ಕರ್ನಾಟಕ

ಮೂಲ ಕಚೇರಿಗೆ ಅಧಿಕೃತವಾಗಿ ‘ಗೃಹ ಪ್ರವೇಶ’ ಮಾಡಿದ ಕಾಂಗ್ರೆಸ್

Pinterest LinkedIn Tumblr

Congress-Office

ಬೆಂಗಳೂರು, ಮಾ.25: ಪಕ್ಷಕ್ಕೆ ಶುಭವಾದರೆ ನಮಗೂ ಶುಭವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಸಿದ್ದಾರೆ. ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಗೃಹ ಪ್ರವೇಶ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಈ ಕಟ್ಟಡ ಅಸುಭವಲ್ಲ, 4 ಜನ ಮುಖ್ಯಮಂತ್ರಿಗಳು, ಒಬ್ಬರು ಪ್ರಧಾನಮಂತ್ರಿಯನ್ನು ಕೊಟ್ಟಿದೆ ಎಂದು ಹೇಳಿದರು. ಹೊಸ ಕಚೇರಿಯಲ್ಲಿ ನಿಮಗೂ ಮುಖ್ಯಮಂತ್ರಿಯಾಗುವ ಯೋಗವಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಪಕ್ಷಕ್ಕೆ ಶುಭವಾದರೆ ನನಗೂ ಶುಭವಾದಂತೆ ಎಂದು ಹೇಳುವ ಮೂಲಕ ಪರಮೇಶ್ವರ್ ಅಚ್ಚರಿ ಮೂಡಿಸಿದರು. ನನಗೂ ಶುಭವಾಗಲಿದೆ ಎಂಬ ಹೇಳಿಕೆಯನ್ನು ನೀವು ಯಾವರೀತಿಯಾದರೂ ಅರ್ಥೈಸಿಕೊಳ್ಳಬಹುದು ಎಂದು ಅವರು ಹೇಳಿದರು.

ರಂಗಸ್ವಾಮಿ ಎಂಬುವರು ಈ ಜಾಗವನ್ನು ಕಾಂಗ್ರೆಸ್‌ಗಾಗಿ ದಾನ ನೀಡಿದ್ದರು. ಸಾವಿರಾರು ಕಾರ್ಯಕರ್ತರ ದೇಣಿಗೆಯಿಂದ ಸುಭದ್ರ ಕಟ್ಟಡ ನಿರ್ಮಿಸಲಾಗಿದೆ. ಕಾಂಗ್ರೆಸ್ ವಿಭಜನೆಯಾದಾಗ ಇದು ಅನ್ಯರ ಪಾಲಾಗಿತ್ತು. 23 ವರ್ಷಗಳ ಹಿಂದೆ ಕಾಂಗ್ರೆಸ್ ಇದು ನಮ್ಮ ಆಸ್ತಿ ಎಂದು ನ್ಯಾಯಾಂಗ ಹೋರಾಟ ನಡೆಸಿತ್ತು. ಅಂತಿಮವಾಗಿ ಕೋರ್ಟ್‌ನಲ್ಲಿ ನಮ್ಮ ಪರವಾದ ತೀರ್ಪು ಬಂದಿದೆ. ಜೆಡಿಎಸ್ ನಾಯಕರು ಕೂಡ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಕಟ್ಟಡ ಬಿಟ್ಟುಕೊಟ್ಟಿದ್ದಾರೆ. ಈ ಕಾರಣಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಜೆಡಿಎಸ್ ಕಟ್ಟಡವನ್ನು ತೆರವು ಮಾಡಿದ ನಂತರ ಹೋಮ ಮಾಡಿ ಕಾಂಗ್ರೆಸ್ ಗೃಹ ಪ್ರವೇಶ ಮಾಡಲಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಅದರ ಅಗತ್ಯವೂ ಇಲ್ಲ. ಏಕೆಂದರೆ ಈ ಕಟ್ಟಡ ಅತ್ಯಂತ ಶುಭವಾಗಿದೆ. 46 ವರ್ಷಗಳ ಹಿಂದೆ ನಿರ್ಮಿಸಿದ್ದ ಇದರಲ್ಲಿ ಸಾವಿರಾರು ನಾಯಕರು ಬೆಳೆದಿದ್ದಾರೆ. ಐತಿಹಾಸಿಕ ಹಿನ್ನೆಲೆಯಿದೆ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿರುವ 14 ಘಟಕಗಳ ಪೈಕಿ ಕೆಲವನ್ನು ಇಲ್ಲಿಗೆ ಸ್ಥಳಾಂತರಿಸಲು ಚಿಂತನೆ ನಡೆದಿದೆ ಎಂದು ಪರಮೇಶ್ವರ್ ತಿಳಿಸಿದರು.

ಗೃಹ ಪ್ರವೇಶ:
46 ವರ್ಷಗಳ ನಂತರ ಕಾಂಗ್ರೆಸ್ ತಮ್ಮ ,ಮೂಲ ಕಚೇರಿಗೆ ಅಧಿಕೃತವಾಗಿ ಇಂದು ಪ್ರವೇಶಿಸಿದೆ. ಈವರೆಗೂ ಜೆಡಿಎಸ್ ವಶದಲ್ಲಿದ್ದ ಕಚೇರಿಯನ್ನು ಫೆಬ್ರವರಿಯಲ್ಲಿ ನ್ಯಾಯಾಲಯದ ತೀರ್ಪಿನ ಅನುಸಾರ ತೆರವುಗೊಳಿಸಲಾಯಿತು. ಆನಂತರ ಕಾಂಗ್ರೆಸ್ ಕಟ್ಟಡವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಕಟ್ಟಡದ ಹಿಂದಿನ ಖಾಲಿ ಜಾಗವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

46 ವರ್ಷಗಳ ಹಿಂದೆ ಪಕ್ಷ ವಿಭಜನೆಯಾದಾಗ ಕಚೇರಿ ಇಲ್ಲದಂತಾದ ಕಾಂಗ್ರೆಸ್ ಕೆಲವು ವರ್ಷಗಳವರೆಗೂ ನಗರದ ವಿವಿಧಕಡೆ ಖಾಸಗಿ ಕಟ್ಟಡದಲ್ಲಿ ಪಕ್ಷ ಸಂಘಟನೆ ಮಾಡಿತ್ತು. ರಾಮಕೃಷ್ಣ ಹೆಗಡೆ ಕಾಲದಲ್ಲಿ ಕ್ವೀನ್ಸ್ ರಸ್ತೆಯಲ್ಲಿ ಕಾಂಗ್ರೆಸ್‌ಗೆ ನಿವೇಶನ ನೀಡಲಾಗಿತ್ತು. ಅಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಪಕ್ಕದಲ್ಲೇ ಹೊಸ ಕಟ್ಟಡಕ್ಕೂ ಕಾಂಗ್ರೆಸ್ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಈಗ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಟ್ಟಡವೂ ಕಾಂಗ್ರೆಸ್‌ಗೆ ಸಿಕ್ಕಿದೆ. ಕಟ್ಟಡದಲ್ಲಿದ್ದ ಹಳೆಯ ಗ್ಲಾಸ್‌ಗಳನ್ನು ತೆಗೆದು ಹೊಸ ಗ್ಲಾಸ್ ಅಳವಡಿಸುವ ಮೂಲಕ ಹೈಟೆಕ್ ಸ್ಪರ್ಶ ನೀಡಿ ಪೈಯಿಂಟಿಂಗ್ ಮಾಡಲಾಗಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಗೃಹ ಪ್ರವೇಶ ಪೂಜೆಯಲ್ಲಿ ಭಾಗಿಯಾಗಿದ್ದರು. ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಎಸ್.ಆರ್.ಪಾಟೀಲ್, ದಿನೇಶ್‌ಗುಂಡೂರಾವ್, ಪಿ.ಟಿ.ಪರಮೇಶ್ವರ್‌ನಾಯಕ್, ರಾಜ್ಯಾಸಭಾ ಸದಸ್ಯರಾದ ರಾಜೀವ್‌ಗೌಡ, ರೆಹಮಾನ್‌ಖಾನ್, ಕಾಂಗ್ರೆಸ್ ಮುಖಂಡರಾದ ಎಂ.ವಿ.ರಾಜಶೇಖರನ್, ಎಚ್.ವಿಶ್ವನಾಥ್, ನಿಗಮ ಮಂಡಳಿಗಳ ಅಧ್ಯಕ್ಷರು ಹಾಜರಿದ್ದರು.

Write A Comment