲ್ ಮನೆ ವಿಭಾಗದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮ್ಯಾಜಿಕ್‌ಬ್ರಿಕ್ಸ್ ಡಾಟ್ ಕಾಮ್ ಪ್ರಕಟಿಸಿರುವ ಅಪಾರ್ಟ್‌ಮೆಂಟ್ ಇಂಡೆಕ್ಸ್ ವರದಿಯಲ್ಲಿ ಗರಿಷ್ಠ ಬೇಡಿಕೆ 30-50 ಲಕ್ಷ ಮನೆ ವಿಭಾಗಕ್ಕೆ ಎಂಬುದು ತಿಳಿದು ಬಂದಿದೆ. ದೇಶದ ಐದು ಪ್ರಮುಖ ನಗರಗಳಲ್ಲಿ ಅಫರ್ಡೆಬಲ್ ಬೇಡಿಕೆ ಇರುವ ಪ್ರಮಾಣವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವುಗಳ ಪೈಕಿ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ. ಮೊದಲನೇ ಸ್ಥಾನ ಹೈದರಾಬಾದ್‌ಗೆ ಹೋಗಿದೆ.
ಬಹುತೇಕ ಜನರು ಬೆಂಗಳೂರು ಎಂದರೆ ದುಬಾರಿ ನಗರ ಎಂದೇ ತಪ್ಪಾಗಿ ಭಾವಿಸಿರುತ್ತಾರೆ. ಆದರೆ ವಾಸ್ತವವಾಗಿ ಬೆಂಗಳೂರಿನಲ್ಲಿ 30-50 ಲಕ್ಷ ರೂ.ನೊಳಗಿನ ಮನೆಗಳ ಪೂರೈಕೆಯೇ ಹೆಚ್ಚಿದೆ. ಪ್ರಸಕ್ತ ಇಂತಹ ಮನೆಗಳು ಇಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಸರ್ಜಾಪುರ ಮತ್ತು ಬನ್ನೇರುಘಟ್ಟ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿವೆ.
ವಾಣಿಜ್ಯ ಮತ್ತು ವಸತಿ ಬೇಡಿಕೆ ಅತೀವವಾಗಿ ಹೆಚ್ಚಿರುವುದೇ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಎಂಡ್‌ಯೂಸರ್ ಸಂಖ್ಯೆ ಹೆಚ್ಚಿರುವುದು ಸ್ಥಿರವಾದ ಪ್ರಗತಿ ಸಾಧಿಸಲು ನೆರವಾಗಿದೆ. ಮಧ್ಯಮ ಆದಾಯ ವರ್ಗದ ಜನರು ಹೆಚ್ಚಿರುವುದರಿಂದ 30-50 ಲಕ್ಷ ರೂ. ಮನೆಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಬಿಲ್ಡರ್‌ಗಳು ಕೂಡ ಅಫರ್ಡೆಬಲ್ ವಿಭಾಗಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೈದರಾಬಾದ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಹೆಚ್ಚು ಅಭಿವೃದ್ಧಿ ಹೊಂದಿದ ಕುಕ್ಕಟಪಲ್ಲಿ, ಮಣಿಕೊಂಡ, ಸೈನಿಕಪುರಿ ಮೊದಲಾದ ಪ್ರದೇಶಗಳಲ್ಲೂ 30-50 ಲಕ್ಷ ರೂ.ಗಳಿಗೆ ಮನೆ ಸಿಗುತ್ತಿದೆ. ಇಲ್ಲಿರುವ ವಿಶ್ವದರ್ಜೆಯ ಮೂಲಸೌಕರ್ಯದ ಹೊರತಾಗಿಯೂ ಅತ್ಯಂತ ಹೆಚ್ಚು ಅಫರ್ಡೆಬಲ್ ನಗರವೆಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.
ಉಳಿದಂತೆ ಗಾಜಿಯಾಬಾದ್ ಮೂರನೇ ಸ್ಥಾನದಲ್ಲಿದ್ದರೆ, ಐಟಿ ಕ್ಷೇತ್ರದ ಮತ್ತೊಂದು ಕೇಂದ್ರ ಪುಣೆಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಐದನೇ ಸ್ಥಾನವನ್ನು ಅಹಮದಾಬಾದ್ ಪಡೆದುಕೊಂಡಿದೆ.