ಜ್ವರ, ಇನ್ನಿತರ ಸೋಂಕು ಅಥವಾ ಔಷಧವು ಕೂದಲ ಉದುರುವಿಕೆ ಮೇಲೆ ಹೇಗೆ ಪರಿಣಾಮ ಉಂಟು ಮಾಡುತ್ತದೆ ಎಂಬ ಬಗ್ಗೆ ಡಾ.ದಿನೇಶ್ ಜಿ.ಜಿ ಇಲ್ಲಿ ವಿವರಿಸಿದ್ದಾರೆ.
*ಜ್ವರ ಮತ್ತು ಕೂದಲು ನಷ್ಟಕ್ಕೆ ಸಂಬಂಧವಿದೆಯೇ?
ಜ್ವರ, ಸೋಂಕು ಮತ್ತು ಫ್ಲೂ, ದೀರ್ಘಾವಧಿಯಲ್ಲಿ ಕೂದಲ ಮೇಲೆ ಪರಿಣಾಮ ಬೀರುತ್ತದೆ. ತೀವ್ರ ಜ್ವರ ಅಥವಾ ಸೋಂಕು ತಗುಲಿದ ನಾಲ್ಕು ವಾರಗಳಿಂದ ಮೂರು ತಿಂಗಳ ಬಳಿಕ ನಿಮಗೆ ಅಚ್ಚರಿ ಉಂಟು ಮಾಡುವಷ್ಟು ಅಧಿಕ ಪ್ರಮಾಣದಲ್ಲಿ ಕೂದಲು ಉದುರುತ್ತದೆ.
*ಕ್ರಾಶ್ ಡಯಟ್ ಕೂದಲ ಉದುರುವಿಕೆ ಮೇಲೆ ಪರಿಣಾಮ ಬೀರುತ್ತದೆಯೇ?
ಕ್ರಾಶ್ ಡಯಟ್ ಮಾಡುವವರಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆ ಇರುತ್ತದೆ ಅಥವಾ ಅಸಹಜವಾದ ಆಹಾರ ಸೇವಿಸುವ ಪದ್ಧತಿಯು ಪ್ರೋಟೀನ್ ಅಪೌಷ್ಟಿಕತೆಯನ್ನು ಉಂಟು ಮಾಡುತ್ತದೆ. ದೇಹವು ಅದನ್ನು ಕೂದಲಿಗೆ ವರ್ಗಾಯಿಸುವ ಮೂಲಕ ಪ್ರೋಟೀನ್ ಅನ್ನು ಉಳಿಸಿಕೊಳ್ಳುತ್ತದೆ. 2-3 ತಿಂಗಳ ಬಳಿಕ ಅಧಿಕ ಪ್ರಮಾಣದಲ್ಲಿ ಕೂದಲು ಉದುರುತ್ತದೆ.
*ಕಡಿಮೆ ಪ್ರಮಾಣದ ಕಬ್ಬಿಣ ಸತ್ವ ಮತ್ತು ಕೂದಲು ಉದುರುವಿಕೆ:
ಯಾವ ವ್ಯಕ್ತಿಯ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ ಸತ್ವ ಸಿಗುವುದಿಲ್ಲವೋ ಅವರ ಫರ್ಟೈನ್ ಕೂಡ ಕಡಿಮೆಯಾಗಿರುತ್ತದೆ ಅಥವಾ ಕಬ್ಬಿಣ ಸತ್ವನ್ನು ಸಂಪೂರ್ಣವಾಗಿ ಹೀರಿಕೊಳ್ಳದಿರಬಹುದು. ಇದರ ಫಲಿತಾಂಶದಿಂದಾಗಿ ಅಧಿಕ ಪ್ರಮಾಣದಲ್ಲಿ ಕೂದಲು ಉದುರಬಹುದು. ಇದನ್ನು ಲ್ಯಾಬ್ ಪರೀಕ್ಷೆಯಿಂದ ಪತ್ತೆ ಮಾಡಬಹುದು ಮತ್ತು ಸರಿಪಡಿಸಬಹುದು.
*ಔಷಧದಿಂದ ಕೂದಲು ನಷ್ಟ:
ಕೆಲವು ಔಷಧಗಳಿಂದ ತಾತ್ಕಾಲಿಕವಾಗಿ ಕೂದಲು ಉದುರುತ್ತದೆ. ಉದಾಹರಣೆಗೆ ಅಧಿಕ ಪ್ರಮಾಣದಲ್ಲಿ ವಿಟಮಿನ್ ಎ, ಅಧಿಕ ರಕ್ತದೊತ್ತಡ, ಖಿನ್ನತೆ ಅಥವಾ ರಕ್ತ ತೆಳುವಾಗುವಿಕೆಗೆ ತೆಗದುಕೊಳ್ಳುವ ಔಷಧ ಪರಿಣಾಮ ಬೀರಬಹುದು.
*ಕ್ಯಾನ್ಸರ್ ಚಿಕಿತ್ಸೆ ಮತ್ತು ಕೂದಲು ಉದುರುವಿಕೆ
ಕೆಲವು ಕ್ಯಾನ್ಸರ್ ಚಿಕಿತ್ಸೆಗಳು ಕೂದಲ ಜೀವಕೋಶಗಳು ವಿಭಜನೆಗೊಳ್ಳುವುದನ್ನು ನಿಲ್ಲಿಸುವಂತೆ ಮಾಡುತ್ತದೆ. ಇದರ ಪರಿಣಾಮ ಕೂದಲು ತೆಳ್ಳಗಾಗಿ ತಲೆ ಬೋಳಾಗುತ್ತದೆ. ಚಿಕಿತ್ಸೆ ಪಡೆದು ಒಂದರಿಂದ ಮೂರು ವಾರವಾದ ಬಳಿಕ ಇದು ಉಂಟಾಗುತ್ತದೆ. ರೋಗಿಗಳು ಶೇ.90 ರಷ್ಟು ಪ್ರಮಾಣದಲ್ಲಿ ಕೂದಲು ಕಳೆದುಕೊಳ್ಳುತ್ತಾರೆ. ಇದನ್ನು ತಡೆಗಟ್ಟಲು ತಂಪಾಗಿರಿಸುವಂತಹ ಕ್ಯಾಪ್ ಲಭ್ಯವಿದೆ. ಇಂಥ ರೋಗಿಗಳು ವಿಗ್ ಅನ್ನು ಕೂಡ ಬಳಸಬಹುದು.